43
ಯೆರೆಮೀಯನು ದೇವರಾದ ಯೆಹೋವನ ಸಂದೇಶವನ್ನು ಜನರಿಗೆ ಹೇಳಿ ಮುಗಿಸಿದನು. ಯೆಹೋವನು ತನ್ನ ಮೂಲಕ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲ ಯೆರೆಮೀಯನು ಅವರಿಗೆ ತಿಳಿಸಿದನು.
ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕೆಲವರು ದುರಹಂಕಾರಿಗಳಾಗಿದ್ದರು ಮತ್ತು ಹಟಮಾರಿಗಳಾಗಿದ್ದರು. ಈ ಜನರು ಯೆರೆಮೀಯನ ಮೇಲೆ ಕೋಪಗೊಂಡು, “ಯೆರೆಮೀಯನೇ, ನೀನು ಸುಳ್ಳು ಹೇಳುತ್ತಿರುವೆ. ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈಜಿಪ್ಟಿಗೆ ವಾಸಮಾಡಲು ಹೋಗಬಾರದು’ ಎಂದು ಹೇಳುವದಕ್ಕಾಗಿ ನಿನ್ನನ್ನು ಕಳುಹಿಸಿಲ್ಲ. ಯೆರೆಮೀಯನೇ, ನೀನು ನಮ್ಮ ವಿರುದ್ಧವಾಗಿರುವಂತೆ ನೇರೀಯನ ಮಗನಾದ ಬಾರೂಕನು ಪ್ರೋತ್ಸಾಹಿಸುತ್ತಿದ್ದಾನೆ ಎಂಬುದು ನಮ್ಮ ಆಲೋಚನೆ. ಅವನು ನಮ್ಮನ್ನು ಬಾಬಿಲೋನಿನ ಜನರ ಕೈಗೆ ಕೊಟ್ಟು ಅವರಿಂದ ಕೊಲ್ಲಿಸಬಯಸುತ್ತಾನೆ ಅಥವಾ ಅವರು ನಮ್ಮನ್ನು ಸೆರೆಹಿಡಿದು ಬಾಬಿಲೋನಿಗೆ ಕೊಂಡೊಯ್ಯುವಂತೆ ಮಾಡಬಯಸುತ್ತಾನೆಂದು ತೋರುತ್ತದೆ” ಎಂದು ಹೇಳಿದರು.
ಯೋಹಾನಾನನು, ಸೇನಾಧಿಪತಿಗಳು ಮತ್ತು ಎಲ್ಲಾ ಜನರು ಯೆಹೋವನ ಆಜ್ಞೆಯನ್ನು ಮೀರಿದರು. ಯೆಹೂದದಲ್ಲಿ ಇರಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು. ಆದರೆ ಯೆಹೋವನ ಆಜ್ಞೆಯನ್ನು ಉಲ್ಲಂಘಿಸಿ ಯೋಹಾನಾನನು ಮತ್ತು ಸೇನಾಧಿಪತಿಗಳು ಅಳಿದುಳಿದ ಜನರನ್ನು ಯೆಹೂದದಿಂದ ಈಜಿಪ್ಟಿಗೆ ಕರೆದುಕೊಂಡು ಹೋದರು. ಈ ಮುಂಚೆ ಶತ್ರುಗಳು ಆ ಜನರನ್ನು ಬೇರೆ ದೇಶಗಳಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಯೆಹೂದಕ್ಕೆ ತಿರುಗಿ ಬಂದಿದ್ದರು. ಈಗ ಯೋಹಾನಾನ ಮತ್ತು ಎಲ್ಲಾ ಸೈನ್ಯಾಧಿಕಾರಿಗಳು, ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದರು. ಆ ಜನಗಳಲ್ಲಿ ರಾಜನ ಹೆಣ್ಣುಮಕ್ಕಳಿದ್ದರು. (ನೆಬೂಜರದಾನನು ಗೆದಲ್ಯನನ್ನು ಆ ಜನರ ಮೇಲಿಬಚಾರಕನನ್ನಾಗಿ ನೇಮಿಸಿದ್ದನು. ನೆಬೂಜರದಾನನು ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು). ಯೋಹಾನಾನನು ಪ್ರವಾದಿಯಾದ ಯೆರೆಮೀಯನನ್ನು ಮತ್ತು ನೇರೀಯನ ಮಗನಾದ ಬಾರೂಕನನ್ನು ತೆಗೆದುಕೊಂಡು ಹೋದನು. ಆ ಜನರು ಯೆಹೋವನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆ ಎಲ್ಲಾ ಜನರು ಈಜಿಪ್ಟಿಗೆ ಹೋದರು. ಅವರು ತಹಪನೇಸ್ ಎಂಬ ಊರಿಗೆ ಸೇರಿದರು.
ತಹಪನೇಸ್ ಊರಿನಲ್ಲಿ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: “ಯೆರೆಮೀಯನೇ, ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಹೂಳಿ ಗಾರೆಯಿಂದ ಮುಚ್ಚಿಬಿಡು. ಯೆಹೂದದ ಜನರ ಎದುರಿನಲ್ಲಿಯೇ ಹೀಗೆ ಮಾಡು. 10 ನಿನ್ನನ್ನು ನೋಡುತ್ತಿದ್ದ ಆ ಯೆಹೂದ್ಯರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಇಲ್ಲಿಗೆ ಕರೆಸುತ್ತೇನೆ. ಅವನು ನನ್ನ ಸೇವಕನಾಗಿದ್ದಾನೆ. ನಾನು ಈ ಸ್ಥಳದಲ್ಲಿ ಹೂಳಿದ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಸ್ಥಾಪಿಸುತ್ತೇನೆ. ನೆಬೂಕದ್ನೆಚ್ಚರನು ಈ ಕಲ್ಲುಗಳ ಮೇಲೆ ತನ್ನ ಗುಡಾರವನ್ನು ಹಾಕುವನು. 11 ನೆಬೂಕದ್ನೆಚ್ಚರನು ಇಲ್ಲಿಗೆ ಬಂದು ಈಜಿಪ್ಟಿನ ಮೇಲೆ ಧಾಳಿ ಮಾಡುವನು. ಕೊಲ್ಲಬೇಕೆಂದು ಗೊತ್ತುಮಾಡಿದವರನ್ನು ಕೊಂದುಹಾಕುವನು; ಸೆರೆಹಿಡಿಯಬೇಕೆಂದು ಗೊತ್ತು ಮಾಡಿಕೊಂಡವರನ್ನು ಸೆರೆಹಿಡಿಯುವನು; ಖಡ್ಗದಿಂದ ಕೊಲೆಯಾಗಬೇಕೆಂದು ಗೊತ್ತುಪಡಿಸಿದವರ ಸಲುವಾಗಿ ಅವನು ಖಡ್ಗವನ್ನು ತರುವನು. 12 ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಬೂಕದ್ನೆಚ್ಚರನು ಬೆಂಕಿಯನ್ನು ಹೊತ್ತಿಸುವನು, ಅವನು ಆಲಯಗಳನ್ನು ಸುಟ್ಟು ಆ ವಿಗ್ರಹಗಳನ್ನು ತೆಗೆದುಕೊಂಡು ಹೋಗುವನು. ಕುರುಬನು ತನ್ನ ಬಟ್ಟೆಗಳಿಂದ ತಿಗಣೆ ಮತ್ತು ಹೇನುಗಳನ್ನು ತೆಗೆದುಹಾಕಿ ಸಬಚ್ಛಗೊಳಿಸುವಂತೆ ನೆಬೂಕದ್ನೆಚ್ಚರನು ಈಜಿಪ್ಟನ್ನು ಬಿಟ್ಟು ಹೋಗುವನು. 13 ನೆಬೂಕದ್ನೆಚ್ಚರನು ಈಜಿಪ್ಟಿನ ಸೂರ್ಯ ದೇವಾಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ನಾಶಪಡಿಸುವನು. ಅವನು ಈಜಿಪ್ಟಿನ ಸುಳ್ಳುದೇವರುಗಳ ಆಲಯಗಳನ್ನು ಸುಟ್ಟುಹಾಕುವನು.’ ”