ನಿರೀಕ್ಷೆಯ ವಾಗ್ದಾನ
೨೩
೧ “ನನ್ನ ಕಾವಲಿನ ಕುರಿಗಳನ್ನು ಚದುರಿಸಿ ಹಾಳು ಮಾಡುವ ಕುರುಬರ ಗತಿಯನ್ನು ಏನೆಂದು ಹೇಳಲಿ” ಎಂಬುದು ಯೆಹೋವನ ನುಡಿ.
೨ ಇಸ್ರಾಯೇಲರ ದೇವರಾದ ಯೆಹೋವನು ತನ್ನ ಜನರೆಂಬ ಕುರಿಗಳನ್ನು ಮೇಯಿಸುವ ಕುರುಬರ ದ್ರೋಹವನ್ನು ಕಂಡು ಅವರನ್ನು ಕುರಿತು ಇಂತೆನ್ನುತ್ತಾನೆ, “ನೀವು ನನ್ನ ಮಂದೆಯನ್ನು ಚದರಿಸಿ ಅಟ್ಟಿಬಿಟ್ಟಿದ್ದೀರಿ, ವಿಚಾರಿಸಲೇ ಇಲ್ಲ. ಆಹಾ, ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಾನು ನಿಮ್ಮನ್ನು ವಿಚಾರಿಸುವೆನು. ೩ ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು. ೪ ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು. ಅವು ಇನ್ನು ಕಳವಳಗೊಳ್ಳುದಿಲ್ಲ, ಭಯಪಡುವುದಿಲ್ಲ ಮತ್ತು ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ; ಇದು ಯೆಹೋವನ ನುಡಿ” ಎಂಬುದೇ.
೫ ಯೆಹೋವನು, “ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು.
ಅವನು ರಾಜನಾಗಿ ಆಳುತ್ತಾ, ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ, ದೇಶದಲ್ಲಿ ನೀತಿ, ನ್ಯಾಯಗಳನ್ನು ನಿರ್ವಹಿಸುವನು.
೬ ಅವನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು, ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವರು;
‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ನಮ್ಮ ಸದ್ಧರ್ಮ ಎಂಬ ಹೆಸರು ಅವನಿಗಾಗುವುದು” ಎಂದು ನುಡಿಯುತ್ತಾನೆ.
೭ ಆಹಾ, ಮುಂದಿನ ಕಾಲದಲ್ಲಿ ಜನರು, “ಇಸ್ರಾಯೇಲರನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ ಎಂಬುದಾಗಿ ಪ್ರಮಾಣ ಮಾಡುವುದನ್ನು ಬಿಟ್ಟು, ೮ ಇಸ್ರಾಯೇಲ್ ಮನೆತನವೆಂಬ ಸಂತಾನವನ್ನು ಉತ್ತರ ದಿಕ್ಕಿನ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ, ಉದ್ಧರಿಸಿದ ಯೆಹೋವನ ಜೀವದಾಣೆ ಎಂದು ಪ್ರಮಾಣಮಾಡುವರು. ಅವರು ಸ್ವದೇಶದಲ್ಲಿ ಸುಖವಾಸಿಗಳಾಗುವರು.” ಇದು ಯೆಹೋವನ ನುಡಿ.
ಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು
೯ ಪ್ರವಾದಿಗಳ ವಿಷಯ: ನನ್ನ ಹೃದಯವು ನನ್ನೊಳಗೆ ಒಡೆದುಹೋಗಿದೆ; ನನ್ನ ಎಲುಬುಗಳೆಲ್ಲಾ ಕರಗಿಹೋಗಿವೆ.
ನಾನು ಯೆಹೋವನಿಗೂ ಆತನ ಪರಿಶುದ್ಧ ವಾಕ್ಯಗಳಿಗೂ ವಶನಾಗಿ ಅಮಲೇರಿದವನಂತಿದ್ದೇನೆ.
ಹೌದು, ದ್ರಾಕ್ಷಾರಸಕ್ಕೆ ಸೋತವನ ಹಾಗಿದ್ದೇನೆ.
೧೦ ಸೀಮೆಯು ವ್ಯಭಿಚಾರಿಗಳಿಂದ ತುಂಬಿದೆ, ದೈವಶಾಪದ ನಿಮಿತ್ತ ದೇಶವು ದುಃಖಿಸುತ್ತದೆ.
ಅಡವಿಯ ಹುಲ್ಗಾವಲು ಬಾಡಿದೆ; ದೇಶದವರು ತ್ವರೆಪಡುವ ಮಾರ್ಗವು ದುರ್ಮಾರ್ಗ, ಅವನ ಶೌರ್ಯವು ಅನ್ಯಾಯಸಾಧಕ.
೧೧ ಪ್ರವಾದಿಗಳು ಭ್ರಷ್ಟರು, ಯಾಜಕರೂ ಭ್ರಷ್ಟರು.
ಹೌದು ನನ್ನ ಆಲಯದಲ್ಲಿಯೇ ಅವರ ಕೆಟ್ಟತನವನ್ನು ಕಂಡಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ.
೧೨ ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಸ್ಥಳಗಳಿಗೆ ಸಮಾನವಾಗುವುದು.
ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರುಷದ ಕೇಡನ್ನು ಬರಮಾಡುವೆನು ಎಂದು ಯೆಹೋವನು ನುಡಿಯುತ್ತಾನೆ.
೧೩ ನಾನು ಸಮಾರ್ಯದ ಪ್ರವಾದಿಗಳಲ್ಲಿ ಅನೈತಿಕತೆಯನ್ನು ನೋಡಿದ್ದೇನೆ;
ಅವರು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ, ಇಸ್ರಾಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದ್ದಾರೆ.
೧೪ ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ.
ಅವರು ವ್ಯಭಿಚಾರಮಾಡಿ, ಮೋಸದಲ್ಲಿ ನಡೆದು, ದುಷ್ಟರಲ್ಲಿ ಯಾರೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ.
ಅವರೆಲ್ಲರು ಸೊದೋಮಿನಂತೆ, ಆ ಪಟ್ಟಣದ ನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.
೧೫ ಆದಕಾರಣ ಸೇನಾಧೀಶ್ವರನಾದ ಯೆಹೋವನು ಪ್ರವಾದಿಗಳ ವಿಷಯದಲ್ಲಿ, “ಆಹಾ, ನಾನು ಇವರಿಗೆ ಕಹಿಯಾದ ಆಹಾರ ಮತ್ತು ಪಾನಗಳನ್ನು ಕೊಡುವೆನು;
ಯೆರೂಸಲೇಮಿನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲೆಲ್ಲಾ ಹರಡಿದೆಯಷ್ಟೆ” ಎಂದು ನುಡಿಯುತ್ತಾನೆ.
ಯೆಹೋವನು ಕೊಡುವ ಎಚ್ಚರಿಕೆ
೧೬ ಸೇನಾಧೀಶ್ವರನಾದ ಯೆಹೋವನು, “ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ.
ಅವರು ನಿಮ್ಮಲ್ಲಿ ವ್ಯರ್ಥ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಮನಸ್ಸಿಗೆ ಬಂದದ್ದನ್ನೇ ಹೇಳುತ್ತಾರೆ.
೧೭ ನನ್ನನ್ನು ಅಸಡ್ಡೆಮಾಡುವವರಿಗೆ, ‘ನಿಮಗೆ ಶುಭವಾಗುವುದು ಎಂಬುದಾಗಿ ಯೆಹೋವನು ನುಡಿದ್ದಾನೆ’ ಎಂದು ಹೇಳುತ್ತಲೇ ಇದ್ದಾರೆ.
ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ, ‘ನಿಮಗೆ ಯಾವ ಕೇಡೂ ಸಂಭವಿಸದು’ ಎಂದು ನುಡಿಯುತ್ತಾರೆ.
೧೮ ಅವರಲ್ಲಿ ಯಾರು ಯೆಹೋವನ ಆಲೋಚನಾಸಭೆಯಲ್ಲಿ ನಿಂತು ಆತನ ಮಾತನ್ನು ಕೇಳಿ ತಿಳಿದುಕೊಂಡಿದ್ದಾರೆ?
ಯಾರು ಆತನ ನುಡಿಗೆ ಕಿವಿಗೊಟ್ಟು ಗಮನಿಸಿದ್ದಾರೆ?
೧೯ ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಸುಂಟರಗಾಳಿಯು ಹೊರಟಿದೆ.
ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
೨೦ ಯೆಹೋವನು ತನ್ನ ಹೃದಯದ ಆಲೋಚನೆಗಳನ್ನು ಸಾಧಿಸಿ, ನೆರವೇರಿಸುವ ತನಕ ಆತನ ರೋಷವು ತಣ್ಣಗಾಗುವುದಿಲ್ಲ.
ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸುವಿರಿ.
೨೧ ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ, ತಾವೇ ಆತುರಗೊಂಡರು;
ನಾನು ಇವರಿಗೆ ಏನೂ ಹೇಳಲಿಲ್ಲ, ಅವರೇ ಪ್ರವಾದಿಸಿದರು.
೨೨ ಇವರು ಆಲೋಚನಾಸಭೆಯಲ್ಲಿ ನಿಂತಿದ್ದರೆ, ನನ್ನ ಮಾತುಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸಿ,
ಅವರನ್ನು ಅವರ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ತಪ್ಪಿಸುತ್ತಿದ್ದರು” ಎಂದು ಹೇಳುತ್ತಾನೆ.
೨೩ ಯೆಹೋವನು ಇಂತೆನ್ನುತ್ತಾನೆ, “ನಾನು ಸಮೀಪದಲ್ಲಿ ಮಾತ್ರ ಇರುವ ದೇವರೋ?
೨೪ ದೂರದಲ್ಲಿಯೂ ಇರುವವನಲ್ಲವೋ? ನನ್ನ ಕಣ್ಣಿಗೆ ಬೀಳದಂತೆ ಯಾರಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ತಾನೇ ಮರೆಮಾಡಿಕೊಂಡಾನೇ?
ನಾನು ಭೂಮ್ಯಾಕಾಶಗಳಲ್ಲಿಯೂ ವ್ಯಾಪಿಸಿರುವವನಲ್ಲವೆ.”
೨೫ ನನಗೆ ಕನಸು ಬಿತ್ತು, ಕನಸು ಬಿತ್ತು ಎಂದು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ. ೨೬ ಇವರ ಪಿತೃಗಳು ಬಾಳನನ್ನು ಪೂಜಿಸಿ, ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ, ತಾವು ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ. ೨೭ ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಈ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವುದು? ೨೮ ಕನಸು ಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ. ನನ್ನ ಮಾತನ್ನು ಕೇಳಿದವನೋ ನನ್ನ ಮಾತನ್ನು ಯಥಾರ್ಥವಾಗಿ ನುಡಿಯಲಿ. ೨೯ ಹೊಟ್ಟೆಲ್ಲಿ? ಕಾಳೆಲ್ಲಿ? ನನ್ನ ವಾಕ್ಯವು ಬೆಂಕಿಗೂ, ಬಂಡೆಯನ್ನು ಒಡೆದುಬಿಡುವ ಚಮಟಿಗೆಗೂ ಸಮಾನವಾಗಿದೆಯಲ್ಲಾ. ಯೆಹೋವನೇ ಇದನ್ನು ನುಡಿದಿದ್ದಾನೆ.
ಯೆಹೋವನ ಭಾರ ಎಂದು ನುಡಿಯುವ ಜನರಿಗೆ ಆಗುವ ಶಿಕ್ಷೆ
೩೦ ಆಹಾ, ನನ್ನ ಮಾತುಗಳನ್ನು ತಮ್ಮ ತಮ್ಮ ನೆರೆಯವರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧನಾಗಿದ್ದೇನೆ. ಇದು ಯೆಹೋವನ ನುಡಿ. ೩೧ ಆಹಾ, ತಮ್ಮ ನಾಲಿಗೆಗಳನ್ನು ಚಾಚಿ “ಯೆಹೋವನು ನುಡಿಯುತ್ತಾನೆ” ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ. ೩೨ ಆಹಾ, ಸುಳ್ಳು ಕನಸುಗಳನ್ನು ಪ್ರಕಟಿಸಿ, ವಿವರಿಸಿ ತಮ್ಮ ಸುಳ್ಳು ಮಾತುಗಳಿಂದಲೂ, ನಿರ್ಲಕ್ಷದಿಂದಲೂ ನನ್ನ ಜನರಿಗೆ ದಾರಿತಪ್ಪಿಸುವ ಪ್ರವಾದಿಗಳನ್ನು ಎದುರಿಸುವವನಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಆಜ್ಞಾಪಿಸಲಿಲ್ಲ. ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಇದು ಯೆಹೋವನ ನುಡಿ.
೩೩ ಪ್ರವಾದಿಯಾಗಲಿ ಅಥವಾ ಯಾಜಕನಾಗಲಿ ಈ ಜನರಲ್ಲಿ ಯಾರೇ ಆಗಲಿ “ಯೆಹೋವನು ದಯಪಾಲಿಸಿರುವ ವಾಕ್ಯದ ಆಧಾರವೇನು?” ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು, “ಯೆಹೋವನು ಇಂತೆನ್ನುತ್ತಾನೆ, ನೀವೇ ನನ್ನ ಹೊರೆ, ನಾನು ನಿಮ್ಮನ್ನು ಎಸೆದುಬಿಡುವೆನು. ೩೪ ಪ್ರವಾದಿ, ಯಾಜಕ, ಸಾಧಾರಣ ಜನ, ಇವರಲ್ಲಿ ಯಾರೂ, ‘ಯೆಹೋವನ ಹೊರೆ’ ಎಂದು ಉಚ್ಚರಿಸುವನೋ ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು. ೩೫ ನೀವು ನಿಮ್ಮ ನಿಮ್ಮ ನೆರೆಹೊರೆಯವರನ್ನೂ ಮತ್ತು ಅಣ್ಣತಮ್ಮಂದಿರನ್ನೂ, ‘ಯೆಹೋವನ ಉತ್ತರವೇನು, ಯೆಹೋವನು ಏನು ನುಡಿದಿದ್ದಾನೆ?’ ೩೬ ಎಂದು ಕೇಳಬೇಕೇ ಹೊರತು ಯೆಹೋವನ ಹೊರೆ ಎಂಬ ಮಾತನ್ನು ಇನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿಯೇ ಅವನವನಿಗೆ ಹೊರೆಯಾಗಿರುವುದು; ಜೀವಸ್ವರೂಪನಾದ ದೇವರ ನುಡಿಗಳನ್ನು, ಹೌದು, ನಮ್ಮ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿಗಳನ್ನು ತಲೆ ಕೆಳಗೆ ಮಾಡಿದ್ದೀರಷ್ಟೆ. ೩೭ ನೀವು ‘ಯೆಹೋವನಿಂದ ನಿನಗೆ ಯಾವ ಉತ್ತರವಾಯಿತು, ಯೆಹೋವನು ಏನು ನುಡಿದಿದ್ದಾನೆ’ ಎಂದು ಪ್ರವಾದಿಯನ್ನು ಕೇಳಿರಿ. ೩೮ ಒಂದು ವೇಳೆ ನೀವು ‘ಯೆಹೋವನ ಹೊರೆ’ ಎಂದು ಉಚ್ಚರಿಸಿದರೆ ಯೆಹೋವನು ಇಂತೆನ್ನುತ್ತಾನೆ, ‘ನಾನು ನಿಮಗೆ ಯೆಹೋವನ ಹೊರೆ ಎಂಬ ಮಾತನ್ನು ಎತ್ತಲೇ ಕೂಡದು ಎಂದು ಹೇಳಿಕಳುಹಿಸಿರುವಲ್ಲಿ ನೀವು ಯೆಹೋವನ ಹೊರೆ ಎಂದು ಹೇಳಿದ ಕಾರಣ ಇಗೋ, ೩೯ ಖಂಡಿತವಾಗಿ ನಿಮ್ಮನ್ನೂ ನಾನು ನಿಮಗೆ ಮತ್ತು ನಿಮ್ಮ ಪಿತೃಗಳಿಗೆ ದಯಪಾಲಿಸಿದ ಪಟ್ಟಣವನ್ನೂ ಹೊರೆಯೆಂದು ಎತ್ತಿ ನನ್ನೆದುರಿನಿಂದ ಎಸೆದುಬಿಡುವೆನು. ೪೦ ಮತ್ತು ನಾನು ನಿತ್ಯನಿಂದೆಯನ್ನೂ ಎಂದಿಗೂ ಮರೆಯದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.’ ”