Joshua
ಯೆಹೋಶುವನು
ಕಾನಾನ್ ದೇಶವು ಇಸ್ರಾಯೇಲ್ಯರಿಗೆ ವಶವಾದದ್ದು (1-12)
ಹೊಳೆದಾಟುವುದಕ್ಕೆ ಸಿದ್ಧರಾಗಬೇಕೆಂಬ ಅಪ್ಪಣೆ
೧ ಯೆಹೋವನ ಸೇವಕನಾದ ಮೋಶೆಯ ಮರಣದ ನಂತರ ಯೆಹೋವನು ಮೋಶೆಯ ಸೇವಕನಾದ ನೂನನ ಮಗನಾದ ಯೆಹೋಶುವನಿಗೆ ೨ “ನನ್ನ ಸೇವಕನಾದ ಮೋಶೆ ಸತ್ತನು; ನೀನು ಈಗ ಹೊರಟು ಸಮಸ್ತ ಇಸ್ರಾಯೇಲ್ ಜನರೊಂದಿಗೆ ಈ ಯೊರ್ದನ್ ಹೊಳೆಯನ್ನು ದಾಟಿ, ನಾನು ಅವರಿಗೆ ಕೊಡುವ ದೇಶಕ್ಕೆ ಹೋಗು. ೩ ನಾನು ಮೋಶೆಗೆ ವಾಗ್ದಾನ ಮಾಡಿದಂತೆ ನೀವು ಕಾಲಿಡುವ ಸ್ಥಳಗಳನ್ನೆಲ್ಲಾ ನಿಮಗೆ ಕೊಟ್ಟಿದ್ದೇನೆ. ೪ ಅರಣ್ಯಗಳು ಹಾಗೂ ಈ ಲೆಬನೋನ್ ಪರ್ವತದಿಂದ ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯ ವರೆಗಿರುವ ಹಿತ್ತಿಯರ ದೇಶವೆಲ್ಲಾ ನಿಮ್ಮದಾಗುವುದು; ನಿಮ್ಮ ಸೀಮೆಯು ಪಶ್ಚಿಮದಿಕ್ಕಿನ ಮಹಾಸಾಗರದ ವರೆಗೆ ವಿಸ್ತರಿಸಿಕೊಳ್ಳುವುದು. ೫ ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರುವೆನು. ೬ ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ, ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರ ಪಿತೃಗಳಿಗೆ ವಾಗ್ದಾನಮಾಡಿದ ದೇಶವನ್ನು ಇವರಿಗಾಗಿ ನೀನೇ ಸ್ವಾಧೀನಮಾಡಿಕೊಡಬೇಕು. ೭ ನನ್ನ ಸೇವಕನಾದ ಮೋಶೆಯು ನಿನಗೆ ಬೋಧಿಸಿ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವುದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ, ಆಗ ನೀನು ಸಫಲನಾಗುವಿ. ೮ ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವುದನ್ನೆಲ್ಲಾ ಕೈಕೊಂಡು ನಡೆ. ಆಗ ನಿನ್ನ ಕಾರ್ಯವೆಲ್ಲವೂ, ನೀನು ಹೋಗುವ ಮಾರ್ಗಗಳು ಸಫಲವಾಗುವುದು. ನೀನು ಚುರುಕು ಬುದ್ಧಿಯ ವ್ಯಕ್ತಿಯಾಗಿ ರೂಪಾಂತರ ಹೊಂದುವಿ. ೯ ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವನು” ಎಂದು ಹೇಳಿದನು.
೧೦ ಆಗ ಯೆಹೋಶುವನು ಜನರ ಅಧಿಕಾರಿಗಳಿಗೆ ೧೧ “ನೀವು ಪಾಳೆಯದ ಎಲ್ಲೆಡೆಗೆ ಹೋಗಿ ನಿಮ್ಮ ಜನರಿಗೆ ‘ನೀವು ಇನ್ನು ಮೂರು ದಿನಗಳಲ್ಲಿ ಈ ಯೊರ್ದನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಾಸ್ಥ್ಯವಾಗಿ ಕೊಡುವ ದೇಶವನ್ನು ವಶಪಡಿಸಿಕೊಳ್ಳಲು ಹೋಗಬೇಕು. ಆದುದರಿಂದ ನಿಮಗೆ ಬೇಕಾದ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ’ ಎಂದು ತಿಳಿಸಿರಿ” ಅಂದನು.
೧೨ ಬಳಿಕ ಯೆಹೋಶುವನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆ ಕುಲದ ಅರ್ಧ ಜನರಿಗೂ ಹೇಳಿದ್ದೇನಂದರೆ ೧೩ “ಯೆಹೋವನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟು ವಿಶ್ರಾಂತಿ ನೀಡಿದ್ದಾನೆ. ೧೪ ನಿಮ್ಮ ಹೆಂಡತಿ ಮಕ್ಕಳು, ನಿಮ್ಮ ದನಕುರಿಗಳೂ ಮೋಶೆಯು ನಿಮಗೆ ಯೊರ್ದನಿನ ಆಚೆಯಲ್ಲಿ ಕೊಟ್ಟ ದೇಶದಲ್ಲೇ ವಾಸವಾಗಿರಲಿ. ಆದರೆ ನಿಮ್ಮ ಭಟರೆಲ್ಲರೂ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಿಗೆ ಮುಂದಾಗಿ ಹೊರಟು, ಹೊಳೆದಾಟಿ ಅವರಿಗೆ ಸಹಾಯಮಾಡಬೇಕು. ೧೫ ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ನಿಮ್ಮ ಸಹೋದರರು ಸ್ವಾಧೀನಮಾಡಿಕೊಂಡು ಅವರೂ ನಿಮ್ಮಂತೆ ವಿಶ್ರಾಂತಿ ಹೊಂದಿದ ನಂತರ ನಿಮ್ಮ ಸ್ವಂತ ದೇಶಕ್ಕೆ ಹಿಂತಿರುಗಿ, ಮೋಶೆಯು ನಿಮಗೆ ಯೊರ್ದನ್ ಹೊಳೆಯ ಪೂರ್ವದಿಕ್ಕಿನಲ್ಲಿ ಸ್ವಾಸ್ಥ್ಯವಾಗಿ ಕೊಟ್ಟ ದೇಶವನ್ನು ಸ್ವಾಧೀನಪಡಿಸಿಕೊಂಡು ಅದನ್ನು ಅನುಭವಿಸುವಿರಿ” ಎಂದನು. ೧೬ ಆಗ ಅವರು ಯೆಹೋಶುವನಿಗೆ ಉತ್ತರವಾಗಿ “ನೀನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತೇವೆ; ಎಲ್ಲಿಗೆ ಕಳುಹಿಸಿದರೂ ಹೋಗುತ್ತೇವೆ. ೧೭ ನಾವು ಮೋಶೆಯ ಎಲ್ಲಾ ಮಾತುಗಳಿಗೆ ವಿಧೇಯರಾದ ಹಾಗೆ ನಿನ್ನ ಮಾತುಗಳಿಗೂ ವಿಧೇಯರಾಗುವೆವು. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ. ೧೮ ನಿನ್ನ ಆಜ್ಞೆಗಳಲ್ಲಿ ಒಂದನ್ನಾದರೂ ಅಲಕ್ಷ್ಯ ಮಾಡಿದರೆ ನಿನ್ನ ವಿಧಿಗಳಿಗೆ ವಿರುದ್ಧವಾಗಿ ನಡೆದರೆ ಮರಣದಂಡನೆಗೆ ಗುರಿಯಾಗತಕ್ಕವನು; ಆದುದರಿಂದ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು” ಎಂದು ಹೇಳಿದರು.