ಚೀಯೋನನ್ನು ರಕ್ಷಿಸಿದ್ದಕ್ಕಾಗಿ ಯೆಹೋವನನ್ನು ಕೊಂಡಾಡುವುದು
೪೮
ಹಾಡು; ಕೋರಹೀಯರ ಕೀರ್ತನೆ.
(ಕೀರ್ತ. 46)
 
೧ ಯೆಹೋವನು ಮಹೋನ್ನತನು;
ನಮ್ಮ ದೇವರು ತನ್ನ ಪರಿಶುದ್ಧ ಪರ್ವತ ನಗರದಲ್ಲಿ ಸರ್ವಸ್ತುತಿಗೆ ಪಾತ್ರನಾಗಿದ್ದಾನೆ.
೨ ರಾಜಾಧಿರಾಜನ ಪಟ್ಟಣವಿರುವ ಚೀಯೋನ್ ಪರ್ವತವು
ಉತ್ತರದಿಕ್ಕಿನಲ್ಲಿ ಉನ್ನತವಾಗಿಯೂ, ರಮ್ಯವಾಗಿಯೂ,
ಭೂಲೋಕದಲ್ಲೆಲ್ಲಾ ಕಂಗೊಳಿಸುತ್ತಿರುವುದು.
೩ ದೇವರು ಅದರ ಕೊತ್ತಲುಗಳಲ್ಲಿ,
ತಾನೇ ಭದ್ರವಾದ ಬುರುಜೆಂದು ಕೀರ್ತಿಪಡೆದನು.
೪ ರಾಜರು ಕೂಡಿಕೊಂಡರು;
ಅವರು ಒಗ್ಗಟ್ಟಾಗಿ ಬಂದರು.
೫ ನೋಡಿ ಬೆರಗಾದರು;
ತಲ್ಲಣಿಸಿ ಓಡಿಹೋದರು.
೬ ಕಂಪನವೂ ಹೆರುವವಳಂತೆ,
ವೇದನೆಯೂ ಅವರಿಗೆ ಉಂಟಾಯಿತು.
೭ ದೇವರೇ, ನೀನು ಬಿರುಗಾಳಿಯಿಂದ ತಾರ್ಷಿಷ್ ದೇಶದ
ದೊಡ್ಡ ದೊಡ್ಡ ಹಡಗುಗಳನ್ನು ಒಡೆದುಬಿಟ್ಟಂತಾಯಿತು.
೮ ನಾವು ಕಿವಿಯಿಂದ ಕೇಳಿದಂತೆಯೇ ಈಗ ಕಣ್ಣಾರೆ ಕಂಡೆವು;
ನಮ್ಮ ದೇವರೂ ಸೇನಾಧೀಶನೂ ಆಗಿರುವ
ಯೆಹೋವನ ಸಂಸ್ಥಾನದಲ್ಲಿ ಆತನ ಮಹತ್ತನ್ನು ನೋಡಿದ್ದೇವೆ.
ದೇವರು ಅದನ್ನು ಶಾಶ್ವತವಾಗಿ ಸ್ಥಾಪಿಸುವನು.
ಸೆಲಾ
೯ ದೇವರೇ, ನಾವು ನಿನ್ನ ಆಲಯದಲ್ಲಿ,
ನಿನ್ನ ಪ್ರೀತಿಯನ್ನು ಸ್ಮರಿಸುತ್ತೇವೆ;
೧೦ ದೇವರೇ, ನಿನ್ನ ನಾಮದ ಘನತೆಗೆ ತಕ್ಕಂತೆಯೇ,
ಲೋಕವೆಲ್ಲಾ ನಿನ್ನನ್ನು ಹೊಗಳುವುದು.
ನಿನ್ನ ಬಲಗೈ ನೀತಿಯನ್ನು ನೆರವೇರಿಸಿತು.
೧೧ ಚೀಯೋನ್ ಪಟ್ಟಣದವರು ಹರ್ಷಿಸಲಿ;
ನೀನು ನ್ಯಾಯವನ್ನು ನಿರ್ಣಯಿಸಿದ್ದರಿಂದ,
ಯೆಹೂದ ಸೀಮೆಯ ನಿವಾಸಿಗಳು ಆನಂದಪಡಲಿ.
೧೨ ಚೀಯೋನ್ ಸಂಸ್ಥಾನದ ಸುತ್ತಲೂ ಸಂಚರಿಸಿ,
ಅದರ ಬುರುಜುಗಳನ್ನು ಲೆಕ್ಕಿಸಿರಿ.
೧೩ ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ;
ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ.
೧೪ ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ,
ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು,
ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.