ಯೆಹೋವನೇ ನಿತ್ಯಕ್ಕೂ ರಾಜಾಧಿರಾಜನು
೯೩
(ವಿಮೋ. 15; ಯೆಶಾ. 52:7; ಕೀರ್ತ. 96; 97; 99)
 
೧ ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ;
ಆತನು ಮಹಿಮಾ ವಸ್ತ್ರವನ್ನು ಧರಿಸಿದ್ದಾನೆ,
ಶೌರ್ಯವನ್ನು ನಡುಕಟ್ಟನ್ನಾಗಿ ಬಿಗಿದಿದ್ದಾನೆ;
ಹೌದು, ಭೂಲೋಕವು ಸ್ಥಿರವಾಗಿರುವುದು ಅದು ಕದಲುವುದಿಲ್ಲ.
೨ ಅನಾದಿಯಿಂದ ನಿನ್ನ ಸಿಂಹಾಸನವು ಸ್ಥಿರವಾಗಿದೆ;
ಯುಗಯುಗಾಂತರದಿಂದಲೂ ನೀನು ಇರುವಿ.
೩ ಯೆಹೋವನೇ, ನದಿಗಳು ಮೊರೆದವು, ನದಿಗಳು ಭೋರ್ಗರೆದವು;
ನದಿಗಳು ಘೋಷಿಸುತ್ತವೆ.
೪ ಜಲರಾಶಿಗಳ ಘೋಷಕ್ಕಿಂತಲೂ, ಮಹಾತರಂಗಗಳ ಗರ್ಜನೆಗಿಂತಲೂ,
ಉನ್ನತದಲ್ಲಿರುವ ಯೆಹೋವನ ಮಹಿಮೆಯು ಗಾಂಭೀರ್ಯವುಳ್ಳದ್ದು.
೫ ಯೆಹೋವನೇ, ನಿನ್ನ ಕಟ್ಟಳೆಗಳು ಬಹುಖಂಡಿತವಾಗಿವೆ;
ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.