3
ಸ್ನಾನಿಕನಾದ ಯೋಹಾನನ ಉಪದೇಶ
ಮಾರ್ಕ 1:2-8; ಲೂಕ 3:1-18; ಯೋಹಾ 1:6-8,19-34
1 ಆ ದಿನಗಳಲ್ಲಿ* 3:1 ಯೇಸುವಿನ ಜನನದ ಹಲವು ವರ್ಷಗಳ ನಂತರ, ಸ್ನಾನಿಕನಾದ ಯೋಹಾನನು ಬೆಳೆದು ಯೌವನಸ್ಥನಾಗಿ ದೇವರ ಹಾಗೂ ಕ್ರಿಸ್ತನ ವಿಷಯವಾಗಿ ಸಾರಿದನು. ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ, 2 ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”
3 † 3:3 ಯೆಶಾ 40. 3“ ‘ಕರ್ತನ ದಾರಿಯನ್ನು ಸಿದ್ಧಮಾಡಿರಿ;
ಆತನ ಮಾರ್ಗವನ್ನು ಸರಾಗ ಮಾಡಿರಿ’ ಎಂದು ಅಡವಿಯಲ್ಲಿ
ಕೂಗುವವನ ಶಬ್ದವಿದೆ” ಎಂಬುದಾಗಿ ಪ್ರವಾದಿಯಾದ
ಯೆಶಾಯನಿಂದ ಸೂಚಿತನಾದವನು ಇವನೇ.
4 ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
5 ಆಗ ಯೆರೂಸಲೇಮಿನವರು, ಎಲ್ಲಾ ಯೂದಾಯದವರೂ ಮತ್ತು ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯ ಜನರು ಅವನ ಬಳಿಗೆ ಹೊರಟು ಬಂದು, 6 ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
7 ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು? 8 ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ. 9 ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ. 10 ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಆದ್ದರಿಂದ ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 11 ‡ 3:11 ಯೋಹಾ 1:26,33; ಅ. ಕೃ. 1:5 ನಾನಂತೂ ಮಾನಸಾಂತರಕ್ಕಾಗಿ ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನ್ನ ನಂತರ ಬರುವವನು ನನಗಿಂತ ಶಕ್ತನು; ಆತನ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನಮಾಡಿಸುವನು. 12 ಹೊಟ್ಟನು ತೂರುವ ಮೊರವನ್ನು ಆತನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನು ಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟು ಬಿಡುವನು” ಎಂದು ಹೇಳಿದನು.
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದು
ಮಾರ್ಕ 1:9-11; ಲೂಕ 3:21,22
13 ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು. 14 ಆತನಿಗೆ ಯೋಹಾನನು§ 3:14 ಯೇಸು ಪಾಪವನ್ನೇ ಮಾಡದೆ ಇದ್ದರಿಂದ ತಡೆಯುತ್ತಾ, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು, ಆದರೆ ನೀನು ನನ್ನ ಬಳಿಗೆ ಬರುವುದೇಕೆ?” ಎಂದು ಹೇಳಿದಕ್ಕೆ, 15 ಯೇಸು ಪ್ರತ್ಯುತ್ತರವಾಗಿ ಅವನಿಗೆ, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ನೀತಿಯನ್ನು ನೆರವೇರಿಸತಕ್ಕದ್ದಾಗಿದೆ” ಎಂದು ಹೇಳಿದಾಗ ಯೋಹಾನನು ಒಪ್ಪಿಕೊಂಡನು.
16 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನೀರಿನಿಂದ ಮೇಲಕ್ಕೆ ಬಂದ ಕೂಡಲೇ ಇಗೋ, ಆತನಿಗಾಗಿ ಪರಲೋಕವು ತೆರೆಯಿತು; ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿದು ಬರುವುದನ್ನು ಕಂಡನು. 17 ಆಗ * 3:17 ಮತ್ತಾ 12:18; 17:5; ಕೀರ್ತ 2:7 “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ವಾಣಿ ಪರಲೋಕದಿಂದ ಕೇಳಿಬಂದಿತು.