ದಾವೀದನ ಮನೆತನವನ್ನು ಪುನಃಸ್ಥಾಪಿಸಬೇಕೆಂಬ ಪ್ರಾರ್ಥನೆ
೧೩೨
ಯಾತ್ರಾಗೀತೆ.
(ಕೀರ್ತ. 89; 2 ಸಮು. 7)
 
೧ ಯೆಹೋವನೇ, ದಾವೀದನ ಹಿತಕ್ಕೋಸ್ಕರ,
ಅವನ ಶ್ರಮೆಗಳನ್ನು ನೆನಪುಮಾಡಿಕೋ.
೨ ಯಾಕೋಬನ ಶೂರನಾದ ಯೆಹೋವನಿಗಾಗಿ
ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ,
೩ “ನಾನು ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ,
ಮಂಚವನ್ನು ಹತ್ತುವುದಿಲ್ಲ,
೪ ಕಣ್ಣುಗಳನ್ನು ಮುಚ್ಚುವುದಿಲ್ಲ,
ರೆಪ್ಪೆಗಳನ್ನು ಕೂಡಿಸುವುದಿಲ್ಲ” ಎಂದು
೫ ಅವನು ಯೆಹೋವನಿಗೆ ಪ್ರಮಾಣಮಾಡಿ,
ಯಾಕೋಬನ ಶೂರನಿಗೆ ಹರಕೆ ಮಾಡಿಕೊಂಡನಲ್ಲಾ.
೬ ಇಗೋ, ಅದು ಎಫ್ರಾತದಲ್ಲಿರುತ್ತದೆಂದು ಕೇಳಿದೆವು;
ಯಹಾರ್ ಮೈದಾನದಲ್ಲಿ ನಮಗೆ ಸಿಕ್ಕಿತು.
೭ “ಬನ್ನಿರಿ, ಆತನ ಮಂದಿರಕ್ಕೆ ಹೋಗಿ
ಆತನ ಪಾದಪೀಠದ ಮುಂದೆ ಅಡ್ಡಬೀಳೋಣ!”
೮ ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ,
ನಿನ್ನ ವಾಸಸ್ಥಾನಕ್ಕೆ ಬಂದು ನೆಲೆಸು.
೯ ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ;
ನಿನ್ನ ಭಕ್ತರು ಉತ್ಸಾಹಧ್ವನಿ ಮಾಡಲಿ.
೧೦ ನಿನ್ನ ಸೇವಕನಾದ ದಾವೀದನನ್ನು ನೆನಪುಮಾಡಿಕೋ;
ನೀನು ಅಭಿಷೇಕಿಸಿದವನನ್ನು ತಳ್ಳಿಬಿಡಬೇಡ.
೧೧ ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ;
ಆತನು ಅದನ್ನು ಬದಲಿಸುವುದಿಲ್ಲ.
“ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು;
೧೨ ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ,
ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವುದಾದರೆ,
ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕುಳಿತುಕೊಳ್ಳುವರು.”
೧೩ ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ,
ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ.
೧೪ ಆತನು, “ಇದು ನನ್ನ ಶಾಶ್ವತ ವಾಸಸ್ಥಾನ;
ಇಲ್ಲೇ ಇರುವೆನು; ಇದು ನನಗೆ ಇಷ್ಟ.
೧೫ ಇದರ ಆದಾಯವನ್ನು ಆಶೀರ್ವದಿಸುವೆನು;
ಇಲ್ಲಿಯ ಬಡವರನ್ನು ಆಹಾರದಿಂದ ತೃಪ್ತಿಗೊಳಿಸುವೆನು;
೧೬ ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು;
ಭಕ್ತರು ಉತ್ಸಾಹಧ್ವನಿ ಮಾಡುವರು.
೧೭ ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು;
ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇಮಿಸಿದ್ದೇನೆ.
೧೮ ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು;
ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವುದು.”