24
“ಸರ್ವಶಕ್ತನಾದ ದೇವರು ನ್ಯಾಯತೀರ್ಪಿಗೆ ಸಮಯವನ್ನು ಗೊತ್ತುಪಡಿಸದಿರುವುದೇಕೆ?
ಆತನನ್ನು ಅರಿತವರಿಗೆ ಸಮಯವು ತಿಳಿಯದಿರುವುದೇಕೆ?
 
“ಜಮೀನಿನ ಮೇರೆಯನ್ನು ಸರಿಸುವವರೂ ಇದ್ದಾರೆ.
ದನಕುರಿಗಳನ್ನು ಅಪಹರಿಸಿಕೊಂಡು ಹೋಗುವವರೂ ಇದ್ದಾರೆ.
ಅವರು ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುವರು;
ವಿಧವೆಯ ಹಸುವನ್ನು ಒತ್ತೆಯಿಟ್ಟುಕೊಳ್ಳುವರು;
ನಿರ್ಗತಿಕರನ್ನು ಸ್ಥಳದಿಂದ ಸ್ಥಳಕ್ಕೆ ಅಲೆದಾಡಿಸುವರು.
ಬಡವರು ಈ ದುಷ್ಟರಿಗೆ ಹೆದರಿ ಅಡಗಿಕೊಳ್ಳುವರು.
 
“ಬಡವರು ಅಡವಿಯಲ್ಲಿನ ಕಾಡುಕತ್ತೆಗಳೋ ಎಂಬಂತೆ ತಮ್ಮ ಆಹಾರಕ್ಕಾಗಿ ದಿನವೆಲ್ಲಾ ದುಡಿಯುವರು;
ಕೂಳೆಬಿಟ್ಟ ಹೊಲಗಳೇ ಅವರ ಮಕ್ಕಳಿಗೆ ಆಹಾರವನ್ನು ಒದಗಿಸುತ್ತವೆ.
ಬಡವರು ರಾತ್ರಿಯವರೆಗೂ ಹೊಲಗಳಲ್ಲಿ ಬೆಳೆ ಕೊಯ್ಯುವರು;
ದುಷ್ಟರ ದ್ರಾಕ್ಷಿತೋಟದಲ್ಲಿ ಅಳಿದುಳಿದ ದ್ರಾಕ್ಷಿಗಳನ್ನು ಆರಿಸಿಕೊಳ್ಳುವರು.
ಅವರು ರಾತ್ರಿಯ ಚಳಿಯಲ್ಲಿಯೂ ಹೊದಿಕೆಯಿಲ್ಲದೆ ಮಲಗುವರು;
ಹಾಕಿಕೊಳ್ಳಲು ಅವರಲ್ಲಿ ಬಟ್ಟೆಯೂ ಇಲ್ಲ.
ಅವರು ಬೆಟ್ಟಗಳಲ್ಲಿ ಮಳೆಯಿಂದ ನೆನೆದುಹೋಗಿದ್ದಾರೆ.
ಚಳಿಯಿಂದ ರಕ್ಷಿಸಿಕೊಳ್ಳಲು ಏನೂ ಇಲ್ಲದೆ ವಿಶಾಲವಾದ ಬಂಡೆಯ ಮರೆಗಳನ್ನು ಆಶ್ರಯಿಸಿಕೊಳ್ಳುವರು.
ದುಷ್ಟರು ತಂದೆಯಿಲ್ಲದ ಮಗುವನ್ನು ಅದರ ತಾಯಿಯಿಂದ ಕಿತ್ತುಕೊಳ್ಳುವರು.
ಬಡವರ ಮಗುವನ್ನು ಸಾಲಕ್ಕೆ ಒತ್ತೆಯಾಗಿಟ್ಟುಕೊಳ್ಳುವರು.
10 ಬಡವರು ಬಟ್ಟೆಗಳಿಲ್ಲದೆ ಬೆತ್ತಲೆಯಾಗಿ ದುಡಿಯುವರು.
ಅವರು ಹಸಿವೆಯಿಂದಲೇ ದುಷ್ಟರ ಸಿವುಡುಗಳನ್ನು ಹೊರುವರು.
11 ಬಡವರು ಆಲೀವ್ ಎಣ್ಣೆಯ ಗಾಣವಾಡಿಸುವರು;
ದಾಹದಿಂದಲೇ ದ್ರಾಕ್ಷಿಅಲೆಯಲ್ಲಿ ತುಳಿದು ರಸ ತೆಗೆಯುವರು.
12 ಸಾಯುತ್ತಿರುವ ಜನರ ನರಳಾಟವು ಪಟ್ಟಣದಲ್ಲಿ ಕೇಳಿಬರುತ್ತಿದೆ.
ಗಾಯಗೊಂಡಿರುವವರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ, ಆದರೆ ದೇವರು ಕೇಳಿಸಿಕೊಳ್ಳುವುದಿಲ್ಲ.
 
13 “ಬೆಳಕಿಗೆ ವಿರೋಧವಾಗಿ ದಂಗೆ ಎದ್ದಿರುವ ಜನರಿದ್ದಾರೆ.
ಅವರಿಗೆ ಹಗಲಿನ ಮಾರ್ಗಗಳ ಪರಿಚಯವಿಲ್ಲ.
ಅವರು ಅದರ ಮಾರ್ಗಗಳಲ್ಲಿ ಇರುವುದಿಲ್ಲ.
14 ಕೊಲೆಗಾರನು ಮುಂಜಾನೆಯಲ್ಲಿ ಎದ್ದು ದಿಕ್ಕಿಲ್ಲದ ಬಡವರನ್ನು ಕೊಲ್ಲುವನು;
ರಾತ್ರಿಯಲ್ಲಿ ಕಳವು ಮಾಡುವನು.
15 ವ್ಯಭಿಚಾರಿಯು ರಾತ್ರಿಗಾಗಿಯೇ ಕಾಯುತ್ತಿರುತ್ತಾನೆ.
‘ಯಾರ ಕಣ್ಣಿಗೂ ಬೀಳಬಾರದು’ ಎಂದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
16 ದುಷ್ಟರು ರಾತ್ರಿಯ ಕತ್ತಲಲ್ಲಿ ಮನೆಗಳಿಗೆ ಕನ್ನ ಕೊರೆಯುವರು;
ಹಗಲಲ್ಲಿ ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದು ಬೆಳಕಿಗೆ ಮರೆಯಾಗಿರುವರು.
17 ಆ ದುಷ್ಟರಿಗೆ ಕತ್ತಲೆಯು ಮುಂಜಾನೆಯಂತಿರುವುದು.
ಕಾರ್ಗತ್ತಲೆಯ ಭೀಕರತೆಗಳು ಅವರ ಸ್ನೇಹಿತರಾಗಿವೆ.
 
18 ನೀವು ಹೇಳುವುದೇನೆಂದರೆ, ‘ಪ್ರವಾಹವು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ನಾಶನವು ದುಷ್ಟರನ್ನು ಕೊಚ್ಚಿಕೊಂಡು ಹೋಗುವುದು.
ಅವರ ಜಮೀನು ಶಾಪಗ್ರಸ್ತವಾಗಿದೆ. ಆದ್ದರಿಂದ ಅವರು ದ್ರಾಕ್ಷಿಹಣ್ಣುಗಳನ್ನು ತಮ್ಮ ತೋಟಗಳಿಂದ ಸಂಗ್ರಹಿಸಲಾರರು.
19 ಬರಗಾಲವೂ ಬಿಸಿಲೂ ಹಿಮದ ನೀರನ್ನು ಹೀರುವಂತೆ ಪಾತಾಳವು
ದುಷ್ಟರನ್ನು ಎಳೆದುಕೊಳ್ಳುವುದು.
20 ಸತ್ತುಹೋದ ದುಷ್ಟನನ್ನು ಅವನ ತಾಯಿಯೂ ಮರೆತುಬಿಡುವಳು.
ದುಷ್ಟನ ದೇಹವನ್ನು ಹುಳಗಳು ತಿಂದುಬಿಡುತ್ತವೆ.
ಅವನನ್ನು ಇನ್ನೆಂದಿಗೂ ಜ್ಞಾಪಿಸಿಕೊಳ್ಳುವುದಿಲ್ಲ.
ದುಷ್ಟನು ಬಿದ್ದುಹೋದ ಮರದಂತೆ ನಾಶವಾಗುವನು.
21 ದುಷ್ಟರು ಬಂಜೆಯರಿಗೆ ಕೇಡು ಮಾಡುವರು;
ವಿಧವೆಯರಿಗೆ ಕರುಣೆ ತೋರರು.
22 ಆದರೆ ದೇವರು ತನ್ನ ಶಕ್ತಿಯಿಂದ ಬಲಿಷ್ಠರನ್ನು ನಾಶಮಾಡುವನು;
ದುಷ್ಟರು ಜೀವನದಲ್ಲಿ ಬೇರೂರಿಕೊಂಡಿದ್ದರೂ ತಮ್ಮ ಭವಿಷ್ಯತ್ತನ್ನು ತಿಳಿಯದವರಾಗಿದ್ದಾರೆ.
23 ತಾವು ಸುರಕ್ಷಿತವಾಗಿದ್ದೇವೆಂದು ದುಷ್ಟರು ಹೇಳುವುದು ಕೇವಲ ಅಲ್ಪಕಾಲದವರಗಷ್ಟೇ.
ಯಾಕೆಂದರೆ ದೇವರು ಅವರನ್ನು ಗಮನಿಸುತ್ತಲೇ ಇರುವನು.
24 ದುಷ್ಟರು ಸ್ವಲ್ಪಕಾಲ ಅಭಿವೃದ್ಧಿಗೊಂಡರೂ
ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಎಲ್ಲರಂತೆ ಇಲ್ಲವಾಗುವರು.’
 
25 “ಇದು ನಿಜವಲ್ಲದಿದ್ದರೆ,
ನಾನು ಸುಳ್ಳು ಹೇಳಿರುವುದಾಗಿ ಯಾರು ನಿರೂಪಿಸಬಲ್ಲರು?
ನನ್ನ ಮಾತುಗಳು ತಪ್ಪಾದವುಗಳೆಂದು ಯಾರು ತೋರಿಸಬಲ್ಲರು?”