ರಾಜನ ವಿವಾಹದ ವರ್ಣನೆ
೪೫
1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋಶನ್ನೀಮ್ ಎಂಬ ರಾಗದ ಮೇಲೆ ಹಾಡತಕ್ಕದ್ದು; ಕೋರಹೀಯರ ಪದ್ಯ; ಪ್ರೇಮಗೀತೆ.
(ಯೆಶಾ. 61:10—62:5)
 
೧ ಒಂದು ದಿವ್ಯ ವಿಷಯವನ್ನು ಹೇಳುವುದಕ್ಕೆ ನನ್ನ ಹೃದಯವು ತವಕಪಡುತ್ತದೆ;
ನಾನು ರಾಜನನ್ನು ಕುರಿತು ಈ ಪದ್ಯವನ್ನು ರಚಿಸುವೆನು.
ನನ್ನ ನಾಲಿಗೆಯು ಒಳ್ಳೆಯ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
೨ ನೀನು ಎಲ್ಲಾ ಮನುಷ್ಯರಿಗಿಂತ ಅತಿಸುಂದರನು;
ನಿನ್ನ ಮಾತುಗಳು ಬಹು ಮಧುರ;
ಇದರಿಂದಲೇ ದೈವಾನುಗ್ರಹವು ಯಾವಾಗಲೂ ನಿನ್ನ ಮೇಲಿದೆ ಎಂಬುದು ಸ್ವಷ್ಟವಾಗುತ್ತದೆ.
೩ ಶೂರನೇ, ಮಹಿಮೆ ಮತ್ತು ಪ್ರಭಾವನ್ನು ಧರಿಸಿಕೊಂಡು,
ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ.
೪ ಸತ್ಯತೆ, ದೈನ್ಯ, ನೀತಿಗಳನ್ನು ಸ್ಥಾಪಿಸುವುದಕ್ಕಾಗಿ
ಸಕಲ ವೈಭವದೊಡನೆ ವಾಹನರೂಢನಾಗಿ,
ವಿಜಯೋತ್ಸವದೊಡನೆ ಹೊರಡು.
ನಿನ್ನ ಬಲಗೈ ಭಯಂಕರ ಕೃತ್ಯಗಳನ್ನು ನಡೆಸಲಿ.
೫ ನಿನ್ನ ಬಾಣಗಳು ಮಹಾತೀಕ್ಷ್ಣವಾಗಿರುವವು;
ಅವು ರಾಜನ ಶತ್ರುಗಳ ಎದೆಯನ್ನು ಭೇದಿಸುವವು;
ಶತ್ರುಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು.
೬ ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು;
ನಿನ್ನ ರಾಜದಂಡವು ನ್ಯಾಯ ದಂಡವಾಗಿದೆ.
೭ ನೀನು ಧರ್ಮವನ್ನು ಪ್ರೀತಿಸುತ್ತಿ, ಅಧರ್ಮವನ್ನು ದ್ವೇಷಿಸುತ್ತಿ;
ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ,
ಉನ್ನತಸ್ಥಾನಕ್ಕೆ ಏರಿಸಿ, ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.
೮ ನಿನ್ನ ವಸ್ತ್ರಗಳೆಲ್ಲಾ ರಕ್ತಬೋಳ, ದಾಲ್ಚಿನ್ನಿ, ಚಂದನಗಳಿಂದ
ಎಷ್ಟೋ ಸುವಾಸನೆಯುಳ್ಳವುಗಳಾಗಿವೆ;
ಗಜದಂತ ಅರಮನೆಗಳೊಳಗೆ ಉತ್ಕೃಷ್ಟವಾದ ವಾದ್ಯಗಳು ನಿನ್ನನ್ನು ಆನಂದಗೊಳಿಸುತ್ತವೆ.
೯ ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ;
ಪಟ್ಟದ ರಾಣಿಯು ಓಫೀರ್ ದೇಶದ ಬಂಗಾರದ ಆಭರಣಗಳಿಂದ ಅಲಂಕೃತಳಾಗಿ,
ನಿನ್ನ ಬಲಭಾಗದಲ್ಲಿ ನಿಂತಿರುವಳು.
೧೦ ಎಲೌ ರಾಜಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು;
ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು.
೧೧ ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲು ಅಪೇಕ್ಷಿಸುವನು.
ಆತನೇ ನಿನಗೆ ಒಡೆಯನು;
ಆತನನ್ನು ಗೌರವಿಸು.
೧೨ ತೂರ್ ಸಂಸ್ಥಾನದವರು ಕಾಣಿಕೆಗಳೊಂದಿಗೆ ಬರುವರು;
ಪ್ರಜೆಗಳಲ್ಲಿ ಐಶ್ವರ್ಯವಂತರು ನಿನ್ನ ದಯೆಯನ್ನು ಕೋರುವರು.
೧೩ ಅಂತಃಪುರದಲ್ಲಿ ರಾಜಕುಮಾರಿಯು ಎಷ್ಟೋ ವೈಭವದಿಂದಿದ್ದಾಳೆ;
ಆಕೆಯು ಜರತಾರಿಯ [ಚಿನ್ನದಿಂದ ನೇಯ್ದ] ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
೧೪ ಆಕೆಯು ಬೂಟೇದಾರಿ [ಕಸೂತಿಕೆಲಸದ] ವಸ್ತ್ರಗಳನ್ನು ಧರಿಸಿಕೊಂಡು,
ಅವಳ ಸೇವೆಗಾಗಿ ಕನ್ಯೆಯರಾದ ಸಖೀಯರು ಅವಳನ್ನು ಹಿಂಬಾಲಿಸಿ,
ಅರಸನ ಬಳಿಗೆ ಬರುವರು.
೧೫ ಅವರು ಉಲ್ಲಾಸದಿಂದಲೂ, ಸಂತೋಷದಿಂದಲೂ ಬಂದು,
ಅರಮನೆಯೊಳಗೆ ಪ್ರವೇಶಿಸುವರು.
೧೬ ನಿನ್ನ ಪಿತೃಗಳ ಸ್ಥಳಗಳಲ್ಲಿ ನಿನ್ನ ಮಕ್ಕಳು ಇರುವರು;
ನೀನು ಅವರನ್ನು ಭೂಮಿಯ ಮೇಲೆಲ್ಲಾ ಅಧಿಕಾರಿಗಳನ್ನಾಗಿ ನೇಮಿಸುವಿ.
೧೭ ನಿನ್ನ ಹೆಸರು ತಲತಲಾಂತರಗಳಲ್ಲಿ ಜ್ಞಾಪಕವಿರುವಂತೆ ನಾನು ಮಾಡುವೆನು;
ಅದುದರಿಂದ ಎಲ್ಲಾ ಜನಗಳು ನಿನ್ನನ್ನು ಯುಗಯುಗಾಂತರಗಳಲ್ಲಿಯೂ ಪ್ರಶಂಸಿಸುವರು.