ಹಬಕ್ಕೂಕನು
ಗ್ರಂಥಕರ್ತೃತ್ವ
ಹಬಕ್ಕೂಕನ ಪುಸ್ತಕವು ಪ್ರವಾದಿಯಾದ ಹಬಕ್ಕೂಕನಿಂದ ನುಡಿಯಲ್ಪಟ್ಟ ದೈವೋಕ್ತಿ ಎಂದು ಹಬ 1:1 ಗುರುತಿಸುತ್ತದೆ. ಅವನ ಹೆಸರಿಗೆ ಅತೀತವಾಗಿ ನಾವು ಮೂಲತಃ ಹಬಕ್ಕೂಕನ ಬಗ್ಗೆ ನಮಗೇನು ಗೊತ್ತಿಲ್ಲ. ಅವನು “ಪ್ರವಾದಿಯಾದ ಹಬಕ್ಕೂಕನು” ಎಂದು ಕರೆಯಲ್ಪಡುವ ಸಂಗತಿಯು ಅವನು ಪ್ರಸಿದ್ಧನಾದವನು ಮತ್ತು ಹೆಚ್ಚಿನ ಪರಿಚಯದ ಅಗತ್ಯವಿಲ್ಲ ಎಂದು ಸೂಚಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 612-605 ರ ನಡುವಿನ ಕಾಲದಲ್ಲಿ ನಡೆದಿರಬಹುದು.
ಹಬಕ್ಕೂಕನು ಈ ಪುಸ್ತಕವನ್ನು ಯೆಹೂದದ ಪತನಕ್ಕಿಂತ ಮುಂಚೆ ದಕ್ಷಿಣ ರಾಜ್ಯದಲ್ಲಿ ಬರೆದಿದ್ದಾನೆ.
ಸ್ವೀಕೃತದಾರರು
ಯೆಹೂದದ ಜನರು (ದಕ್ಷಿಣ ರಾಜ್ಯ) ಮತ್ತು ಎಲ್ಲೆಡೆಯಿರುವ ದೇವರ ಜನರಿಗಿರುವ ಸಾಮಾನ್ಯ ಪತ್ರ.
ಉದ್ದೇಶ
ದೇವರು ತಾನು ಆದುಕೊಂಡ ಜನರನ್ನು ಅವರ ವೈರಿಗಳ ಕೈಯಲ್ಲಿ ಪ್ರಸಕ್ತ ಸಂಕಟದ ಮೂಲಕ ಹಾದುಹೋಗಲು ಏಕೆ ಅನುಮತಿಸುತ್ತಾನೆಂದು ಹಬಕ್ಕೂಕನು ಆಶ್ಚರ್ಯಪಡುತ್ತಿದ್ದನು. ದೇವರು ಉತ್ತರಿಸಿದನು ಮತ್ತು ಹಬಕ್ಕೂಕನ ನಂಬಿಕೆಯು ಪುನಃಸ್ಥಾಪನೆಯಾಯಿತು, ಯೆಹೋವನು ತನ್ನ ಜನರ ಸಂರಕ್ಷಕನಾಗಿ, ತನ್ನ ಮೇಲೆ ಭರವಸೆಯಿಡುವವರನ್ನು ಕಾಪಾಡುತ್ತಾನೆ ಎಂದು ಘೋಷಿಸುವುದು, ಯೆಹೋವನು ಯೆಹೂದದ ಸಾರ್ವಭೌಮ ಶೂರನಾಗಿ, ಒಂದು ದಿನ ಅನ್ಯಾಯಸ್ಥರಾದ ಬಾಬಿಲೋನಿಯದವರಿಗೆ ನ್ಯಾಯತೀರಿಸುತ್ತಾನೆಂದು ಘೋಷಿಸುವುದು ಈ ಪುಸ್ತಕದ ಉದ್ದೇಶವಾಗಿದೆ. ಹಬಕ್ಕೂಕನ ಪುಸ್ತಕವು ಆಹಂಕಾರಿಗಳು ತಗ್ಗಿಸಲ್ಪಡುತ್ತಾರೆ ಮತ್ತು ನೀತಿವಂತರು ದೇವರಲ್ಲಿನ ನಂಬಿಕೆಯಿಂದ ಜೀವಿಸುತ್ತಾರೆ ಎಂಬ ಚಿತ್ರಣವನ್ನು ನಮಗೆ ನೀಡುತ್ತದೆ (2:4).
ಮುಖ್ಯಾಂಶ
ಸಾರ್ವಭೌಮನಾದ ದೇವರನ್ನು ನಂಬುವುದು
ಪರಿವಿಡಿ
1. ಹಬಕ್ಕೂಕನ ದೂರುಗಳು — 1:1-2:20
2. ಹಬಕ್ಕೂಕನ ಪ್ರಾರ್ಥನೆ — 3:1-19
1
ಹಬಕ್ಕೂಕನ ದೂರು
ಪ್ರವಾದಿಯಾದ ಹಬಕ್ಕೂಕನಿಗೆ ಕಂಡುಬಂದ ದೈವೋಕ್ತಿ.
ಯೆಹೋವನೇ, ನಾನು ಎಷ್ಟು ಕಾಲ ನಿನಗೆ ಸಹಾಯಕ್ಕಾಗಿ ಮೊರೆಯಿಡುತ್ತಿರಬೇಕು? ನೀನು ಎಷ್ಟು ಕಾಲ ಕೇಳದೇ ಇರುವಿ?
ಹಿಂಸೆ, ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೇ ಇರುವಿ.
ಕೇಡನ್ನೇ ನನ್ನ ಕಣ್ಣಿಗೆ ಏಕೆ ಕಾಣಿಸುವಂತೆ ಮಾಡಿದ್ದಿ? ಕಷ್ಟವನ್ನೇಕೆ ಅನುಭವಿಸುವಂತೆ ಮಾಡಿರುವೆ?
ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ ವ್ಯಾಜ್ಯವೇಳುತ್ತಿದೆ.
ಹೀಗಿರಲು ಧರ್ಮೋಪದೇಶವು ಜಡವಾಗಿದೆ, ನ್ಯಾಯವು ಎಂದಿಗೂ ಸಾಧ್ಯವಾಗುತ್ತಿಲ್ಲ;
ದುಷ್ಟರು ಶಿಷ್ಟರನ್ನು ಆಕ್ರಮಿಸಿರುವುದರಿಂದ ದೊರೆಯುವ ನ್ಯಾಯವೂ ವಕ್ರವಾಗಿಯೇ ಇರುತ್ತದೆ.
ದೇವರ ಉತ್ತರ
ಜನಾಂಗಗಳ ಮಧ್ಯೆ ನಡೆಯುವುದನ್ನು ದೃಷ್ಟಿಸಿ ನೋಡಿ. ಅದರಿಂದ ನೀವು ಬೆರಗಾಗಿ ಹೋಗುವಿರಿ;
ನಿಮ್ಮ ಕಾಲದಲ್ಲೇ ನಾನು ಒಂದು ಕಾರ್ಯವನ್ನು ಮಾಡುವೆನು. ನಾನು ಆ ಕಾರ್ಯದ ಬಗ್ಗೆ ನಿಮಗೆ ಎಷ್ಟು ತಿಳಿಹೇಳಿದರೂ ನೀವು ನಂಬುವುದಿಲ್ಲ.
ಇಗೋ, ನಾನು ಶಕ್ತಿಶಾಲಿಗಳೂ, ತೀಕ್ಷ್ಣಬುದ್ಧಿಯುಳ್ಳವರೂ ಆಗಿರುವ ಕಸ್ದೀಯ* 1:6 ಕಸ್ದೀಯ ಅಥವಾ ಬಾಬೆಲ್. ಜನಾಂಗದವರನ್ನು ನಿಮ್ಮ ವಿರುದ್ಧ ಹುರಿದುಂಬಿಸಿ ಎಬ್ಬಿಸುತ್ತೇನೆ;
ಆ ಜನರು ಭಯಂಕರರೂ, ಉಗ್ರರೂ ಆಗಿ ತಮ್ಮದಲ್ಲದ ಸಂಸ್ಥಾನವನ್ನು ವಶಮಾಡಿಕೊಳ್ಳುವರು ಮತ್ತು ಲೋಕದಲ್ಲೆಲ್ಲಾ ಸಂಚರಿಸುವರು.
ಅವರ ಅಧಿಕಾರವನ್ನೂ ತಮ್ಮದೇ ಆದ ನ್ಯಾಯ ನೀತಿಯನ್ನೂ ರೂಪಿಸಿಕೊಂಡು; ಅವರ ಸ್ವ ಸಾಮರ್ಥ್ಯ, ಸ್ವ ಗೌರವಕ್ಕೆ ಪ್ರಾಮುಖ್ಯತೆ ನೀಡುವರು.
ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿ ಓಡಬಲ್ಲವು, ಸಂಜೆಯ ತೋಳಗಳಿಗಿಂತ ಚುರುಕಾಗಿವೆ;
ಅದರ ಸವಾರರು ರಭಸದಿಂದ ಹಾರಿಬರುವರು, ಬೇಟೆಯನ್ನು ಕಬಳಿಸಲು ಹಾರಿ ಬರುವ ರಣಹದ್ದಿನಂತೆ ದೂರದಿಂದ ಹಾರಿಬರುವರು.
ಹಿಂಸೆ, ಬಾಧೆಯನ್ನು ಗುರಿಯಾಗಿಟ್ಟುಕೊಂಡೆ ಮುನ್ನುಗ್ಗಿ ಬರುವರು.
ಜನರನ್ನು ಮರಳಿನಂತೆ ಲೆಕ್ಕವಿಲ್ಲದಷ್ಟು ಸೆರೆಹಿಡಿದು ಗುಂಪು ಕೂಡಿಸುವರು.
10 ಅವರು ಅರಸರನ್ನು ಧಿಕ್ಕರಿಸಿ ಅಪಹಾಸ್ಯ ಮಾಡುವರು. ಸರದಾರರು ಅಧಿಪತಿಗಳು ಅವರ ಪರಿಹಾಸ್ಯಕ್ಕೆ ಗುರಿಯಾಗುವರು.
ಒಂದೊಂದು ಕೋಟೆಯನ್ನೂ ಆಕ್ರಮಿಸಿ ಧೂಳಿಪಟ ಮಾಡುವರು.
11 ಬಿರುಗಾಳಿಯಂತೆ ಬಂದು ಮಾಯವಾಗುವರು. ತಮ್ಮ ಸ್ವಂತ ಬಲವೇ ದೇವರು ಎಂದು ಭಾವಿಸಿ ಅಹಂಕಾರದಿಂದ ದೇವರನ್ನು ತಾತ್ಸಾರಮಾಡಿ ಅಪರಾಧಿಗಳಾಗಿ ದೈವಕೋಪಕ್ಕೆ ಗುರಿಯಾಗುವರು.
ಪ್ರವಾದಿಯ ಮತ್ತೊಂದು ಆಕ್ಷೇಪಣೆ
12 ನನ್ನ ದೇವರಾದ ಯೆಹೋವನೇ, ನನ್ನ ಸದಮಲಸ್ವಾಮಿಯೇ, ನೀನು ಅನಾದಿಯಿಂದಿದ್ದೀಯಲ್ಲಾ, ನಾವು ಖಂಡಿತ ಸಾಯುವುದಿಲ್ಲ.
ಯೆಹೋವನೇ ನಮ್ಮ ನ್ಯಾಯತೀರ್ಪಿಗಾಗಿ ಅವರನ್ನು ನೇಮಿಸಿರುವೆ; ಶರಣನೇ, ನಮ್ಮನ್ನು ಶಿಕ್ಷಿಸುವುದಕ್ಕಾಗಿ ಅವರನ್ನು ನಮ್ಮ ಮುಂದೆ ನಿಲ್ಲಿಸಿರುವೆ.
13 ನೀನು ಕೇಡನ್ನು ಬಯಸುವಂತಹ ದೇವರಲ್ಲ, ಪವಿತ್ರ ದೃಷ್ಟಿಯಿಂದ ನೋಡುವ ನಿನ್ನ ಕಣ್ಣಿನ ರಕ್ಷಣೆ ನಮ್ಮೊಂದಿಗಿದೆ.
ಆದರೆ ನಮಗಾಗುತ್ತಿರುವ ಕೇಡನ್ನು ನೋಡಿಯೂ ಏಕೆ ಸುಮ್ಮನಿರುವೆ?
ದುಷ್ಟರು ತಮಗಿಂತ ಯೋಗ್ಯನನ್ನು ಕಬಳಿಸುತ್ತಿರುವುದನ್ನು ನೋಡಿ ಏಕೆ ಸುಮ್ಮನಿರುವೇ?
14 ಮನುಷ್ಯರನ್ನು ಸಮುದ್ರದ ಮೀನುಗಳ ಸ್ಥಿತಿಗೆ ಏಕೆ ತಂದಿದ್ದೀ, ಆಳುವವನಿಲ್ಲದ ಕ್ರಿಮಿಕೀಟಗಳ ಗತಿಗೆ ಏಕೆ ಬರಮಾಡಿದ್ದೀ?
15 ನಲಿದಾಡುತ್ತಾ ಶತ್ರುಗಳು ನಮ್ಮನ್ನು ಗಾಳಗಳಿಂದ ಹಿಡಿದು ತಮ್ಮ ಬಲೆಗಳಲ್ಲಿ ರಾಶಿ ರಾಶಿಯಾಗಿ ಬಾಚಿಕೊಂಡು ಹೋಗಬೇಕೋ?
16 ತಮ್ಮ ಬಲೆಗಳಿಗೆ ಆರಾಧನೆ ಮಾಡುತ್ತಾ ಬಲಿ ಕೊಡುತ್ತಾರೆ, ತಮ್ಮ ಜಾಲಗಳ ಎದುರು ಧೂಪಹಾಕುತ್ತಾರೆ;
ಅವುಗಳ ಮೂಲಕವೇ ಅವರ ಭೋಜನವು ಪುಷ್ಟಿಯಾಯಿತು, ಅವರ ಆಹಾರವು ರುಚಿ ಎಂದು ಹೇಳುತ್ತಾರೆ.
17 ಹೀಗಿರಲು, ತಮ್ಮ ಬಲೆಗೆ ಸಿಕ್ಕಿದ್ದನ್ನು ಅವರು ನಿತ್ಯವೂ ಸುರಿಯುತ್ತಿರಲೋ, ಜನಾಂಗಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?

*1:6 1:6 ಕಸ್ದೀಯ ಅಥವಾ ಬಾಬೆಲ್.