೫
ದಾವೀದನು ಇಸ್ರಾಯೇಲರ ನಡೆಸಿದ ವಿಶೇಷ ಕಾರ್ಯಗಳು 5-12
ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿದ್ದೂ, ಯೆರೂಸಲೇಮ್ ಪಟ್ಟಣ ರಾಜಧಾನಿಯಾದದ್ದು
೧ ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ, ೨ ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’ ” ಅಂದರು. ೩ ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲಿಯೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು. ೪ ದಾವೀದನು ಮೂವತ್ತು ವರುಷದವನಾದಾಗ ಅರಸನಾಗಿ, ನಲ್ವತ್ತು ವರುಷ ಆಳಿದನು. ೫ ಅವನು ಹೆಬ್ರೋನಿನಲ್ಲಿದ್ದು ಯೆಹೂದ ಕುಲವೊಂದನ್ನೇ ಆಳಿದ್ದು ಏಳು ವರುಷ ಆರು ತಿಂಗಳು. ಯೆರೂಸಲೇಮಿನಲ್ಲಿದ್ದು ಯೆಹೂದ್ಯರನ್ನು ಮತ್ತು ಎಲ್ಲಾ ಇಸ್ರಾಯೇಲರನ್ನು ಆಳಿದ್ದು ಮೂವತ್ತು ಮೂರು ವರುಷಗಳು. ೬ ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು. ೭ ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
೮ ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.
ಯೆರುಸಲೇಮ್ ಪಟ್ಟಣವು ರಾಜಧಾನಿಯಾದದ್ದು
೯ ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು. ೧೦ ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಅಭಿವೃದ್ಧಿ ಹೊಂದುತ್ತಾ ಹೋದನು. ೧೧ ತೂರಿನ ಅರಸನಾದ ಹೀರಾಮನು ದಾವೀದನಿಗೆ ದೂತರನ್ನೂ, ದೇವದಾರುಮರಗಳನ್ನೂ, ಬಡಗಿಯವರನ್ನೂ ಶಿಲ್ಪಿಗಳನ್ನೂ ಕಳುಹಿಸಲು ಅವರು ದಾವೀದನಿಗೋಸ್ಕರ ಅರಮನೆಯನ್ನು ಕಟ್ಟಿದರು. ೧೨ ಇದರಿಂದ ದಾವೀದನು, “ಯೆಹೋವನು ನನ್ನನ್ನು ಇಸ್ರಾಯೇಲರ ರಾಜನನ್ನಾಗಿ ಸ್ಥಿರಪಡಿಸಿ, ತನ್ನ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ನನ್ನ ರಾಜ್ಯವನ್ನು ವೃದ್ಧಿಪಡಿಸಿದ್ದಾನೆ” ಎಂದು ತಿಳಿದುಕೊಂಡನು. ೧೩ ದಾವೀದನು ಹೆಬ್ರೋನಿನಿಂದ ಯೆರೂಸಲೇಮಿಗೆ ಬಂದ ಮೇಲೆ ಅಲ್ಲಿಯೂ ಅನೇಕ ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಮತ್ತು ಉಪಪತ್ನಿಯರನ್ನಾಗಿಯೂ ಮಾಡಿಕೊಂಡಿದ್ದರಿಂದ ಅವನಿಗೆ ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳು ಹುಟ್ಟಿದರು. ೧೪ ಅಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, ೧೫ ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, ೧೬ ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್.
ದಾವೀದನು ಫಿಲಿಷ್ಟಿಯರನ್ನು ಎರಡು ಸಾರಿ ಸೋಲಿಸಿದ್ದು
೧೭ ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು. ೧೮ ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯಿಮಿನ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು. ೧೯ ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು. ೨೦ ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” (ದೇವರು ನಮ್ಮ ಪರವಾಗಿ ಹೋರಾಡುವವ) ಎಂದು ಹೆಸರಿಟ್ಟನು. ೨೧ ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.
೨೨ ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯಿಮಿನ ತಗ್ಗಿನಲ್ಲಿ ಇಳಿದುಕೊಂಡರು. ೨೩ ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು. ೨೪ ಆ ಬಾಕ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು. ೨೫ ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು.