3
ಬೋವಜನು ರೂತಳಿಗೆ ವಾಗ್ದಾನಮಾಡಿದ್ದು
1 ನವೊಮಿಯು ಸೊಸೆಗೆ, “ನನ್ನ ಮಗಳೇ, ನಿನಗೆ ಒಳ್ಳೆಯದಾಗುವುದಕ್ಕಾಗಿ, ನೀನು ಗೃಹಿಣಿಯಾಗಿ ಸುಖದಿಂದಿರುವುದಕ್ಕೋಸ್ಕರ ನಾನು ಪ್ರಯತ್ನಿಸಬೇಕಲ್ಲವೇ? 2 ಈಗ ನೀನು ಯಾರ ಹೆಣ್ಣಾಳುಗಳ ಜೊತೆಯಲ್ಲಿರುತ್ತೀಯೋ ಆ ಬೋವಜನು ನಮ್ಮ ಸಂಬಂಧಿಕನಲ್ಲವೇ? ಅವನು ಈ ರಾತ್ರಿ ಕಣದಲ್ಲಿ ಜವೆಗೋದಿಯನ್ನು ತೂರುವನು. 3 ನೀನು ಸ್ನಾನಮಾಡಿ, ಸುಗಂಧತೈಲವನ್ನು ಹಚ್ಚಿಕೊಂಡು, ಶ್ರೇಷ್ಠವಸ್ತ್ರಗಳನ್ನು ಧರಿಸಿಕೊಂಡು ಅಲ್ಲಿಗೆ ಹೋಗು; ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೂ ಮರೆಯಾಗಿದ್ದು. 4 ಅವನು ಮಲಗಿದ ಸ್ಥಳವನ್ನು ತಿಳಿದುಕೊಂಡು ಹೋಗಿ ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದು ಬಿಟ್ಟು ಅಲ್ಲೇ ಮಲಗಿಕೋ; ಆ ಮೇಲೆ ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುವನು” ಅಂದಳು. 5 ಅದಕ್ಕೆ ರೂತಳು “ನೀನು ಹೇಳಿದ ಹಾಗೆಯೇ ಮಾಡುವೆನು” ಎಂದು ಹೇಳಿದಳು.
6 ಅತ್ತೆಯ ಆಜ್ಞೆಯಂತೆಯೇ ಕಣಕ್ಕೆ ಹೋಗಿ, 7 ಬೋವಜನು ಅನ್ನಪಾನಗಳನ್ನು ತೆಗೆದುಕೊಂಡು ಸಂತುಷ್ಟನಾಗಿ ರಾಶಿಯ ಬಳಿಯಲ್ಲಿ ಮಲಗಿದ ಮೇಲೆ ರಹಸ್ಯವಾಗಿ ಬಂದು ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದುಬಿಟ್ಟು, ಕಾಲ್ಬದಿಯಲ್ಲಿ ಮಲಗಿದಳು. 8 ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ ಬೋವಜನು ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವ ಹೆಂಗಸನ್ನು ಕಂಡು, 9 ಹೆದರಿ ಆಕೆಯನ್ನು “ನೀನು ಯಾರು?” ಎಂದು ಕೇಳಲು ಆಕೆಯು “ನಾನು ನಿನ್ನ ದಾಸಿಯಾದ ರೂತಳು, * 3:9 ನೀನು ಸಮೀಪಬಂಧುವಾಗಿರುವುದರಿಂದ ನನ್ನನ್ನು ವಿಮೋಚಿಸುವ ಹಕ್ಕು ನಿನಗುಂಟು ಆದ್ದರಿಂದ ನನ್ನನ್ನು ಮದುವೆಯಾಗು.ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಅಂದಳು. 10 ಆಗ ಅವನು “ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಅಥವಾ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮೊದಲಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು. 11 ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬುದು ಊರಿನವರಿಗೆಲ್ಲಾ ತಿಳಿದಿದೆ; ಆದ್ದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು. 12 ನಾನು ಸಮೀಪಬಂಧುವೆಂಬುದು ನಿಜ; ಆದರೂ ನನಗಿಂತ ಸಮೀಪ ಬಂಧು ಒಬ್ಬನಿದ್ದಾನೆ. 13 ಈ ರಾತ್ರಿ ಇಲ್ಲೇ ಇರು; ನಾಳೆ ಅವನು ಮೈದುನಧರ್ಮವನ್ನು ನೆರವೇರಿಸಿದರೆ ಸರಿ; ಇಲ್ಲವಾದರೆ ಯೆಹೋವನಾಣೆ, ನಾನೇ ಅದನ್ನು ನೆರವೇರಿಸುವೆನು. ಬೆಳಗಾಗುವ ತನಕ ಇಲ್ಲೇ ಮಲಗಿಕೋ” ಎಂದು ಹೇಳಿದನು. 14 ಆಕೆಯು ಆ ವರೆಗೂ ಅವನ ಕಾಲುಗಳ ಬಳಿಯಲ್ಲೇ ಮಲಗಿಕೊಂಡಿದ್ದಳು. ಒಬ್ಬ ಹೆಂಗಸು ಕಣಕ್ಕೆ ಬಂದಿದ್ದಳೆಂಬುವುದು ಯಾರಿಗೂ ಗೊತ್ತಾಗಬಾರದೆಂದು ಅವನು ಹೇಳಿದ್ದರಿಂದ ಗುರುತು ಹಿಡಿಯಲಾರದಷ್ಟು ಕತ್ತಲಿರುವಾಗಲೇ ಆಕೆಯು ಎದ್ದಳು. 15 ಆಗ ಅವನು ಆಕೆಗೆ “ನಿನ್ನ ಮೇಲ್ಹೊದಿಕೆಯನ್ನು ಹಾಸು” ಎಂದು ಹೇಳಿದನು, ಆಕೆ ಹಾಸಲು ಅದರಲ್ಲಿ † 3:15 24 ಕಿಲೋಗ್ರಾಂ.ಆರು ಪಡಿ ಜವೆಗೋದಿಯನ್ನು ಹಾಕಿ ಹೊರಿಸಿ ಕಳುಹಿಸಿದನು. ಆಕೆಯು ಊರೊಳಕ್ಕೆ ಹೋದಳು. 16 ಅತ್ತೆಯ ಬಳಿಗೆ ಬಂದಾಗ, ಅತ್ತೆಯು “ನನ್ನ ಮಗಳೇ, ನೀನು ಹೋಗಿದ್ದ ಕಾರ್ಯವೇನಾಯಿತು?” ಎಂದು ಕೇಳಲು ಆಕೆಯು ಆ ಮನುಷ್ಯನು ಮಾಡಿದ್ದೆಲ್ಲವನ್ನೂ ತಿಳಿಸಿ, 17 “ ‘ನೀನು ಬರಿಗೈಯಿಂದ ಅತ್ತೆಯ ಬಳಿಗೆ ಹೋಗಬಾರದೆಂದು’ ಹೇಳಿ ಈ ಆರು ಪಡಿ ಜವೆಗೋದಿಯನ್ನು ಕೊಟ್ಟನು” ಅಂದಳು. 18 ಅತ್ತೆಯು “ನನ್ನ ಮಗಳೇ, ಈ ಕಾರ್ಯವು ಏನಾಗುವುದೆಂದು ಗೊತ್ತಾಗುವವರೆಗೂ ಸುಮ್ಮನಿರು; ಈ ವಿಷಯವನ್ನು ಇತ್ಯರ್ಥ ಮಾಡುವವರೆಗೂ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.