85
ಸ್ತುತಿಗೀತೆ. ರಚನೆಗಾರರು: ಕೋರಹೀಯರು.
1 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ. ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
2 ನಿನ್ನ ಜನರ ದ್ರೋಹವನ್ನು ಕ್ಷಮಿಸು!
ಅವರ ಪಾಪಗಳನ್ನು ಅಳಿಸಿಬಿಡು!
3 ನಿನ್ನ ರೌದ್ರವನ್ನು ತೊರೆದುಬಿಡು.
ಉಗ್ರ ಕೋಪದಿಂದಿರಬೇಡ.
4 ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
5 ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
6 ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
ನಿನ್ನ ಜನರನ್ನು ಸಂತೋಷಗೊಳಿಸು.
7 ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
ನಮ್ಮನ್ನು ರಕ್ಷಿಸು.
8 ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
9 ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.* ನಿವಾಸಿ … ಒಳ್ಳೆಯವನಾಗಿರುವನು ಅಕ್ಷರಶಃ, “ನಿಷ್ಠತೆಯು ಭೂಮಿಯಿಂದ ಉದಯಿಸುವುದು ಮತ್ತು ಒಳ್ಳೆಯತನವು ಆಕಾಶದಿಂದ ಕೆಳಗೆ ದೃಷ್ಟಿಸುವುದು.”
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.
*85:11: ನಿವಾಸಿ … ಒಳ್ಳೆಯವನಾಗಿರುವನು ಅಕ್ಷರಶಃ, “ನಿಷ್ಠತೆಯು ಭೂಮಿಯಿಂದ ಉದಯಿಸುವುದು ಮತ್ತು ಒಳ್ಳೆಯತನವು ಆಕಾಶದಿಂದ ಕೆಳಗೆ ದೃಷ್ಟಿಸುವುದು.”