12
ಯೆರೂಸಲೇಮಿನ ಬಿಡುಗಡೆ
ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ. ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ, ಮನುಷ್ಯರೊಳಗೆ ಜೀವಾತ್ಮವನ್ನು ಸೃಷ್ಟಿಸುವ ಯೆಹೋವನು ಇಂತೆನ್ನುತ್ತಾನೆ, “ಆಹಾ! ನಾನು ಯೆರೂಸಲೇಮನ್ನು ಸುತ್ತಣ ಸಕಲ ಜನಾಂಗಗಳಿಗೆ ಅಮಲೇರಿಸಿ ಓಲಾಡಿಸುವ ಬೋಗುಣಿಯನ್ನಾಗಿ ಮಾಡುವೆನು; ಯೆರೂಸಲೇಮಿಗೆ ಮುತ್ತಿಗೆಹಾಕುವಾಗ ಯೆಹೂದಕ್ಕೂ ಇಕ್ಕಟ್ಟಾಗುವುದು. ಆ ದಿನದಲ್ಲಿ ನಾನು ಯೆರೂಸಲೇಮನ್ನು ಸಮಸ್ತ ಜನಗಳಿಗೂ, ಭಾರೀ ಬಂಡೆಯನ್ನಾಗಿ ಮಾಡುವೆನು; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಲೋಕದ ಸಕಲ ರಾಜ್ಯಗಳು ಅದನ್ನೆತ್ತಿ ಹಾಕಲು ಕೂಡಿಬರುವವು.” ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ನಾನು ಎಲ್ಲಾ ಕುದುರೆಗಳು ಭಯದಿಂದ ತಬ್ಬಿಬ್ಬಾಗುವಂತೆ ಮಾಡುವೆನು, ಸವಾರರನ್ನು ಭ್ರಮೆಗೊಳಿಸುವೆನು; ಯೆಹೂದ ವಂಶವನ್ನು ಕಟಾಕ್ಷಿಸಿ ಜನಾಂಗಗಳ ಅಶ್ವಗಳನ್ನೆಲ್ಲಾ ಕುರುಡು ಮಾಡುವೆನು. ಆಗ ಯೆಹೂದದ ಕುಲಪತಿಗಳು ತಮ್ಮ ಮನಸ್ಸಿನೊಳಗೆ, ‘ಯೆರೂಸಲೇಮಿನವರು ತಮ್ಮ ದೇವರಾದ ಸೇನಾಧೀಶ್ವರ ಯೆಹೋವನಲ್ಲಿ ಬಲಗೊಂಡು ನಮಗೆ ತ್ರಾಣವಾಗಿದ್ದಾರೆ’ ಅಂದುಕೊಳ್ಳುವರು.
“ಆ ದಿನದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಸೌದೆಯ ಮಧ್ಯದಲ್ಲಿನ ಅಗ್ಗಿಷ್ಟಿಕೆಯನ್ನಾಗಿಯೂ, ಸಿವುಡುಗಳ ನಡುವಣ ಪಂಜನ್ನಾಗಿಯೂ ಮಾಡುವೆನು; ಅವರು ಸುತ್ತಣ ಜನಾಂಗಗಳನ್ನೆಲ್ಲಾ ಎಡಬಲಗಳಲ್ಲಿ ನುಂಗಿಬಿಡುವರು; ಯೆರೂಸಲೇಮಿನವರು ತಮ್ಮ ಸ್ಥಳವಾದ ಯೆರೂಸಲೇಮಿನಲ್ಲೇ ಇನ್ನು ವಾಸಿಸುವರು; ದಾವೀದ ವಂಶದವರ ಮಹಿಮೆಯೂ, ಯೆರೂಸಲೇಮಿನವರ ಮಹಿಮೆಯೂ, ಯೆಹೂದದ ಮಹಿಮೆಯನ್ನು ಮೀರದಂತೆ ಯೆಹೋವನು ಯೆಹೂದದ ಪಾಳೆಯಗಳಿಗೆ ಮೊದಲು ಜಯವನ್ನುಂಟುಮಾಡುವನು; ಆ ದಿನದಲ್ಲಿ ಯೆಹೋವನು ಯೆರೂಸಲೇಮಿನವರನ್ನು ಸುತ್ತಲು ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು; ದಾವೀದ ವಂಶವು ದೇವರಂತೆ, ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳಾಗುವುದು. ಯೆರೂಸಲೇಮಿನ ಮೇಲೆ ಬೀಳುವ ಎಲ್ಲಾ ಜನಾಂಗಗಳ ಧ್ವಂಸಕ್ಕೆ ಆ ದಿನದಲ್ಲಿ ಕೈಹಾಕುವೆನು.”
ಇಸ್ರಾಯೇಲರ ಪಶ್ಚಾತ್ತಾಪ
10 ದಾವೀದ ವಂಶದವರಲ್ಲಿಯೂ, ಯೆರೂಸಲೇಮಿನವರಲ್ಲಿಯೂ ದೇವರ ದಯೆಯನ್ನು ಹಂಬಲಿಸಿ ಬೇಡುವ ಭಾವವನ್ನು ಸುರಿಸುವೆನು; ತಾವು ಇರಿದವನನ್ನು ದಿಟ್ಟಿಸಿ ನೋಡುವರು; ಇದ್ದ ಒಬ್ಬ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು. ಚೊಚ್ಚಲ ಮಗನ ವಿಯೋಗಕ್ಕೋಸ್ಕರ ದುಃಖಪಟ್ಟಂತೆ ಅವನಿಗಾಗಿ ದುಃಖಿಸುವರು. 11 ಮೆಗಿದ್ದೋವಿನ ತಗ್ಗಿನೊಳಗೆ ಹದದ್ ರಿಮ್ಮೋನಿನಲ್ಲಿ ಗೋಳಾಟವಾಗುವಂತೆ ಯೆರೂಸಲೇಮಿನಲ್ಲಿ ಆ ದಿನ ದೊಡ್ಡ ಗೋಳಾಟವಾಗುವುದು.
12 ದೇಶವೆಲ್ಲಾ ಗೋಳಾಡುವುದು, ಒಂದೊಂದು ಕುಟುಂಬವು ಬೇರೆ ಬೇರೆಯಾಗಿ ಗೋಳಾಡುವುದು; ದಾವೀದ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ; ನಾತಾನ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ; 13 ಲೇವಿ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ; ಶಿಮ್ಮಿಯ ಸಂತಾನದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ, 14 ಉಳಿದ ಕುಟುಂಬಗಳೆಲ್ಲಾ ಬೇರೆ ಬೇರೆ, ಒಂದೊಂದರಲ್ಲಿಯೂ ಹೆಂಗಸರು, ಗಂಡಸರು ಬೇರೆ ಬೇರೆ, ಹೀಗೆ ಬೇರೆ ಬೇರೆಯಾಗಿಯೇ ಗೋಳಾಡುವರು.