೧೩
ಮಂಜೂಷವನ್ನು ಕಿರ್ಯಾತ್ಯಾರೀಮಿನಿಂದ ತಂದದ್ದು ಮತ್ತು ಸಂಭವಿಸಿದ ಆಪತ್ತು
೧ ದಾವೀದನು ಸಹಸ್ರಾಧಿಪತಿ, ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಸಮಾಲೋಚನೆ ಮಾಡಿದ ನಂತರ ಇಸ್ರಾಯೇಲ್ಯರ ಸಮಸ್ತ ಸಮೂಹದವರಿಗೆ, ೨ “ನಿಮ್ಮ ಸಮ್ಮತಿಯೂ ಮತ್ತು ನಮ್ಮ ದೇವರಾದ ಯೆಹೋವನ ಚಿತ್ತವೂ ಇರುವುದಾದರೆ, ನಾವು ಎಲ್ಲಾ ಇಸ್ರಾಯೇಲ್ ಪ್ರಾಂತ್ಯಗಳಲ್ಲಿರುವ ನಮ್ಮ ಸಹೋದರರನ್ನೂ ಗೋಮಾಳಸಹಿತವಾದ ತಮ್ಮ ಪಟ್ಟಣಗಳಲ್ಲಿರುವ ಯಾಜಕ ಲೇವಿಯರನ್ನೂ ಬೇಗನೆ ಕರೆಕಳುಹಿಸೋಣ. ೩ ಅವರು ನಮ್ಮ ಬಳಿಗೆ ಕೂಡಿ ಬಂದ ಮೇಲೆ ನಾವು ಸೌಲನ ಕಾಲದಲ್ಲಿ ಅಲಕ್ಷ್ಯಮಾಡಿದ್ದ ನಮ್ಮ ದೇವರ ಮಂಜೂಷವನ್ನು ತೆಗೆದುಕೊಂಡು ಬರೋಣ” ಎಂದು ಹೇಳಿದನು. ೪ ಅವರೆಲ್ಲರೂ ಆ ಮಾತಿಗೆ ಒಪ್ಪಿ ಅದರಂತೆ ಮಾಡಬೇಕೆಂದು ಹೇಳಿದರು. ೫ ಆಗ ದಾವೀದನು ದೇವರ ಮಂಜೂಷವನ್ನು ಕಿರ್ಯತ್ಯಾರೀಮಿನಿಂದ ತರುವುದಕ್ಕೋಸ್ಕರ ಐಗುಪ್ತದ ಶೀಹೋರ್ ಹಳ್ಳದಿಂದ ಹಮಾತಿನ ದಾರಿಯ ವರೆಗೂ ವಾಸಿಸುತ್ತಿದ್ದ ೬ ಎಲ್ಲಾ ಇಸ್ರಾಯೇಲ್ಯರನ್ನು ಒಟ್ಟಿಗೆ ಸೇರಿಸಿ ಅವರೆಲ್ಲರೊಡನೆ, ಯೆಹೂದ ದೇಶದ ಬಾಳಾ ಎನಿಸಿಕೊಳ್ಳುತ್ತಿದ್ದ ಕಿರ್ಯತ್ಯಾರೀಮಿಗೆ ಹೋದನು. ಆ ಮಂಜೂಷವು ಕೆರೂಬಿಯರ ನಡುವೆ ಆಸೀನನಾಗಿರುವ ಯೆಹೋವ ದೇವರ ನಾಮದಿಂದ ಪ್ರಸಿದ್ಧವಾಗಿತ್ತು. ೭ ಅವರು ದೇವರ ಮಂಜೂಷವನ್ನು ಅಬೀನಾದಾಬನ ಮನೆಯಿಂದ ಹೊರಗೆ ತಂದು, ಒಂದು ಹೊಸ ಬಂಡಿಯ ಮೇಲೆ ಇಟ್ಟರು. ಉಜ್ಜನೂ ಮತ್ತು ಅಹೀಯೋವನೂ ಬಂಡಿಯನ್ನು ಓಡಿಸಿದರು. ೮ ದಾವೀದನೂ ಎಲ್ಲಾ ಇಸ್ರಾಯೇಲರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ತಾಳ, ತುತೂರಿ ಇವುಗಳ ಧ್ವನಿಯೊಡನೆ ಪೂರ್ಣಾಸಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ದೇವರ ಮುಂದೆ ನರ್ತನ ಮಾಡುತ್ತಾ ಹೋದರು. ೯ ಅವರು ಕೀದೋನಿನ ಕಾಳು ತರುವ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈ ಚಾಚಿ ದೇವರ ಮಂಜೂಷವನ್ನು ಹಿಡಿದನು. ೧೦ ಉಜ್ಜನು ಮಂಜೂಷದ ಮೇಲೆ ಕೈಹಾಕಿದ್ದರಿಂದ ಯೆಹೋವನು ಅವನ ಮೇಲೆ ಕೋಪಗೊಂಡು ಅವನನ್ನು ಹತಮಾಡಿದನು. ಅವನು ಅಲ್ಲೇ ದೇವರ ಸನ್ನಿಧಿಯಲ್ಲಿ ಸತ್ತನು. ೧೧ ಯೆಹೋವನಿಂದ ಉಜ್ಜನು ಮರಣ ಹೊಂದಿದ್ದರಿಂದ ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು. ಅದಕ್ಕೆ ಇಂದಿನ ವರೆಗೂ ಇದೇ ಹೆಸರಿರುತ್ತದೆ. ೧೨ ಆ ದಿನ ದಾವೀದನು ದೇವರಿಗೆ ಭಯಪಟ್ಟು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ” ಎಂದುಕೊಂಡು ೧೩ ಮಂಜೂಷನ್ನು ದಾವೀದ ನಗರಕ್ಕೆ ತಾರದೇ, ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು. ೧೪ ದೇವರ ಮಂಜೂಷವು ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಕಾಲದಲ್ಲಿ ಯೆಹೋವನು ಓಬೇದೆದೋಮನ ಮನೆಯನ್ನೂ ಮತ್ತು ಅವನಿಗಿದ್ದ ಸರ್ವಸ್ವವನ್ನೂ ಆಶೀರ್ವದಿಸಿನು.