15
ಕ್ರಿಸ್ತನ ವಿಷಯವಾದ ಸುವಾರ್ತೆ
ಸಹೋದರ ಸಹೋದರಿಯರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನೀವು ಜ್ಞಾಪಿಸಿಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿಕೊಂಡಿರಿ ಮತ್ತು ಅದರಲ್ಲಿ ದೃಢವಾಗಿದ್ದೀರಿ. ನೀವು ಆ ಸಂದೇಶದ ಮೂಲಕ ರಕ್ಷಣೆ ಹೊಂದಿದ್ದೀರಿ. ನಾನು ನಿಮಗೆ ತಿಳಿಸಿದ ಸಂದೇಶದಲ್ಲಿ ನಿಮಗೆ ದೃಢವಾದ ನಂಬಿಕೆ ಇರಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮ ನಂಬಿಕೆಯು ನಿರರ್ಥಕವಾಗುವುದು.
ನಾನು ಸ್ವೀಕರಿಸಿಕೊಂಡ ಸಂದೇಶವನ್ನು ನಾನು ನಿಮಗೆ ತಿಳಿಸಿದೆನು. ಆ ಸಂಗತಿಗಳು ಬಹಳ ಮುಖ್ಯವಾದುವುಗಳಾಗಿವೆ. ಪವಿತ್ರ ಗ್ರಂಥವು ಹೇಳುವಂತೆ, ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರವಾಗಿ ಸತ್ತು ಹೂಳಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬಂದನು. ಬಳಿಕ ಕ್ರಿಸ್ತನು ಪೇತ್ರನಿಗೆ ಕಾಣಿಸಿಕೊಂಡನು. ಅನಂತರ ಹನ್ನೆರಡು ಮಂದಿ ಅಪೊಸ್ತಲರಿಗೆ ಕಾಣಿಸಿಕೊಂಡನು. ತರುವಾಯ, ಒಂದೇ ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಈ ಸಹೋದರರಲ್ಲಿ ಬಹುಮಂದಿ ಇಂದಿನವರೆಗೂ ಬದುಕಿದ್ದಾರೆ. ಆದರೆ ಕೆಲವರು ಸತ್ತುಹೋದರು. ಬಳಿಕ ಕ್ರಿಸ್ತನು ಯಾಕೋಬನಿಗೆ ಕಾಣಿಸಿಕೊಂಡನು. ಅನಂತರ ಮತ್ತೊಮ್ಮೆ ಎಲ್ಲಾ ಅಪೊಸ್ತಲರಿಗೆ ಕಾಣಿಸಿಕೊಂಡನು. ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.
ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ. 10 ಆದರೆ, ದೇವರ ಕೃಪೆಯಿಂದ ನಾನು ಅಪೊಸ್ತಲನಾಗಿದ್ದೇನೆ. ಆತನು ನನಗೆ ತೋರಿದ ಕೃಪೆಯು ನಿಷ್ಛಲವಾಗಲಿಲ್ಲ. ಉಳಿದೆಲ್ಲ ಅಪೊಸ್ತಲರಿಗಿಂತ ನಾನು ಹೆಚ್ಚು ಕಷ್ಟಪಟ್ಟು ಸೇವೆ ಮಾಡಿದ್ದೇನೆ. (ಆದರೆ ಸೇವೆ ಮಾಡುತ್ತಿದ್ದವನು ನಿಜವಾಗಿಯೂ ನಾನಲ್ಲ ದೇವರ ಕೃಪೆಯೇ ನನ್ನೊಂದಿಗಿತ್ತು.) 11 ಆದ್ದರಿಂದ ನಾನು ಬೋಧನೆ ಮಾಡಿದೆನೊ ಅಥವಾ ಇತರ ಅಪೊಸ್ತಲರು ಬೋಧನೆ ಮಾಡಿದರೊ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಸಂದೇಶವನ್ನು ಬೋಧಿಸುತ್ತೇವೆ ಮತ್ತು ನೀವು ನಂಬಿರುವುದೂ ಅದನ್ನೇ.
ನಾವು ಪುನರುತ್ಥಾನ ಹೊಂದುವೆವು
12 ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ? 13 ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ. 14 ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ. 15 ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ. 16 ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ. 17 ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ. 18 ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ. 19 ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.
20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು. 21 ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು. 22 ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ. 23 ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು. 24 ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.
25 ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು. 26 ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ. 27 “ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ” ಉಲ್ಲೇಖನ: ಕೀರ್ತನೆ. 8:6. ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ. 28 ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.
29 ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?
30 ನಮ್ಮ ವಿಷಯವೇನು? ನಾವು ನಮ್ಮನ್ನು ಪ್ರತಿ ತಾಸಿನಲ್ಲಿಯೂ ಅಪಾಯಕ್ಕೆ ಒಡ್ಡುವುದು ಏಕೆ? 31 ನಾನು ಪ್ರತಿದಿನವೂ ಸಾಯುತ್ತೇನೆ. ಸಹೋದರರೇ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದಾಗಿದೆ. 32 ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”
33 ಮೋಸ ಹೋಗಬೇಡಿರಿ. “ದುರ್ಜನರ ಸಹವಾಸ ಸದಾಚಾರದ ಭಂಗ.” 34 ಸ್ವಸ್ಥಚಿತ್ತರಾಗಿರಿ ಮತ್ತು ಪಾಪಮಾಡುವುದನ್ನು ನಿಲ್ಲಿಸಿರಿ. ನಿಮ್ಮಲ್ಲಿ ಕೆಲವರು ದೇವರನ್ನು ಅರಿತುಕೊಂಡಿಲ್ಲ. ನಿಮಗೆ ನಾಚಿಕೆ ಆಗಲೆಂದು ಇದನ್ನು ಹೇಳುತ್ತಿದ್ದೇನೆ.
ಯಾವ ಬಗೆಯ ದೇಹವನ್ನು ನಾವು ಹೊಂದಿಕೊಳ್ಳುವೆವು?
35 “ಸತ್ತವರು ಹೇಗೆ ಎದ್ದುಬರುವರು? ಅವರಿಗೆ ಯಾವ ಬಗೆಯ ದೇಹವಿರುತ್ತದೆ?” ಎಂದು ಕೆಲವರು ಕೇಳಬಹುದು. 36 ಅವು ಮೂಢ ಪ್ರಶ್ನೆಗಳು. ನೀವು ಬೀಜವನ್ನು ಬಿತ್ತಿದಾಗ, ಆ ಬೀಜವು ಜೀವ ಹೊಂದಿಕೊಂಡು ಬೆಳೆಯುವುದಕ್ಕಿಂತ ಮುಂಚೆ ಸಾಯಲೇಬೇಕು. 37 ನೀವು ಬೀಜವನ್ನು ಬಿತ್ತುವಾಗ, ಆ ಬೀಜವು ಕೇವಲ ಕಾಳಾಗಿರುತ್ತದೆಯೇ ಹೊರತು ಮುಂದೆ ಹುಟ್ಟಿ ಬರಲಿರುವ ಗಿಡವಾಗಿರುವುದಿಲ್ಲ. ನೀವು ಬಿತ್ತುವ ಬೀಜವು ಕೇವಲ ಕಾಳಷ್ಟೆ. ಅದು ಗೋಧಿಯಾಗಿರಬಹುದು ಅಥವಾ ಬೇರೆ ಕಾಳಾಗಿರಬಹುದು. 38 ಅದರೆ ದೇವರು ತನ್ನ ಯೋಜನೆಗನುಸಾರವಾಗಿ ಅದಕ್ಕೆ ದೇಹವನ್ನು ಕೊಡುತ್ತಾನೆ ಮತ್ತು ದೇವರು ಪ್ರತಿಯೊಂದು ಬಗೆಯ ಬೀಜಕ್ಕೆ ಅದರದೇ ಆದ ದೇಹವನ್ನು ಕೊಡುತ್ತಾನೆ. 39 ಎಲ್ಲಾ ಶರೀರಗಳು ಒಂದೇ ರೀತಿಯ ಮಾಂಸವನ್ನು ಹೊಂದಿರುವುದಿಲ್ಲ. ಜನರಿಗೆ ಒಂದು ಬಗೆಯ ಮಾಂಸವಿರುತ್ತದೆ; ಪ್ರಾಣಿಗಳಿಗೆ ಮತ್ತೊಂದು ಬಗೆಯ ಮಾಂಸವಿರುತ್ತದೆ; ಪಕ್ಷಿಗಳಿಗೆ ಇನ್ನೊಂದು ಬಗೆಯ ಮಾಂಸವಿರುತ್ತದೆ. ಮೀನುಗಳು ಬೇರೊಂದು ರೀತಿಯ ಮಾಂಸವನ್ನು ಹೊಂದಿರುತ್ತವೆ. 40 ಇದಲ್ಲದೆ ಪರಲೋಕದ ಶರೀರಗಳಿವೆ ಮತ್ತು ಭೂಲೋಕದ ಶರೀರಗಳಿವೆ. ಪರಲೋಕದ ಶರೀರಗಳಿಗೆ ಒಂದು ಬಗೆಯ ಸೌಂದರ್ಯವಿರುತ್ತದೆ. ಭೂಲೋಕದ ಶರೀರಗಳಿಗೆ ಮತ್ತೊಂದು ಬಗೆಯ ಸೌಂದರ್ಯವಿರುತ್ತದೆ. 41 ಸೂರ್ಯನಿಗೆ ಒಂದು ಬಗೆಯ ಸೌಂದರ್ಯವಿದೆ; ಚಂದ್ರನಿಗೆ ಮತ್ತೊಂದು ಬಗೆಯ ಸೌಂದರ್ಯವಿದೆ. ನಕ್ಷತ್ರಗಳಿಗೆ ಇನ್ನೊಂದು ಬಗೆಯ ಸೌಂದರ್ಯವಿದೆ. ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ.
42 ಸತ್ತವರಿಗಾಗುವ ಪುನರುತ್ಥಾನವು ಅದೇ ರೀತಿಯಾಗಿರುವುದು. ಬಿತ್ತಲ್ಪಟ್ಟ ದೇಹವು ಹಾಳಾಗುವುದು ಮತ್ತು ಕೊಳೆತು ಹೋಗುವುದು. ಆದರೆ ಜೀವಂತವಾಗಿ ಎದ್ದುಬರುವ ಆ ದೇಹವನ್ನು ನಾಶಮಾಡಲು ಸಾಧ್ಯವೇ ಇಲ್ಲ. 43 ದೇಹವು ಹೀನಾವಸ್ಥೆಯಲ್ಲಿ ಬಿತ್ತಲ್ಪಡುವುದು, ಆದರೆ ಮಹಿಮೆಯೊಡನೆ ಎದ್ದುಬರುವುದು. ದೇಹವು ಬಿತ್ತಲ್ಪಟ್ಟಾಗ, ಅದು ಬಲಹೀನವಾಗಿರುತ್ತದೆ. ಆದರೆ ಅದು ಎದ್ದುಬಂದಾಗ ಅದಕ್ಕೆ ಶಕ್ತಿಯಿರುತ್ತದೆ. 44 ಬಿತ್ತಲ್ಪಟ್ಟ ದೇಹವು ಭೌತಿಕವಾದದ್ದು. ಆದರೆ ಅದು ಎದ್ದುಬಂದಾಗ, ಆತ್ಮಿಕ ದೇಹವಾಗಿರುತ್ತದೆ.
ಭೌತಿಕ ದೇಹವಿದೆ. ಆದ್ದರಿಂದ ಆತ್ಮಿಕ ದೇಹವೂ ಇದೆ. 45 “ಮೊದಲನೆ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು” ಉಲ್ಲೇಖನ: ಆದಿಕಾಂಡ 2:7. ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಆದಾಮನು (ಕ್ರಿಸ್ತನು) ಜೀವಕೊಡುವ ಜೀವಾತ್ಮನಾದನು. 46 ಮೊದಲು ಬಂದವನು ಆತ್ಮಿಕ ಮನುಷ್ಯನಲ್ಲ, ಅವನು ಪ್ರಾಕೃತ ಮನುಷ್ಯ. ಅನಂತರ ಆತ್ಮಿಕ ಮನುಷ್ಯನು ಬಂದನು. 47 ಮೊದಲನೆಯ ಮನುಷ್ಯನು ಭೂಮಿಯ ಧೂಳಿನಿಂದ ಬಂದನು. ಆದರೆ ಎರಡನೆಯ ಮನುಷ್ಯನು (ಕ್ರಿಸ್ತನು) ಪರಲೋಕದಿಂದ ಬಂದನು. 48 ಜನರು ಭೂಮಿಗೆ ಸಂಬಂಧಪಟ್ಟವರು. ಅವರು ಭೂಮಿಯ ಮೊದಲನೆ ಮನುಷ್ಯನಂತಿದ್ದಾರೆ. ಆದರೆ ಪರಲೋಕಕ್ಕೆ ಸಂಬಂಧಪಟ್ಟವರು ಪರಲೋಕದ ಮನುಷ್ಯನಂತಿದ್ದಾರೆ. 49 ಭೂಮಿಯ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಂಡೆವು. ಆದ್ದರಿಂದ ಪರಲೋಕದ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಳ್ಳುವೆವು.
50 ಸಹೋದರ ಸಹೋದರಿಯರೇ, ನಾನು ಹೇಳುವುದೇನೆಂದರೆ, ಮಾಂಸ ಮತ್ತು ರಕ್ತ (ಭೌತಿಕ ದೇಹ) ಪರಲೋಕ ರಾಜ್ಯದಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. ನಾಶವಾಗುವಂಥದ್ದು ಎಂದಿಗೂ ನಾಶವಾಗದ ಒಂದರಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. 51 ಆದರೆ ಕೇಳಿರಿ, ನಾನು ನಿಮಗೆ ಈ ರಹಸ್ಯವೊಂದನ್ನು ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಆದರೆ ನಾವೆಲ್ಲರೂ ಮಾರ್ಪಾಟಾಗುವೆವು. 52 ಇದಕ್ಕೆ ಕೇವಲ ಒಂದು ಕ್ಷಣಕಾಲ ಸಾಕು. ರೆಪ್ಪೆಬಡಿಯುವಷ್ಟು ವೇಗವಾಗಿ ನಾವು ಮಾರ್ಪಾಟಾಗುವೆವು. ಕಡೇ ತುತ್ತೂರಿಯನ್ನು ಊದಿದಾಗ ಇದು ಸಂಭವಿಸುವುದು. ತುತ್ತೂರಿಯನ್ನು ಊದಲಾಗುವುದು; ಆಗ ಸತ್ತುಹೋಗಿದ್ದ ವಿಶ್ವಾಸಿಗಳು ಸದಾಕಾಲ ಜೀವಿಸುವುದಕ್ಕಾಗಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಾಟಾಗುವೆವು. 53 ಅಳಿದುಹೋಗುವ ಈ ದೇಹವು ಅಳಿದುಹೋಗದ್ದನ್ನು ಧರಿಸಿಕೊಳ್ಳುವುದು. ಮರಣಾಧೀನವಾದ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು. 54 ಅಳಿದುಹೋಗುವ ಈ ದೇಹ ಅಮರತ್ವವನ್ನು ಧರಿಸಿಕೊಂಡಾಗ ಪವಿತ್ರಗ್ರಂಥದ ಈ ಮಾತುಗಳು ನೆರವೇರುತ್ತವೆ:
 
“ಮರಣವು ಜಯದಲ್ಲಿ ನುಂಗಿಯೇಹೋಯಿತು.” ಯೆಶಾಯ 25:8
 
55 “ಮರಣವೇ, ನಿನ್ನ ಜಯವೆಲ್ಲಿ?
ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?” ಹೋಶೇಯ 13:14
 
56 ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ. 57 ಆದರೆ ನಾವು ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನು ನಮಗೆ ಜಯವನ್ನು ಕೊಡುತ್ತಾನೆ.
58 ಆದ್ದರಿಂದ, ನನ್ನ ಪ್ರಿಯ ಸಹೋದರ ಸಹೋದರಿಯರೇ, ದೃಢವಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಗಾಗಿ ನಿಮ್ಮನ್ನು ಯಾವಾಗಲೂ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಳ್ಳಿರಿ. ನೀವು ಪ್ರಭುವಿಗಾಗಿ ಪಡುವ ಪ್ರಯಾಸವು ಎಂದಿಗೂ ವ್ಯರ್ಥವಾಗುವುದಿಲ್ಲ.

15:27: ಉಲ್ಲೇಖನ: ಕೀರ್ತನೆ. 8:6.

15:45: ಉಲ್ಲೇಖನ: ಆದಿಕಾಂಡ 2:7.