8
ಸ್ಮರಿಸಿರಿ ಮತ್ತು ವಿಧೇಯರಾಗಿರಿ
ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಅನುಸರಿಸಿದರೆ ನೀವು ಬದುಕಿ ಅಭಿವೃದ್ಧಿಹೊಂದುವಿರಿ, ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಲ್ವತ್ತು ವರ್ಷ ಅರಣ್ಯದಲ್ಲಿ ನಡಿಸಿದ್ದನ್ನೂ, ನೀವು ಆತನ ಆಜ್ಞೆಗಳನ್ನು ಕೈಕೊಳ್ಳುತ್ತಿರೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ. ಮನುಷ್ಯರು ಆಹಾರದಿಂದ ಮಾತ್ರವಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ನುಡಿಯಿಂದಲೂ ಬದುಕುತ್ತಾರೆ ಎಂಬುದು ನಿಮಗೆ ತಿಳಿಯುವಂತೆ ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಹಸಿವೆಯಿಂದ ಬಳಲಿಸಿ, ನಿಮಗೂ, ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದನು. ಆ ನಲವತ್ತು ವರ್ಷ ನಿಮ್ಮ ಮೈಮೇಲಿದ್ದ ಉಡುಪು ಹಳೇಯದಾಗಲಿಲ್ಲ; ನಿಮ್ಮ ಕಾಲುಗಳು ಬಾತುಹೋಗಲಿಲ್ಲ. ತಂದೆಯು ಮಗನನ್ನು ಹೇಗೆ ಶಿಕ್ಷಿಸುತ್ತಾನೋ ಹಾಗೆಯೇ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಶಿಕ್ಷಿಸುತ್ತಾ ಬಂದನು ಎಂಬುವುದನ್ನು ನೀವು ತಿಳಿದುಕೊಳ್ಳಿರಿ. ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿ, ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶಕ್ಕೆ ನಿಮ್ಮನ್ನು ಸೇರಿಸುತ್ತಾನೆ. ಆ ದೇಶದ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತದೆ; ಮತ್ತು ತಗ್ಗುಗಳಲ್ಲಾಗಲಿ, ಗುಡ್ಡಗಳಲ್ಲಾಗಲಿ ಎಲ್ಲಾ ಕಡೆಯೂ ಬುಗ್ಗೆಗಳಿಂದ ನೀರು ಉಕ್ಕುತ್ತದೆ. ಆ ದೇಶದಲ್ಲಿ ಗೋದಿ, ಜವೆಗೋದಿ, ದ್ರಾಕ್ಷಿ, ಅಂಜೂರ, ದಾಳಿಂಬ ಇವುಗಳು ಬೆಳೆಯುತ್ತವೆ; ಎಣ್ಣೆ ಮರಗಳೂ ಮತ್ತು ಜೇನೂ ಸಿಕ್ಕುತ್ತವೆ. ಅಲ್ಲಿ ನೀವು ದುರ್ಭಿಕ್ಷವನ್ನು ಕಾಣದೆ ಸಮೃದ್ಧಿಯಾಗಿ ಊಟಮಾಡಿ, ಯಾವ ಕೊರತೆಯೂ ಇಲ್ಲದೆ ಇರುವಿರಿ. ಆ ದೇಶದಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ; ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳುಂಟು. 10 ನೀವು ಹೊಟ್ಟೆ ತುಂಬಾ ಊಟಮಾಡಿ ಸುಖದಿಂದಿರುವಾಗ ನಿಮ್ಮ ದೇವರಾದ ಯೆಹೋವನು ನಿಮಗೆ ಉತ್ತಮ ದೇಶವನ್ನು ಕೊಟ್ಟಿದ್ದಕ್ಕಾಗಿ ಆತನನ್ನು ಸ್ತುತಿಸಬೇಕು.
ದೇವರನ್ನು ಮರೆಯಬಾರದೆಂಬ ಎಚ್ಚರಿಕೆ
11 ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞಾವಿಧಿನಿಯಮಗಳನ್ನು ಕೈಕೊಳ್ಳದವರೂ, ಆತನನ್ನು ಮರೆಯುವವರೂ ಆಗಬೇಡಿರಿ. 12 ನೀವು ಹೊಟ್ಟೆತುಂಬಾ ಊಟಮಾಡಿ, ಸುಖವಾಗಿದ್ದು ಒಳ್ಳೇ ಮನೆಗಳನ್ನು ಕಟ್ಟಿಸಿಕೊಂಡು, 13 ಅವುಗಳಲ್ಲಿ ವಾಸವಾಗಿರುವ ಕಾಲದಲ್ಲಿ ನಿಮ್ಮ ದನಗಳೂ, ಆಡು ಕುರಿಗಳೂ, ನಿಮ್ಮ ಬೆಳ್ಳಿ ಮತ್ತು ಬಂಗಾರವೂ, 14 ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ ಒಂದು ವೇಳೆ ನೀವು ಅಹಂಕಾರದಿಂದ ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟೀರಿ. 15 ಆತನು ಐಗುಪ್ತ ದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ವಿಷಸರ್ಪಗಳೂ ಮತ್ತು ಚೇಳುಗಳೂ ಇದ್ದ ಆ ಘೋರವಾದ ಮಹಾ ಅರಣ್ಯವನ್ನೂ, ನೀರು ಬತ್ತಿಹೋದ ಭೂಮಿಗಳನ್ನೂ ದಾಟಿಸಿದ್ದನ್ನು ಮತ್ತು ಗಟ್ಟಿಯಾದ ಬಂಡೆಯೊಳಗಿಂದ ನೀರು ಹೊರಡಿಸಿದ್ದನ್ನು ಮರೆಯಬೇಡಿರಿ. 16 ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದ ನಂತರ, ನಿಮಗೆ ಸುಕ್ಷೇಮವನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದಾತನನ್ನು ನೀವು ಮರೆತು 17 ನಿಮ್ಮ ಮನಸ್ಸಿನೊಳಗೆ, “ಈ ಭಾಗ್ಯವು ನಮ್ಮ ಸಾಮರ್ಥ್ಯ ಮತ್ತು ಸಾಹಸಗಳಿಂದಲೇ ನಮಗುಂಟಾಯಿತು” ಎಂದು ಅಂದುಕೊಂಡೀರಿ. 18 ಆದುದರಿಂದ ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ಈಗ ನಿಮ್ಮ ಅನುಭವಕ್ಕೆ ಬಂದ ರೀತಿಯಲ್ಲಿ ನೆರವೇರಿಸುವವನಾಗಿ, ನಿಮಗೆ ಇಷ್ಟು ಭಾಗ್ಯವನ್ನು ಸಂಪಾದಿಸುವುದಕ್ಕೆ ಸಾಮರ್ಥ್ಯವನ್ನು ಕೊಟ್ಟವನೆಂದು ಜ್ಞಾಪಕಮಾಡಿಕೊಳ್ಳಿರಿ. 19 ನೀವು ನಿಮ್ಮ ದೇವರಾದ ಯೆಹೋವನನ್ನು ಮರೆತು, ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದರೆ ನೀವು ತಪ್ಪದೆ ನಾಶವಾಗಿ ಹೋಗುವಿರೆಂದು ನಿಮ್ಮನ್ನು ಈಗ ಖಂಡಿತವಾಗಿ ಎಚ್ಚರಿಸುತ್ತೇನೆ. 20 ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಕೇಳದೆ ಹೋದರೆ ನಿಮ್ಮ ಎದುರಾಗಿ ನಾಶವಾಗಿ ಹೋಗುವ ಇತರ ಜನಾಂಗಗಳಂತೆಯೇ ನೀವೂ ಆತನಿಂದ ನಾಶವಾಗಿ ಹೋಗುವಿರಿ.