ಯೋಹಾನನು
ಬರೆದ ಎರಡನೆಯ ಪತ್ರಿಕೆ
1
1 ಸಭಾಹಿರಿಯನಾದ ನಾನು,
ನಮ್ಮಲ್ಲಿ ವಾಸಿಸುವ ಮತ್ತು ನಮ್ಮೊಂದಿಗೆ ಸದಾಕಾಲವೂ ಇರುವಂಥ ಸತ್ಯದ ನಿಮಿತ್ತವಾಗಿ ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ 2 ಸತ್ಯದಲ್ಲಿ ಪ್ರೀತಿಸುವ ದೇವರಿಂದ ಆಯ್ಕೆಯಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಬರೆಯುವುದೇನೆಂದರೆ:
3 ತಂದೆಯಾದ ದೇವರಿಂದಲೂ ಆ ತಂದೆಯ ಪುತ್ರ ಆಗಿರುವ ಕರ್ತ ಕ್ರಿಸ್ತ ಯೇಸುವಿನಿಂದಲೂ ಕೃಪೆಯು, ಕರುಣೆಯು ಮತ್ತು ಶಾಂತಿಯು ಸತ್ಯಪೂರ್ವಕವಾಗಿ ಪ್ರೀತಿಪೂರ್ವಕವಾಗಿ ನಿಮ್ಮೊಂದಿಗಿರಲಿ.
4 ನಿನ್ನ ಮಕ್ಕಳಲ್ಲಿ ಕೆಲವರು ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ ಸತ್ಯದಲ್ಲಿ ನಡೆಯುವುದನ್ನು ಕಂಡು ನಾನು ಬಹಳ ಸಂತೋಷವುಳ್ಳವನಾದೆನು. 5 ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿನಗೆ ಬರೆಯದೆ ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿನಗೆ ಬರೆಯುವವನಾಗಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ. 6 ದೇವರ ಆಜ್ಞೆಗಳನ್ನು ಅನುಸರಿಸಿ ಬಾಳುವುದೇ ಪ್ರೀತಿ. ಪ್ರೀತಿಯಲ್ಲಿ ಬಾಳಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಅಪ್ಪಣೆಯಾಗಿದೆ.
7 ಏಕೆಂದರೆ ನರಮಾಂಸದಲ್ಲಿ ಬಂದಿರುವ ಕ್ರಿಸ್ತ ಯೇಸುವನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಇಂಥವರೇ ಮೋಸಗಾರರೂ ಕ್ರಿಸ್ತವಿರೋಧಿಗಳೂ ಆಗಿದ್ದಾರೆ. 8 ಪರಿಪೂರ್ಣ ಪ್ರತಿಫಲವನ್ನು ನೀವು ಹೊಂದುವಂತೆ ನಾವು ಪ್ರಯಾಸಪಟ್ಟು ಮಾಡಿದವುಗಳು ನಷ್ಟವಾಗದಂತೆ ಎಚ್ಚರವಹಿಸಿರಿ. 9 ಕ್ರಿಸ್ತ ಯೇಸುವಿನ ಬೋಧನೆಯಲ್ಲಿ ಬಾಳದೆ ಅದನ್ನು ಅತಿಕ್ರಮಿಸುವವರಿಗೆ ದೇವರಿಲ್ಲ. ಕ್ರಿಸ್ತ ಯೇಸುವಿನ ಬೋಧನೆಯಲ್ಲಿ ಬಾಳುವವರಿಗೆ ತಂದೆ ಮತ್ತು ಪುತ್ರ ಇಬ್ಬರೂಇರುತ್ತಾರೆ. 10 ಈ ಬೋಧನೆಯನ್ನು ಒಪ್ಪದಿರುವ ಯಾರಾದರೂ ನಿಮ್ಮ ಬಳಿಗೆ ಬಂದರೆ, ಅವರನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ. ಅವರಿಗೆ, “ವಂದನೆ” ಎಂದೂ ಹೇಳಬೇಡಿರಿ. 11 ಏಕೆಂದರೆ ಅವರಿಗೆ “ವಂದನೆ” ಎಂದು ಹೇಳುವವರು ಅವರ ದುಷ್ಕೃತ್ಯಗಳಲ್ಲಿ ಪಾಲುಗಾರರಾಗುತ್ತಾರೆ.
12 ನಿಮಗೆ ಬರೆಯುವುದಕ್ಕೆ ನನಗೆ ಅನೇಕ ವಿಷಯಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆಯುವುದಕ್ಕೆ ನನಗೆ ಮನಸ್ಸಿಲ್ಲ. ಆದರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಮ್ಮ ಸಂತೋಷವು ಪರಿಪೂರ್ಣವಾಗುವುದು.
13 ದೇವರಿಂದ ಆಯ್ಕೆಯಾದ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ.