124
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.ರಚನೆಗಾರ: ದಾವೀದ.
1 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಇಸ್ರೇಲರೇ, ನನಗೆ ಉತ್ತರಹೇಳಿ.
2 ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
3 ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
4 ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
5 ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.
6 ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.
7 ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
8 ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.