ಕೀರ್ತನೆಗಳು
ಗ್ರಂಥಕರ್ತೃತ್ವ
ಕೀರ್ತನೆಗಳು ಸಾಹಿತ್ಯಿಕ ಕವಿತೆಗಳ ಸಂಗ್ರಹವಾಗಿದೆ, ಅನೇಕ ಲೇಖಕರನ್ನು ಒಳಗೊಂಡಿರುವ ಸಂಯೋಜಿತ ಕೃತಿಯೆಂದು ಗುರುತಿಸಲ್ಪಡುವಂಥ ಹಳೇ ಒಡಂಬಡಿಕೆಯ ಪುಸ್ತಕಗಳಲ್ಲಿ ಇದು ಒಂದಾಗಿದೆ, ಇದು ಬಹು ಲೇಖಕರಿಂದ ಬರೆಯಲ್ಪಟ್ಟಿದೆ; ದಾವೀದನು 73 ಬರೆದನು, ಆಸಾಫನು 12 ಬರೆದನು, ಕೋರಹನ ಮಕ್ಕಳು 9 ಬರೆದರು, ಸೊಲೊಮೋನನು 3 ಬರೆದನು, ಏತಾನ್ ಮತ್ತು ಮೋಶೆ ತಲಾ ಒಂದೊಂದು ಬರೆದರು (ಕೀರ್ತ 90), ಮತ್ತು 51 ಕೀರ್ತನೆಗಳು ಅನಾಮಧೇಯ ಕೀರ್ತನೆಗಳಾಗಿವೆ. ಸೊಲೊಮೋನನನ್ನು ಮತ್ತು ಮೋಶೆಯನ್ನು ಹೊರತುಪಡಿಸಿ, ಈ ಎಲ್ಲಾ ಹೆಚ್ಚುವರಿ ಲೇಖಕರು ದಾವೀದನ ಆಳ್ವಿಕೆಯ ಸಮಯದಲ್ಲಿ ದೇವದರ್ಶನ ಗುಡಾರದ ಆರಾಧನೆಗೆ ಸಂಗೀತವನ್ನು ಒದಗಿಸಲು ಜವಾಬ್ದಾರರಾಗಿರುವ ಯಾಜಕರು ಅಥವಾ ಲೇವಿಯರು ಆಗಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1440-430 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಕೆಲವೊಂದು ಕೀರ್ತನೆಗಳು ಮೋಶೆಯ ಕಾಲದಷ್ಟು ಹಿಂದಿನ ಇತಿಹಾಸದಲ್ಲಿಯೂ ಬರೆಯಲ್ಪಟ್ಟವು, ದಾವೀದನ, ಆಸಾಫನ ಮತ್ತು ಸೊಲೊಮೋನನ ಕಾಲದಲ್ಲೆಲ್ಲಾ, ಬಾಬೆಲಿನ ಸೆರೆವಾಸದ ನಂತರ ಬದುಕಿದ ಎಜ್ರಹಿಯರ ಕಾಲದವರೆಗೂ ಬರೆಯಲ್ಪಟ್ಟವು, ಇದರರ್ಥ ಪುಸ್ತಕದ ಬರವಣಿಗೆಯು ಸಾವಿರ ವರ್ಷಗಳ ಕಾಲಾವಧಿಯಾಗಿದೆ.
ಸ್ವೀಕೃತದಾರರು
ಇಸ್ರಾಯೇಲ್ ರಾಷ್ಟ್ರವು, ದೇವರು ಇತಿಹಾಸದುದ್ದಕ್ಕೂ ಅವರಿಗೂ ಮತ್ತು ವಿಶ್ವಾಸಿಗಳಿಗೂ ಮಾಡಿರುವಂಥದ್ದರ ನೆನಪೋಲೆಯಾಗಿದೆ.
ಉದ್ದೇಶ
ಕೀರ್ತನೆಗಳ ಗ್ರಂಥವು ದೇವರು ಮತ್ತು ಆತನ ಸೃಷ್ಟಿ, ಯುದ್ಧ, ಆರಾಧನೆ, ಜ್ಞಾನ, ಪಾಪ ಮತ್ತು ದುಷ್ಟತ್ವ, ನ್ಯಾಯತೀರ್ಪು, ನೀತಿ ಮತ್ತು ಮೆಸ್ಸೀಯ ಆಗಮನದಂತಹ ವಿಷಯಗಳನ್ನು ಒಳಗೊಂಡಿದೆ. ಕೀರ್ತನೆಗಳ ಗ್ರಂಥವು ಅದರ ಅನೇಕ ಪುಟಗಳಾದ್ಯಂತ, ತನ್ನ ಓದುಗಾರರನ್ನು ದೇವರು ಯಾರಾಗಿದ್ದಾನೆಂದು ತಿಳಿಸಿ ಮತ್ತು ಆತನು ಮಾಡಿರುವಂಥ ಕಾರ್ಯಗಳಿಗಾಗಿ ಆತನನ್ನು ಸ್ತುತಿಸಲು ಪ್ರೋತ್ಸಾಹಿಸುತ್ತದೆ. ಕೀರ್ತನೆಗಳ ಗ್ರಂಥವು ನಮ್ಮ ದೇವರ ಮಹತ್ವವನ್ನು ವಿಶದಪಡಿಸುತ್ತದೆ, ಅಪತ್ತಿನ ಕಾಲದಲ್ಲಿ ನಮ್ಮೊಂದಿಗಿನ ಆತನ ನಂಬಿಗಸ್ತಿಕೆಯನ್ನು ದೃಢಪಡಿಸುತ್ತದೆ, ಮತ್ತು ಆತನ ವಾಕ್ಯದ ಸಂಪೂರ್ಣ ಕೇಂದ್ರೀಯತೆಯ ನಮಗೆ ನೆನಪಿಸುತ್ತದೆ.
ಮುಖ್ಯಾಂಶ
ಸ್ತುತಿ
ಪರಿವಿಡಿ
1. ಮೆಸ್ಸೀಯನ ಪುಸ್ತಕ — 1:1-41:13
2. ಅಪೇಕ್ಷೆಯ ಪುಸ್ತಕ — 42:1-72:20
3. ಇಸ್ರಾಯೇಲ್ಯರ ಪುಸ್ತಕ — 73:1-89:52
4. ದೇವರ ನಿಯಮದ ಪುಸ್ತಕ — 90:1-106:48
5. ಸ್ತುತಿಯ ಪುಸ್ತಕ — 107:1-150:6
ಪ್ರಥಮ ಭಾಗವು (1 - 41)
1
ಸನ್ಮಾರ್ಗಸ್ಥರು ಮತ್ತು ದುರ್ಮಾರ್ಗಸ್ಥರು
ಯೆರೆ 17:5-8; ಮತ್ತಾ 7:13,14
ಯಾರು ದುಷ್ಟರ ಆಲೋಚನೆಯಂತೆ ನಡೆಯದೆ,
ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ,
ಧರ್ಮನಿಂದಕರೊಡನೆ ಕುಳಿತುಕೊಳ್ಳದೆ,
ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ,
ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು.
ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು.
ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ.
ಅದರ ಎಲೆ ಬಾಡುವುದೇ ಇಲ್ಲ.
ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು.
ದುಷ್ಟರೋ ಹಾಗಲ್ಲ;
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ.
ಆದುದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲಿಯೂ,
ಪಾಪಾತ್ಮರು ನೀತಿವಂತರ ಸಭೆಯಲ್ಲಿಯೂ ನಿಲ್ಲುವುದಿಲ್ಲ.
ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು;
ದುಷ್ಟರ ಮಾರ್ಗವೋ ನಾಶವಾಗುವುದು.