7
ವಿವಾಹ
1 ನೀವು ಬರೆದ ಸಂಗತಿಗಳನ್ನು ಕುರಿತಾಗಿ ಹೇಳುವುದೇನೆಂದರೆ, “ಸ್ತ್ರೀಸಂಪರ್ಕವಿಲ್ಲದೆ ಇರುವುದು ಮನುಷ್ಯನಿಗೆ ಒಳ್ಳೆಯದು.” 2 ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ. 3 ಗಂಡನು ಹೆಂಡತಿಗೆ, ಹೆಂಡತಿಯು ಗಂಡನಿಗೆ ದಾಂಪತ್ಯ ಧರ್ಮ ಪೂರೈಸಲಿ. 4 ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ. 5 ಗಂಡ ಹೆಂಡತಿ ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ಪ್ರಾರ್ಥನೆಗಾಗಿ ಅಗಲಿರಬಹುದಷ್ಟೇ. ಇಲ್ಲದಿದ್ದರೆ, ಸೈತಾನನು ನಿಮ್ಮ ಸಂಯಮ ಇಲ್ಲದಿರುವುದನ್ನು ನೋಡಿ ನಿಮ್ಮನ್ನು ಶೋಧಿಸದಂತೆ ಒಂದುಗೂಡಬೇಕು. 6 ಹೀಗೆ ನಾನು ಹೇಳುವುದು ಸಲಹೆಯೇ ಹೊರತು ಆಜ್ಞೆಯಲ್ಲ. 7 ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ.
8 ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು. 9 ಅವರಿಗೆ ಸ್ವಯಂನಿಯಂತ್ರಣ ಇಲ್ಲದಿದ್ದರೆ, ಮದುವೆಮಾಡಿಕೊಳ್ಳಲಿ, ಕಾಮದಾಶೆ ಪಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮ.
10 ಮದುವೆ ಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಅಲ್ಲ, ನಿಜವಾಗಿ ಕರ್ತದೇವರ ಅಪ್ಪಣೆಯಾಗಿದೆ: ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು. 11 ಒಂದು ವೇಳೆ ಅಗಲಿದರೆ ಆಕೆಯು ಮದುವೆಯಿಲ್ಲದೆ ಇರಬೇಕು. ಇಲ್ಲವೆ ಗಂಡನ ಸಂಗಡ ಸಂಧಾನವಾಗಬೇಕು ಮತ್ತು ಗಂಡನು ಹೆಂಡತಿಯನ್ನು ಬಿಟ್ಟುಬಿಡಬಾರದು.
12 ಉಳಿದವರಿಗೆ ಕರ್ತ ದೇವರಿಂದ ಮಾತು ಇಲ್ಲವಾದರೂ ನಾನು ಹೇಳುವುದೇನೆಂದರೆ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಹೆಂಡತಿಯಿರಲಾಗಿ, ಆಕೆ ಅವನೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಅವನು ಆಕೆಯನ್ನು ಬಿಡದಿರಲಿ. 13 ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ. 14 ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ.
15 ಆದರೆ ಅವಿಶ್ವಾಸಿಯಾದವರು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ. ಇಂಥಾ ವಿಷಯಗಳಲ್ಲಿ ವಿಶ್ವಾಸಿಯಾದ ಸಹೋದರನಾಗಲೀ, ಸಹೋದರಿಯಾಗಲೀ ಬದ್ಧರಲ್ಲ. ಸಮಾಧಾನದಲ್ಲಿ ಬಾಳುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾರೆ. 16 ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವೆಯೋ ಏನೋ ನಿನಗೇನು ಗೊತ್ತು?
ನಿಮ್ಮ ಕರೆಯುವಿಕೆಯ ಸನ್ನಿವೇಶಗಳು
17 ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ. 18 ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ. 19 ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ. 20 ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ.
21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು. 22 ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು. 23 ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ. 24 ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ.
ಮದುವೆಯಾಗದವರನ್ನು ಕುರಿತು
25 ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ. 26 ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ. 27 ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ. 28 ಒಂದು ವೇಳೆ ನೀನು ಮದುವೆ ಮಾಡಿಕೊಂಡರೆ, ಅದು ಪಾಪವಲ್ಲ. ಕನ್ಯೆಯು ಮದುವೆ ಮಾಡಿಕೊಂಡರೆ, ಅದು ಸಹ ಪಾಪವಲ್ಲ. ಆದರೆ ಮದುವೆ ಮಾಡಿಕೊಳ್ಳುವವರು ಈ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು. ನಾನು ನಿಮ್ಮನ್ನು ಇದರಿಂದ ತಪ್ಪಿಸಬೇಕೆಂದು ಅಪೇಕ್ಷಿಸುತ್ತೇನೆ.
29 ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ 30 ದುಃಖಪಡುವವರು ದುಃಖಪಡದವರಂತೆಯೂ ಆನಂದ ಪಡುವವರು ಆನಂದಪಡದವರಂತೆಯೂ ವಸ್ತುಗಳ್ನು ಕೊಂಡುಕೊಳ್ಳುವವರು ತಾವು ಕೊಂಡುಕೊಂಡದ್ದು ತಮ್ಮದಲ್ಲ ಎಂಬಂತೆಯೂ 31 ಲೋಕದ ವಸ್ತುಗಳನ್ನು ಉಪಯೋಗಿಸುವವರು ಅದರಲ್ಲಿಯೇ ಮಗ್ನರಾಗದಿರಲಿ. ಏಕೆಂದರೆ ಈಗಿರುವ ಪ್ರಪಂಚ ಗತಿಸಿಹೋಗುತ್ತಿದೆ.
32 ನೀವು ಚಿಂತೆ ಇಲ್ಲದೆ ಇರಬೇಕೆಂಬುದು ನನ್ನ ಇಷ್ಟ. ಮದುವೆ ಆಗದವನು ಕರ್ತ ಯೇಸುವನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತ ಯೇಸುವಿನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. 33 ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಮಗ್ನನಾಗಿರುತ್ತಾನೆ. 34 ಇದರಿಂದ ಅವನ ಆಸಕ್ತಿಗಳಲ್ಲಿ ಭಿನ್ನತೆಯಿರುತ್ತದೆ. ಮದುವೆಯಾಗದ ಮಹಿಳೆ ಅಥವಾ ಕನ್ಯೆ ದೇಹಾತ್ಮಗಳಲ್ಲಿ ಕರ್ತ ಯೇಸುವಿಗೆ ಸಮರ್ಪಿತರಾಗಿರುವ ಉದ್ದೇಶ ಹೊಂದಿದವರಾಗಿ, ಕರ್ತ ಯೇಸುವಿನ ಕಾರ್ಯಗಳಲ್ಲಿ ಆಸಕ್ತಳಾಗಿರುತ್ತಾರೆ. ಆದರೆ ಮದುವೆಯಾದವಳು, ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. 35 ನಾನು ನಿಮಗೆ ಬಂಧನ ಹಾಕಬೇಕೆಂದು ಇದನ್ನು ಹೇಳದೆ, ಗಮನ ಸೆಳೆಯದ ಭಕ್ತಿಯಿಂದ ಕರ್ತ ಯೇಸುವಿನ ಸೇವೆಯನ್ನು ಮಾಡುವವರಾಗಿ ನೀವು ಜೀವಿಸಬೇಕೆಂದು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೇನೆ.
36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ. 37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು. 38 ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ.
39 ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು. 40 ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ.