4
ನೆಬೂಕದ್ನೆಚ್ಚರನಿಗೆ ಮರದ ಕನಸು
1 ಲೋಕದಲ್ಲೆಲ್ಲ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳ ಜನರಿಗೆ ಅರಸನಾದ ನೆಬೂಕದ್ನೆಚ್ಚರನು ಈ ಪತ್ರವನ್ನು ಕಳುಹಿಸಿದನು.
ಶುಭಾಶಯಗಳು,
2 ಮಹೋನ್ನತನಾದ ದೇವರು ನನಗೋಸ್ಕರ ಮಾಡಿದ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ನಿಮಗೆ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ.
3 ದೇವರು ಅಚ್ಚರಿಗೊಳಿಸುವ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರು ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರ ಸಾಮ್ರಾಜ್ಯವು ಶಾಶ್ವತವಾದದ್ದು.
ದೇವರ ಆಳ್ವಿಕೆಯು ಎಲ್ಲಾ ತಲೆಮಾರುಗಳಲ್ಲಿಯೂ ಮುಂದುವರೆಯುವುದು.
4 ನೆಬೂಕದ್ನೆಚ್ಚರನಾದ ನಾನು ಅರಮನೆಯಲ್ಲಿದ್ದೆ; ಸುಖಸಂತೋಷದಿಂದ ಇದ್ದೆ. 5 ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು. 6 ಅದಕ್ಕಾಗಿ ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕರೆತರಬೇಕೆಂದು ಆಜ್ಞೆಯನ್ನು ಕೊಟ್ಟೆ. ಅವರು ನನ್ನ ಕನಸಿನ ಅರ್ಥವನ್ನು ತಿಳಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು. 7 ಮಂತ್ರವಾದಿಗಳು, ಜೋಯಿಸರು ಮತ್ತು ವಿದ್ವಾಂಸರು ಬಂದ ಮೇಲೆ ನಾನು ಅವರಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಆದರೆ ಅವರಿಗೆ ಅರ್ಥವನ್ನು ತಿಳಿಸಲಾಗಲಿಲ್ಲ. 8 ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. 9 ನಾನು, “ಬೇಲ್ತೆಶಚ್ಚರನೇ, ಎಲ್ಲಾ ಮಂತ್ರವಾದಿಗಳಿಗಿಂತಲೂ ನೀನು ಬಹಳ ಶ್ರೇಷ್ಠನು. ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿದೆ ಎಂದು ನನಗೆ ಗೊತ್ತಿದೆ. ನಿನಗೆ ತಿಳಿದುಕೊಳ್ಳಲು ಕಷ್ಟವಾದ ಯಾವ ರಹಸ್ಯವೂ ಇಲ್ಲವೆಂದು ನಾನು ಬಲ್ಲೆನು. ನಾನು ಕನಸಿನಲ್ಲಿ ಕಂಡದ್ದು ಇಂತಿದೆ. ಅದರ ಅರ್ಥವನ್ನು ನನಗೆ ಹೇಳು. 10 ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡಾಗ ಕಂಡ ದೃಶ್ಯಗಳು ಇವು: ನನ್ನ ಎದುರಿಗೆ ಭೂಮಿಯ ಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವು ಇದ್ದುದನ್ನು ನಾನು ಕಂಡೆ. 11 ಆ ಮರವು ಬಹಳ ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಆ ಮರದ ತುದಿಯು ಆಕಾಶಕ್ಕೆ ಮುಟ್ಟಿತ್ತು. ಅದನ್ನು ಭೂಲೋಕದ ಯಾವ ಸ್ಥಳದಿಂದಲಾದರೂ ನೋಡಬಹುದಾಗಿತ್ತು. 12 ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು.
13 “ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ನನ್ನ ದರ್ಶನದಲ್ಲಿ ಅದೆಲ್ಲವನ್ನು ನೋಡುತ್ತಿದ್ದೆ. ಆಗ ಪವಿತ್ರ ದೇವದೂತನೊಬ್ಬನು ಆಕಾಶದಿಂದ ಕೆಳಗಿಳಿದು ಬರುವುದನ್ನು ಕಂಡೆ. 14 ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು. 15 ಆದರೆ ಅದರ ಬೇರುಗಳು ಮತ್ತು ಬುಡದ ಮೋಟು ಭೂಮಿಯಲ್ಲಿ ಉಳಿಯಲಿ. ಅದರ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಮೋಟು ಮತ್ತು ಬೇರುಗಳು ಹೊಲದಲ್ಲಿ ಉಳಿಯಲಿ. ಅದರ ಸುತ್ತ ಹುಲ್ಲು ಬೆಳೆದಿರಲಿ. ಅದು ಅಡವಿಯಲ್ಲಿ ಕಾಡುಪ್ರಾಣಿಗಳ ಮತ್ತು ಸಸಿಗಳ ಜೊತೆಯಲ್ಲಿ ಇರಲಿ; ಅದು ಇಬ್ಬನಿಯಿಂದ ನೆನೆಯಲಿ. 16 ಅದು ಮನುಷ್ಯನಂತೆ ವಿಚಾರ ಮಾಡುವುದನ್ನು ಬಿಟ್ಟು ಪ್ರಾಣಿಯಂತೆ ವಿಚಾರ ಮಾಡತೊಡಗಲಿ. ಅದು ಈ ಸ್ಥಿತಿಯಲ್ಲಿ ಏಳು ವರ್ಷವಿರಲಿ’ ಎಂದು ಹೇಳಿದನು.
17 “ಈ ಶಿಕ್ಷೆಯನ್ನು ದೇವದೂತನು ಸಾರಿದನು. ಮಾನವ ಸಾಮ್ರಾಜ್ಯಗಳ ಮೇಲೆ ಮಹೋನ್ನತನಾದ ದೇವರು ಆಳುವನು. ಅವನು ಆ ಸಾಮ್ರಾಜ್ಯಗಳನ್ನು ತನಗೆ ಬೇಕಾದವರಿಗೆ ಒಪ್ಪಿಸುವನು, ಕನಿಷ್ಠರನ್ನು ನೇಮಿಸುವನು ಎಂಬುದು ಲೋಕದ ಜನರಿಗೆಲ್ಲ ತಿಳಿದುಬರಲಿ ಎಂದೇ ಅವನು ಸಾರಿದನು.
18 “ಅರಸನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು. ಈಗ ನೀನು, ಬೇಲ್ತೆಶಚ್ಚರನೇ (ದಾನಿಯೇಲನೇ), ಇದರ ಅರ್ಥವನ್ನು ನನಗೆ ತಿಳಿಸು. ನನ್ನ ರಾಜ್ಯದಲ್ಲಿರುವ ವಿದ್ವಾಂಸರಲ್ಲಿ ಯಾರೂ ಇದರ ಅರ್ಥವನ್ನು ನನಗೆ ಹೇಳಲಾರರು. ಆದರೆ ನೀನು ಈ ಕನಸಿನ ಅರ್ಥವನ್ನು ತಿಳಿಸಬಲ್ಲೆ. ಏಕೆಂದರೆ ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದು ನನಗೆ ತಿಳಿದದೆ” ಎಂದೆನು.
19 ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು.
ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ. 20-21 ನೀನು ನಿನ್ನ ಕನಸಿನಲ್ಲಿ ಒಂದು ಮರವನ್ನು ಕಂಡೆ. ಆ ಮರವು ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದು ಭೂಲೋಕದ ಎಲ್ಲೆಡೆಯಿಂದಲೂ ಕಾಣಿಸುತ್ತಿತ್ತು. ಅದರ ಎಲೆಗಳು ಸುಂದರವಾಗಿದ್ದವು: ಅದು ಸಾಕಷ್ಟು ಹಣ್ಣುಗಳನ್ನು ಫಲಿಸಿತ್ತು. ಆ ಹಣ್ಣುಗಳು ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಕೊಟ್ಟವು. ಅದು ಕಾಡುಪ್ರಾಣಿಗಳಿಗೆ ವಾಸಸ್ಥಾನವಾಗಿತ್ತು; ಅದರ ಕೊಂಬೆಗಳು ಪಕ್ಷಿಗಳಿಗೆ ಗೂಡುಕಟ್ಟುವ ಸ್ಥಳಗಳಾಗಿದ್ದವು. ಆ ಮರವನ್ನು ನೀನು ನೋಡಿದೆ. 22 ಅರಸನೇ, ನೀನೇ ಆ ಮರ. ನೀನು ಪ್ರಖ್ಯಾತನೂ ಮತ್ತು ಪ್ರಬಲನೂ ಆಗಿರುವೆ. ನೀನು ಗಗನಚುಂಬಿಯಾದ ಆ ಮರದಂತೆ ಬೆಳೆದಿರುವೆ. ನಿನ್ನ ಪ್ರಾಬಲ್ಯವು ಈ ಭೂಮಿಯಲ್ಲಿ ದೂರದೂರದವರೆಗೆ ಹಬ್ಬಿದೆ.
23 “ಅರಸನೇ, ನೀನು ಆಕಾಶದಿಂದ ಇಳಿದುಬರುತ್ತಿದ್ದ ಒಬ್ಬ ಪರಿಶುದ್ಧ ದೇವದೂತನನ್ನು ಕಂಡೆ. ಅವನು, ‘ಮರವನ್ನು ಕಡಿದು ನಾಶಮಾಡಿರಿ. ಅದರ ಬುಡದ ಮೋಟಿನ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಬುಡದ ಮೋಟನ್ನು ಮತ್ತು ಬೇರುಗಳನ್ನು ಭೂಮಿಯಲ್ಲಿ ಬಿಟ್ಟುಬಿಡಿ. ಅದರ ಸುತ್ತಲೂ ಕಾಡಿನ ಹುಲ್ಲು ಬೆಳೆಯಲಿ. ಅದು ಇಬ್ಬನಿಯಿಂದ ತೋಯ್ದು ಹೋಗಲಿ. ಅದು ಕಾಡುಪ್ರಾಣಿಯಂತೆ ಇರುವುದು. ಅದು ಏಳು ವರ್ಷ ಕಳೆಯುವವರೆಗೆ ಹಾಗೆಯೇ ಇರುವುದು’ ಎಂದು ಹೇಳಿದನು.
24 “ಕನಸಿನ ಅರ್ಥವು ಹೀಗಿದೆ: ಅರಸನೇ, ಮಹೋನ್ನತನಾದ ದೇವರು ನನ್ನ ಒಡೆಯನಾದ ಅರಸನಿಗೆ ಹೀಗಾಗಬೇಕೆಂದು ಆಜ್ಞಾಪಿಸಿದ್ದಾನೆ. 25 ರಾಜನಾದ ನೆಬೂಕದ್ನೆಚ್ಚರನೇ, ನಿನ್ನನ್ನು ಬಲವಂತದಿಂದ ಜನರಿಂದ ದೂರಮಾಡುವರು. ನೀನು ಕಾಡುಪ್ರಾಣಿಗಳೊಂದಿಗೆ ವಾಸಮಾಡುವೆ; ಹಸುಗಳಂತೆ ಹುಲ್ಲು ತಿನ್ನುವೆ; ಇಬ್ಬನಿಯಿಂದ ತೋಯಿಸಿಕೊಳ್ಳುವೆ. ಏಳು ವರ್ಷಗಳು ಕಳೆಯುವವು. ಆಗ ನೀನು ಮಹೋನ್ನತನಾದ ದೇವರು ಮಾನವರ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ರಾಜ್ಯವನ್ನು ಕೊಡುತ್ತಾನೆ ಎಂಬ ಪಾಠವನ್ನು ಕಲಿಯುವೆ.
26 “ಮರದ ಬುಡದ ಮೋಟನ್ನು ಮತ್ತು ಅದರ ಬೇರುಗಳನ್ನು ಭೂಮಿಯಲ್ಲಿಯೇ ಬಿಟ್ಟುಬಿಡಿ ಎಂಬುದರ ಅರ್ಥವೇನೆಂದರೆ, ನಿನ್ನ ರಾಜ್ಯವನ್ನು ನಿನಗೆ ಹಿಂತಿರುಗಿಸಲಾಗುವುದು. ಮಹೋನ್ನತನಾದ ದೇವರು ನಿನ್ನ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಎಂಬುದನ್ನು ನೀನು ತಿಳಿದುಕೊಂಡ ಬಳಿಕ ಹೀಗಾಗುವುದು. 27 ಆದ್ದರಿಂದ ರಾಜನೇ, ನನ್ನ ಬುದ್ಧಿವಾದವನ್ನು ದಯವಿಟ್ಟು ಒಪ್ಪಿಕೊ. ನೀನು ಪಾಪಕೃತ್ಯಗಳನ್ನು ಮಾಡಬೇಡ. ನೀತಿಯನ್ನು ಅನುಸರಿಸು; ಕೆಟ್ಟದ್ದನ್ನು ಮಾಡಬೇಡ. ಬಡಜನರಿಗೆ ಕರುಣೆಯನ್ನು ತೋರು. ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗುವುದು. ಇದೇ ನನ್ನ ಬುದ್ಧಿವಾದ” ಎಂದು ಅರಿಕೆ ಮಾಡಿದನು.
28 ಇದೆಲ್ಲವೂ ಅರಸನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು. 29-30 ಕನಸು ಕಂಡ ಹನ್ನೆರಡು ತಿಂಗಳುಗಳಾದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿದ್ದ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಮಾಳಿಗೆಯ ಮೇಲಿದ್ದಾಗ ಅರಸನು, “ಈ ಬಾಬಿಲೋನ್ ನಗರವನ್ನು ನೋಡಿ, ನಾನು ಈ ಮಹಾನಗರವನ್ನು ಕಟ್ಟಿದೆ. ಇದು ನನ್ನ ಅರಮನೆ. ನಾನು ನನ್ನ ಸಾಮರ್ಥ್ಯದಿಂದ ಈ ಅರಮನೆಯನ್ನು ಕಟ್ಟಿದೆ. ನಾನು ಎಂಥಾ ದೊಡ್ಡವನು ಎಂದು ಲೋಕಕ್ಕೆ ತೋರಿಸಲು ನಾನು ಈ ಅರಮನೆಯನ್ನು ಕಟ್ಟಿದೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದನು.
31 ಆ ಶಬ್ದಗಳು ಇನ್ನೂ ಬಾಯಿಯಲ್ಲಿಯೇ ಇದ್ದಾಗ, ಆಕಾಶವಾಣಿಯಾಯಿತು. ಆ ಧ್ವನಿಯು, “ಅರಸನಾದ ನೆಬೂಕದ್ನೆಚ್ಚರನೇ, ನಿನ್ನಿಂದ ನಿನ್ನ ರಾಜಪದವಿಯನ್ನು ಕಿತ್ತುಕೊಳ್ಳಲಾಗಿದೆ. 32 ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.
33 ಆ ಮಾತುಗಳು ತಕ್ಷಣ ನೆರವೇರಿದವು. ನೆಬೂಕದ್ನೆಚ್ಚರನು ಜನರನ್ನು ಬಿಟ್ಟುಹೋಗಬೇಕಾಯಿತು. ಅವನು ಹಸುಗಳಂತೆ ಹುಲ್ಲು ತಿನ್ನತೊಡಗಿದನು. ಅವನು ಇಬ್ಬನಿಯಿಂದ ನೆನೆದನು. ಅವನ ಕೂದಲುಗಳು ಹದ್ದಿನ ಗರಿಗಳಂತೆ ಬೆಳೆದವು. ಅವನ ಉಗುರುಗಳು ಪಕ್ಷಿಗಳ ಉಗುರುಗಳಂತೆ ಬೆಳೆದವು.
34 ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ.
ದೇವರ ಆಳ್ವಿಕೆಯು ಶಾಶ್ವತವಾದದ್ದು!
ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
35 ಭೂಮಿಯ ಜನರು ಬಹು ಮುಖ್ಯರಲ್ಲ.
ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ.
ಯಾರೂ ಆತನನ್ನು ತಡೆಯಲಾರರು!
ಯಾರೂ ಆತನನ್ನು ಪ್ರಶ್ನಿಸಲಾರರು!
36 ಆಗ ದೇವರು ನನಗೆ ಸರಿಯಾದ ಬುದ್ಧಿಯನ್ನು ಕೊಟ್ಟನು. ನನಗೆ ರಾಜನ ಗೌರವ, ಪ್ರಭಾವ, ವೈಭವಗಳು ಮತ್ತೆ ಲಭಿಸಿದವು. ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸ್ವೀಕರಿಸಿದರು. ನಾನು ಮತ್ತೆ ಅರಸನಾದೆನು. ನಾನು ಮೊದಲಿಗಿಂತಲೂ ಅಧಿಕ ಶಕ್ತಿಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನಾದೆನು. 37 ಅರಸ ನೆಬೂಕದ್ನೆಚ್ಚರನಾದ ನಾನು ಈಗ ಪರಲೋಕದ ರಾಜನನ್ನು ಘನಪಡಿಸುತ್ತೇನೆ, ಮಹಿಮೆಪಡಿಸುತ್ತೇನೆ. ಆತನು ಮಾಡುವದೆಲ್ಲ ಸರಿ. ಆತನು ಯಾವಾಗಲೂ ನ್ಯಾಯವಂತನಾಗಿದ್ದಾನೆ. ಆತನು ಗರ್ವಿಷ್ಠರನ್ನು ದೀನರನ್ನಾಗಿ ಮಾಡಬಲ್ಲನು.