105
ವಾಗ್ದಾನವನ್ನು ನೆರವೇರಿಸಿದ ಯೆಹೋವನಿಗೆ ಸ್ತೋತ್ರ
ಕೀರ್ತ 78; 106
ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ;
ಆತನ ನಾಮದ ಮಹತ್ವವನ್ನು ವರ್ಣಿಸಿರಿ;
ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ.
ಆತನನ್ನು ಕೀರ್ತಿಸಿರಿ, ಭಜಿಸಿರಿ;
ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ;
ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.
ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ;
ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ,
ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು,
ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ,
ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ.
ಯೆಹೋವನೆಂಬಾತನೇ ನಮ್ಮ ದೇವರು;
ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ,
ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.
ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು;
ಇಸಾಕನಿಗೆ ತನ್ನ ವಾಗ್ದಾನಗಳನ್ನು ಕೊಟ್ಟನು.
10 ಅದು ರಾಜಶಾಸನದಂತೆ ಇರುವುದೆಂದು ಇಸ್ರಾಯೇಲನಿಗೂ ಮಾತುಕೊಟ್ಟನು.
11 ಅವರಲ್ಲಿ ಸ್ವಲ್ಪ ಜನರು
ಕಾನಾನ್ ದೇಶದಲ್ಲಿ ಪ್ರವಾಸಿಗಳಾಗಿ ಇರುವಾಗಲೇ,
12 ಆತನು, “ನಿಮಗೆ ಈ ದೇಶವನ್ನು ಕೊಡುವೆನು;
ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು” ಎಂದು ಹೇಳಿದನು.
13 ಅವರು ದೇಶದಿಂದ ದೇಶಕ್ಕೂ, ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಾಗ,
14 ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ.
ಆತನು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ,
15 “ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು,
ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು” ಎಂದು ಹೇಳಿದನು.
16 ಅನಂತರ ಆತನು ಐಗುಪ್ತ ದೇಶದಲ್ಲಿ ಕ್ಷಾಮವನ್ನು ಬರಮಾಡಿ,
* 105:16 ಅಥವಾ ಆಹಾರವೆಂಬ ಊರುಗೋಲನ್ನು ಮುರಿದುಬಿಟ್ಟನು. ಆಹಾರವನ್ನು ನಾಶಮಾಡಿಬಿಟ್ಟನು.
17 ಆತನು ಅವರ ಮುಂದಾಗಿ ಒಬ್ಬನನ್ನು ಕಳುಹಿಸಿದನು;
ದಾಸತ್ವಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವನ ಕಾಲುಗಳು ಬೇಡಿಗಳಿಂದ ಕಟ್ಟಲ್ಪಟ್ಟವು;
ಕಬ್ಬಿಣದ ಕೊರಳಪಟ್ಟಿಯಿಂದ ಅವನು ಬಂಧಿತನಾದನು.
19 ಅವನು ತನ್ನ ಮಾತು ನೆರವೇರುವ ತನಕ
ಯೆಹೋವನ ವಾಕ್ಯದಿಂದ ಶೋಧಿತನಾದನು.
20 ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು;
ಜನಾಧಿಪತಿಯು ಅವನನ್ನು ಬಿಡಿಸಿದನು.
21 ಅವನನ್ನು ತನ್ನ ಮನೆಗೆ ಯಜಮಾನನನ್ನಾಗಿಯೂ,
ತನ್ನ ಆಸ್ತಿಗೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದನು.
22 ತನ್ನ ಪ್ರಧಾನರನ್ನು ಇಷ್ಟಾನುಸಾರವಾಗಿ ಬಂಧಿಸುವುದಕ್ಕೂ,
ತನ್ನ ಮಂತ್ರಿಗಳಿಗೆ ಬುದ್ಧಿಕಲಿಸುವುದಕ್ಕೂ ಅವನಿಗೆ ಅಧಿಕಾರಕೊಟ್ಟನು.
23 ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು;
ಯಾಕೋಬನು ಹಾಮನ ದೇಶದಲ್ಲಿ ಪ್ರವಾಸಿಯಾದನು.
24 ದೇವರು ತನ್ನ ಜನರನ್ನು ಬಹಳವಾಗಿ ವೃದ್ಧಿಮಾಡಿ,
ಅವರು ಶತ್ರುಗಳಿಗಿಂತ ಬಲಿಷ್ಠರಾಗುವಂತೆ ಮಾಡಿದನು.
25 ಆತನು ಆ ದೇಶದವರ ಹೃದಯವನ್ನು ಮಾರ್ಪಡಿಸಿದ್ದರಿಂದ,
ಅವರು ಆತನ ಜನರನ್ನು ದ್ವೇಷಿಸಿ, ಆತನ ಸೇವಕರನ್ನು ಕುಯುಕ್ತಿಯಿಂದ ನಡೆಸಿದರು.
26 ಆಗ ಆತನು ತನ್ನ ಸೇವಕನಾದ ಮೋಶೆಯನ್ನೂ,
ತಾನು ಆರಿಸಿಕೊಂಡ ಆರೋನನನ್ನೂ ಕಳುಹಿಸಿದನು.
27 ಅವರು ಹಾಮನ ದೇಶದವರ ಮಧ್ಯದಲ್ಲಿ,
ಆತನು ಆಜ್ಞಾಪಿಸಿದ ವಿವಿಧ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದರು.
28 ಆತನು ಕತ್ತಲೆಯನ್ನು ಕಳುಹಿಸಲು ಕತ್ತಲೆಯಾಯಿತು.
ಐಗುಪ್ತ್ಯರು ಆತನ ಆಜ್ಞೆಗಳನ್ನು ಅನುಸರಿಸಲಿಲ್ಲ.
29 ಆತನು ಐಗುಪ್ತ್ಯರ ನೀರನ್ನು ರಕ್ತಮಾಡಿ, ಮೀನುಗಳನ್ನು ಸಾಯಿಸಿದನು.
30 ಅವರ ದೇಶದಲ್ಲೆಲ್ಲಾ ಕಪ್ಪೆಗಳು ತುಂಬಿಕೊಂಡವು;
ಅರಮನೆಯಲ್ಲಿಯೂ ವ್ಯಾಪಿಸಿಕೊಂಡವು.
31 ಆತನು ಆಜ್ಞಾಪಿಸಲು ಅವರ ಎಲ್ಲಾ ಪ್ರಾಂತ್ಯಗಳಲ್ಲಿ,
ವಿಷದ ಹುಳಗಳೂ, ಹೇನುಗಳೂ ಉಂಟಾದವು.
32 ಆತನು ಅವರ ದೇಶದಲ್ಲಿ ಕಲ್ಮಳೆಯನ್ನು, ಅಗ್ನಿಜ್ವಾಲೆಯನ್ನು ಬರಮಾಡಿ,
33 ಅವರ ದ್ರಾಕ್ಷಾಲತೆಗಳನ್ನು, ಅಂಜೂರದ ಗಿಡಗಳನ್ನು ನಾಶಮಾಡಿ,
ಅವರ ಪ್ರಾಂತ್ಯಗಳಲ್ಲಿದ್ದ ಮರಗಳನ್ನು ಮುರಿದುಬಿಟ್ಟನು.
34 ಆತನು ಆಜ್ಞಾಪಿಸಲು ಮಿಡತೆಗಳೂ,
ಲೆಕ್ಕವಿಲ್ಲದಷ್ಟು ಜಿಟ್ಟೆಹುಳಗಳೂ ಬಂದು,
35 ಅವರ ದೇಶದಲ್ಲಿದ್ದ ಎಲ್ಲಾ ಪೈರುಗಳನ್ನು,
ಭೂಮಿಯ ಬೆಳೆಗಳನ್ನು ತಿಂದುಬಿಟ್ಟವು.
36 ಅವನು ಆ ದೇಶದವರ ವೀರ್ಯಕ್ಕೆ ಪ್ರಥಮಫಲವಾಗಿದ್ದ,
ಚೊಚ್ಚಲ ಮಕ್ಕಳನ್ನು ಸಂಹರಿಸಿದನು.
37 ಇಸ್ರಾಯೇಲರನ್ನು ಬೆಳ್ಳಿ, ಬಂಗಾರಗಳ ಸಹಿತವಾಗಿ ಹೊರಗೆ ಬರಮಾಡಿದನು;
ಅವರ ಕುಲಗಳಲ್ಲಿ ಎಡವುವವನು ಒಬ್ಬನಾದರೂ ಇರಲಿಲ್ಲ.
38 ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆಯುಳ್ಳವರಾದ್ದರಿಂದ,
ಅವರು ಹೊರಟು ಹೋದದ್ದಕ್ಕೆ ಸಂತೋಷಿಸಿದರು.
39 ಅವರಿಗೆ ಹಗಲಲ್ಲಿ ನೆರಳಿಗೋಸ್ಕರ ಮೋಡವನ್ನು,
ಇರುಳಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನು ಮೇಲೆ ಹರಡಿದನು.
40 ಅವರು ಬೇಡಿಕೊಳ್ಳಲು ಲಾವಕ್ಕಿಗಳನ್ನು ಬರಮಾಡಿದನು;
ದಿವ್ಯ ಆಹಾರದಿಂದ ಅವರನ್ನು ತೃಪ್ತಿಗೊಳಿಸಿದನು.
41 ಆತನು ಬಂಡೆಯನ್ನು ಸೀಳಲು ನೀರು ಚಿಮ್ಮಿ ಬಂದು,
ಅರಣ್ಯದಲ್ಲಿ ನದಿಯಾಗಿ ಹರಿಯಿತು.
42 ಹೀಗೆ ಆತನು ತನ್ನ ಪರಿಶುದ್ಧ ವಚನವನ್ನೂ,
ತನ್ನ ಸೇವಕನಾದ ಅಬ್ರಹಾಮನನ್ನೂ ನೆನಪುಮಾಡಿಕೊಂಡು
43 ತನ್ನ ಪ್ರಜೆಯು ಉಲ್ಲಾಸದಿಂದಲೂ,
ತಾನು ಆರಿಸಿಕೊಂಡವರು ಉತ್ಸಾಹಧ್ವನಿಯಿಂದಲೂ ಹೊರಗೆ ಬರುವಂತೆ ಮಾಡಿದನು.
44 ಆತನು ಅವರಿಗೆ ಪರಜನಾಂಗಗಳ ದೇಶವನ್ನು ಕೊಟ್ಟನು;
ಅನ್ಯಜನಾಂಗಗಳ ಕಷ್ಟಾರ್ಜಿತವು ಅವರ ಕೈ ಸೇರಿತು.
45 ಅವರು ತನ್ನ ವಿಧಿಗಳನ್ನು ಕೈಕೊಂಡು,
ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.
ಯೆಹೋವನಿಗೆ ಸ್ತೋತ್ರ!

*105:16 105:16 ಅಥವಾ ಆಹಾರವೆಂಬ ಊರುಗೋಲನ್ನು ಮುರಿದುಬಿಟ್ಟನು.