ಯೆರೆಮೀಯನು
ಗ್ರಂಥಕರ್ತೃತ್ವ
ಯೆರೆಮೀಯನು, ಅವನ ಬರಹಗಾರನಾದ ಬಾರೂಕನೊಂದಿಗೆ ಸೇರಿ ಬರೆದದ್ದು. ಯಾಜಕ ಮತ್ತು ಪ್ರವಾದಿಯಾಗಿ ಸೇವೆ ಸಲ್ಲಿಸಿದ ಯೆರೆಮೀಯನು, ಹಿಲ್ಕೀಯ ಎಂಬ ಯಾಜಕನ ಮಗನಾಗಿದ್ದನು (ಮಹಾಯಾಜಕನಲ್ಲ, 2 ಅರಸು 22:8. ಅವನು ಅನಾತೋತ್ ಎಂಬ ಚಿಕ್ಕ ಗ್ರಾಮದಿಂದ ಬಂದವನು ಯೆರೆ 1:1). ಬಾರೂಕನೆಂಬ ಹೆಸರುಳ್ಳ ಬರಹಗಾರನು ಅವನಿಗೆ ಸೇವೆಯಲ್ಲಿ ಸಹಾಯ ಮಾಡುತ್ತಿದ್ದನು, ಯೆರೆಮೀಯನು ಹೇಳುತ್ತಿದ್ದನು ಮತ್ತು ಅವನು ಬರೆದಿಡುತ್ತಿದ್ದನು ಮತ್ತು ಪ್ರವಾದಿಯ ಸಂದೇಶಗಳಿಂದ ಸಂಕಲಿಸಿದ ಬರಹಗಳನ್ನು ಕಾಪಾಡುತ್ತಿದ್ದನು (ಯೆರೆ 36:4,32; 45:1). ಯೆರೆಮೀಯನು ಕಣ್ಣೀರಿನ ಪ್ರವಾದಿಯೆಂದು ಹೆಸರುವಾಸಿಯಾಗಿದ್ದನು (ಯೆರೆ 9:1; 13:17; 14:17), ಬಾಬೆಲಿನವರ ಆಕ್ರಮಣದಿಂದ ಉಂಟಾಗುವ ನ್ಯಾಯತೀರ್ಪಿನ ಕುರಿತಾದ ಅವನ ಭವಿಷ್ಯವಾಣಿಗಳ ನಿಮಿತ್ತ ಸಂಘರ್ಷಯಾತನೆಯ ಜೀವನವನ್ನು ನಡೆಸುತ್ತಿದ್ದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 626-570 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬೆಲಿನ ಸೆರೆವಾಸದ ಸಮಯದಲ್ಲಿ ಬಹುಶಃ ಇದನ್ನು ಪೂರ್ಣಗೊಳಿಸಿದಾದರೂ, ಪುಸ್ತಕದ ಸಂಪಾದನೆಯು ಅದಾದ ನಂತರವೂ ಮುಂದುವರೆದಿದೆ ಎಂದು ಕೆಲವರು ಪರಿಗಣಿಸಿದ್ದಾರೆ.
ಸ್ವೀಕೃತದಾರರು
ಯೆಹೂದದ ಮತ್ತು ಯೆರೂಸಲೇಮಿನ ಜನರು ಮತ್ತು ಸತ್ಯವೇದದ ಓದುಗಾರರೆಲ್ಲರು.
ಉದ್ದೇಶ
ಕ್ರಿಸ್ತನು ಭೂಮಿಗೆ ಬಂದಾಗ ದೇವರು ತನ್ನ ಜನರೊಂದಿಗೆ ಮಾಡಲು ಉದ್ದೇಶಿಸಿದ ಹೊಸ ಒಡಂಬಡಿಕೆಯ ಸ್ಪಷ್ಟ ನೋಟವನ್ನು ಯೆರೆಮೀಯನ ಪುಸ್ತಕವು ನಮಗೆ ಒದಗಿಸುತ್ತದೆ. ಈ ಹೊಸ ಒಡಂಬಡಿಕೆಯು ದೇವರ ಜನರ ಪುನಃಸ್ಥಾಪನೆಯ ವಿಧಾನವಾಗಿದೆ, ಹೇಗೆಂದರೆ ಆತನು ತನ್ನ ಧರ್ಮಶಾಸ್ತ್ರವನ್ನು ಅವರೊಳಗೆ ಇಡುವನು, ಕಲ್ಲಿನ ಹಲಿಗೆಗಳ ಬದಲಿಗೆ ಮಾಂಸದ ಹೃದಯದ ಮೇಲೆ ಬರೆಯುತ್ತಾನೆ. ಯೆಹೂದ್ಯರೊಂದಿಗಿನ ಅಂತಿಮ ಪ್ರವಾದನೆಯನ್ನು, ದೇಶದವರು ಪಶ್ಚಾತ್ತಾಪಪಡದಿದ್ದರೆ ಮುಂಬರುವ ನಾಶದ ಎಚ್ಚರಿಕೆಯನ್ನು ಯೆರೆಮೀಯನ ಪುಸ್ತಕವು ಉಲ್ಲೇಖಿಸುತ್ತದೆ. ಯೆರೆಮೀಯನು ದೇವರ ಕಡೆಗೆ ಹಿಂದಿರುಗುವಂತೆ ದೇಶಕ್ಕೆ ಕರೆ ನೀಡುತ್ತಾನೆ. ಅದೇ ಸಮಯದಲ್ಲಿ, ಯೆಹೂದವು ವಿಗ್ರಹಾರಾಧನೆ ಮತ್ತು ಅನೈತಿಕತೆಯಿಂದ ಪಶ್ಚಾತ್ತಾಪಪಡದ ಕಾರಣದಿಂದಾಗಿ ಅದರ ನಾಶದ ಅನಿವಾರ್ಯತೆಯನ್ನು ಯೆರೆಮೀಯನು ಗುರುತಿಸುತ್ತಾನೆ.
ಮುಖ್ಯಾಂಶ
ನ್ಯಾಯತೀರ್ಪು
ಪರಿವಿಡಿ
1. ಯೆರೆಮೀಯನಿಗೆ ದೇವರ ಕರೆ — 1:1-19
2. ಯೆಹೂದಕ್ಕೆ ಎಚ್ಚರಿಕೆಗಳು — 2:1-35:19
3. ಯೆರೆಮೀಯನ ಸಂಕಷ್ಟ — 36:1-38:28
4. ಯೆರೂಸಲೇಮಿನ ಪತನ ಮತ್ತು ಅದರ ಪರಿಣಾಮಗಳು — 39:1-45:5
5. ರಾಷ್ಟ್ರಗಳ ಬಗ್ಗೆ ಪ್ರವಾದನೆಗಳು — 46:1-51:64
6. ಐತಿಹಾಸಿಕ ಅನುಬಂಧ — 52:1-34
1
ಪೀಠಿಕೆ
1 ಬೆನ್ಯಾಮೀನ್ ಸೀಮೆಗೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನೂ, ಹಿಲ್ಕೀಯನ ಮಗನೂ ಆದ ಯೆರೆಮೀಯನ ಪ್ರವಾದನೆಗಳು. 2 ಯೆಹೂದದ ಅರಸನೂ, ಆಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವನಿಂದ ಈ ವಾಕ್ಯವನ್ನು ಹೊಂದಿದನು. 3 ಇದಲ್ಲದೆ ಯೆಹೂದದ ಅರಸನೂ, ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಯೆಹೂದದ ಅರಸನೂ, ಯೋಷೀಯನ ಮಗನೂ ಆದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದ ಐದನೆಯ ತಿಂಗಳಿನಲ್ಲಿ ಯೆರೂಸಲೇಮಿನವರು ಸೆರೆಹೋಗುವ ತನಕ ಅವನು ಯೆಹೋವನ ವಾಕ್ಯವನ್ನು ಹೊಂದುತ್ತಾ ಇದ್ದನು.
ಯೆರೆಮೀಯನ ಕರೆ
4 ಕರ್ತನಾದ ಯೆಹೋವನು ನನಗೆ,
5 “ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆ ತಿಳಿದಿದ್ದೆನು; ನೀನು ಉದರದಿಂದ ಬರುವುದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು. ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ” ಎಂಬ ವಾಕ್ಯವನ್ನು ದಯಪಾಲಿಸಿದನು.
6 ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದು ಅರಿಕೆ ಮಾಡಿದೆನು.
7 ಆಗ ಯೆಹೋವನು ನನಗೆ, “ಬಾಲಕನು ಎನ್ನಬೇಡ; ನಾನು ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಖಂಡಿತವಾಗಿ ಹೋಗುವಿ; ನಾನು ಆಜ್ಞಾಪಿಸುವುದನ್ನೆಲ್ಲಾ ಖಂಡಿತವಾಗಿ ನುಡಿಯುವಿ.
8 ಅವರಿಗೆ ಅಂಜಬೇಡ; ನಿನ್ನನ್ನು ಉದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು” ಎಂದು ಹೇಳಿದನು.
9 ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ;
10 ಕಿತ್ತುಹಾಕುವುದು ಮತ್ತು ಮುರಿದುಹಾಕುವುದು, ನಾಶಮಾಡುವುದು ಮತ್ತು ನೆಲಸಮಮಾಡುವುದು ಈ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೋಸ್ಕರ ಜನಾಂಗಗಳ ಮೇಲೂ, ರಾಜ್ಯಗಳ ಮೇಲೂ ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.
ಎರಡು ದರ್ಶನಗಳು
11 ಇದಲ್ಲದೆ, “ಯೆರೆಮೀಯನೇ, ಏನು ನೋಡುತ್ತಿರುವೆ?” ಎಂಬ ಯೆಹೋವನ ಮಾತು ನನಗೆ ಕೇಳಿ ಬಂತು. ಅದಕ್ಕೆ ನಾನು, “ಬಾದಾಮಿ ಮರದ ಕೊಂಬೆಯನ್ನು ನೋಡುತ್ತೇನೆ” ಅಂದೆನು. 12 ಆಗ ಯೆಹೋವನು ನನಗೆ, “ಸರಿಯಾಗಿ ನೋಡಿದ್ದಿ, ನನ್ನ ಮಾತನ್ನು ನೆರವೇರಿಸುವುದಕ್ಕೆ ನೀನು ಎಚ್ಚರಗೊಂಡಿರುವೆ ಎಂದು ತಿಳಿದುಕೋ” ಎಂಬುದಾಗಿ ಹೇಳಿದನು.
13 ಎರಡನೆಯ ಬಾರಿ, “ನೀನು ಏನು ನೋಡುತ್ತಿರುವೆ?” ಎಂಬ ಯೆಹೋವನ ಮಾತನ್ನು ಕೇಳಿದೆನು. ಅದಕ್ಕೆ ನಾನು, “ಉರಿಸುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯನ್ನು ನೋಡುತ್ತೇನೆ. ಅದರ ಬಾಯಿ ಉತ್ತರ ದಿಕ್ಕಿನಿಂದ ಈ ಕಡೆಗೆ ಬಾಗಿಕೊಂಡಿದೆ” ಅಂದೆನು. 14 ಆಗ ಯೆಹೋವನು ನನಗೆ, “ಈ ದೇಶದ ನಿವಾಸಿಗಳೆಲ್ಲರ ಮೇಲೆ ಉತ್ತರ ದಿಕ್ಕಿನಿಂದ ಕೇಡು ಉಕ್ಕಿ ಬರುವುದು. 15 ಇಗೋ, ನಾನು ಉತ್ತರ ದಿಕ್ಕಿನ ರಾಜ್ಯಗಳ ಜನಾಂಗಗಳನ್ನೆಲ್ಲಾ ಕರೆಯುವೆನು; ಅವರು ಬಂದು ಯೆರೂಸಲೇಮಿನ ಊರ ಬಾಗಿಲುಗಳ ಎದುರಿನಲ್ಲಿಯೂ, ಅದರ ಎಲ್ಲಾ ಪೌಳಿಗೋಡೆಗಳ ಸುತ್ತಲೂ, ಯೆಹೂದದ ಸಕಲ ಪಟ್ಟಣಗಳ ಮುಂದೆಯೂ ತಮ್ಮ ತಮ್ಮ ನ್ಯಾಯಾಸನಗಳನ್ನು ಹಾಕಿಕೊಳ್ಳುವರು. 16 ನನ್ನ ಜನರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಹೋಮಮಾಡಿದ್ದು, ತಮ್ಮ ಕೈಯಿಂದ ನಿರ್ಮಿಸಿದವುಗಳಿಗೆ* 1:16 ನಿರ್ಮಿಸಿದವುಗಳಿಗೆ ವಿಗ್ರಹಗಳಿಗೆ. ಅಡ್ಡಬಿದ್ದ ಅಧರ್ಮಕ್ಕೆಲ್ಲಾ ನಾನು ಅವರಿಗೆ ವಿಧಿಸಿರುವ ನ್ಯಾಯದಂಡನೆಗಳನ್ನು ತಿಳಿಸುವೆನು. 17 ಹೀಗಿರಲು ನೀನು ಎದ್ದು ನಡುಕಟ್ಟಿಕೊಂಡು ನಾನು ಆಜ್ಞಾಪಿಸುವುದನ್ನೆಲ್ಲಾ ಅವರಿಗೆ ಹೇಳು. ನೀನು ಅವರಿಗೆ ಭಯಪಡಬೇಡ; ಭಯಪಟ್ಟರೆ ನಾನು ನಿನ್ನನ್ನು ಅವರ ಮುಂದೆ ಹೆದರಿಸುವೆನು. 18 ಇಗೋ, ನಾನು ಈ ಹೊತ್ತು ನಿನ್ನನ್ನು ಯೆಹೂದದ ಅರಸರು, ಅಧಿಪತಿಗಳು, ಯಾಜಕರು, ಸಾಧಾರಣ ಜನರು, ಅಂತು ದೇಶದವರೆಲ್ಲರನ್ನೂ ಎದುರಿಸತಕ್ಕ ಕೋಟೆಕೊತ್ತಲದ ಪಟ್ಟಣವನ್ನಾಗಿಯೂ, ಕಬ್ಬಿಣದ ಕಂಬವನ್ನಾಗಿಯೂ, ತಾಮ್ರದ ಪೌಳಿಗೋಡೆಯನ್ನಾಗಿಯೂ ಸ್ಥಾಪಿಸಿದ್ದೇನೆ. 19 ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು” ಎಂದು ಹೇಳಿದನು.