26
1 ಬೇಸಿಗೆಯಲ್ಲಿ ಹಿಮ, ಸುಗ್ಗಿಯಲ್ಲಿ ಮಳೆ ಹೇಗೋ,
ಮೂಢನಿಗೆ ಮಾನವು ಹಾಗೆ ಸರಿಯಲ್ಲ.
2 ಕುಪ್ಪಳಿಸುತ್ತಿರುವ ಗುಬ್ಬಿಯಂತೆ, ಹಾರಾಡುವ ಬಾನಕ್ಕಿಯ ಹಾಗೆ,
ಕಾರಣವಿಲ್ಲದೆ ಕೊಟ್ಟ ಶಾಪವು ಎರಗಿ ನಿಲ್ಲದು.
3 ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ,
ಮೂಢನ ಬೆನ್ನಿಗೆ ಬೆತ್ತ.
4 ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡಬೇಡ,
ನೀನೂ ಅವನಿಗೆ ಸಮಾನನಾದೀಯೆ.
5 ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡು,
ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.
6 ಮೂಢನ ಮೂಲಕ ಮಾತನ್ನು ಹೇಳಿಕಳುಹಿಸುವವನು,
ತನ್ನ ಕಾಲುಗಳನ್ನು ತಾನೇ ಕಡಿದುಕೊಂಡು ಕೇಡನ್ನು ಕುಡಿಯುವನು.
7 ಮೂಢನ ಬಾಯಿಯ ಜ್ಞಾನೋಕ್ತಿಯು,
ಜೋಲಾಡುವ ಕುಂಟಕಾಲು.
8 ಮೂಢನಿಗೆ ಕೊಡುವ ಮಾನವು,
ಕವಣೆಯಲ್ಲಿಟ್ಟ ಕಲ್ಲಿನ ಹಾಗೆ.
9 ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು,
ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲಿನ ಹಾಗೆ.
10 ಮೂಢರನ್ನೂ, ತಿರುಗಾಡುವವರನ್ನೂ* 26:10 ತಿರುಗಾಡುವವರನ್ನೂ ಅಥವಾ ಕುಡುಕರನ್ನು ಕೂಲಿಗೆ ಕರೆಯುವವನು,
ಯಾರಿಗೋ ತಗಲಲಿ ಎಂದು ಬಾಣವನ್ನು ಎಸೆಯುವವನಂತೆ. † 26:10 ಯಾರಿಗೋ ತಗಲಲಿ ಎಂದು ಬಾಣವನ್ನು ಎಸೆಯುವವನಂತೆ. ಅಥವಾ ಹಾದುಹೋಗುವವರೆಲ್ಲರನ್ನು ಗಾಯಪಡಿಸುವವನಂತೆ.
11 ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಳ್ಳುವ ಹಾಗೆ,
ಮೂಢನು ತಾನು ಮಾಡಿದ ಮೂರ್ಖತನವನ್ನೇ ಪುನಃ ಮಾಡುವನು.
12 ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವವನನ್ನು ನೋಡು,
ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು.
13 “ದಾರಿಯಲ್ಲಿ ಸಿಂಹವಿದೆ,
ಬೀದಿಗಳಲ್ಲಿ ತಿರುಗಾಡುತ್ತಿದೆ” ಎಂಬುದು ಸೋಮಾರಿಯ ನೆವ.
14 ಕದವು ತಿರುಗುಣಿಯಲ್ಲಿ ಹೇಗೋ,
ಹಾಗೆ ಸೋಮಾರಿಯು ಹಾಸಿಗೆಯಲ್ಲಿ ಹೊರಳಾಡುತ್ತಿರುವನು.
15 ಸೋಮಾರಿಯು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ,
ತಿರುಗಿ ಬಾಯಿಯ ಹತ್ತಿರ ತರಲಾರದಷ್ಟು ಆಯಾಸಗೊಳ್ಳುತ್ತಾನೆ.
16 ವಿವೇಕದಿಂದ ಉತ್ತರಕೊಡಬಲ್ಲ ಏಳು ಜನರಿಗಿಂತಲೂ,
ತಾನೇ ಜ್ಞಾನಿಯೆಂದು ಸೋಮಾರಿಯು ಎಣಿಸಿಕೊಳ್ಳುವನು.
17 ಒಬ್ಬನು ದಾರಿಯಲ್ಲಿ ಹೋಗುತ್ತಾ ಪರರ ವ್ಯಾಜ್ಯಕ್ಕೆ ಸೇರಿ ರೇಗಿಕೊಳ್ಳುವುದು,
ನಾಯಿಯ ಕಿವಿಹಿಡಿದ ಹಾಗೆ.
18 ನೆರೆಯವನನ್ನು ಮೋಸಗೊಳಿಸಿ, “ತಮಾಷೆಗೋಸ್ಕರ,
ಮಾಡಿದೆನಲ್ಲಾ” ಎನ್ನುವವನು,
19 ಕೊಳ್ಳಿಗಳನ್ನೂ, ಅಂಬುಗಳನ್ನೂ, ಸಾವನ್ನೂ ಬೀರುವ,
ದೊಡ್ಡ ಹುಚ್ಚನ ಹಾಗೆ.
20 ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವುದು,
ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವುದು.
21 ಕೆಂಡಕ್ಕೆ ಇದ್ದಲು, ಉರಿಗೆ ಕಟ್ಟಿಗೆ,
ವ್ಯಾಜ್ಯದ ಕಿಚ್ಚನ್ನೆಬ್ಬಿಸುವುದಕ್ಕೆ ಜಗಳಗಂಟಿಗ.
22 ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು,
ಇವು ಹೊಟ್ಟೆಯೊಳಕ್ಕೇ ಇಳಿಯುವವು.
23 ಕೆಟ್ಟ ಹೃದಯದಿಂದ ಪ್ರೀತಿಯನ್ನಾಡುವ ತುಟಿಯು,
ಬೆಳ್ಳಿ ಲೇಪನ ಮಾಡಿದ ಮಣ್ಣಿನ ಮಡಿಕೆಯ ಹಾಗೆ.
24 ಶತ್ರುವು ಸ್ನೇಹಭಾವದಿಂದ ನಟಿಸುತ್ತಾನೆ,
ಅಂತರಂಗದಲ್ಲಿ ಬರೀ ಮೋಸವನ್ನು ಇಟ್ಟುಕೊಂಡಿದ್ದಾನೆ.
25 ಸವಿಮಾತನಾಡಿದರೂ ಅವನನ್ನು ನಂಬಬೇಡ,
ಅವನ ಹೃದಯದಲ್ಲಿ ಎಷ್ಟೋ ಹೇಯ ಕೃತ್ಯಗಳು.
26 ತನ್ನ ಹಗೆಯನ್ನು ವಂಚನೆಯಿಂದ ಮರೆಮಾಚಿಕೊಂಡಿದ್ದರೂ,
ಅವನ ಕೆಟ್ಟತನವು ಸಭೆಯಲ್ಲಿ ಬೈಲಾಗುವುದು.
27 ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು,
ಹೊರಳಿಸುವವನ ಮೇಲೆಯೇ ಕಲ್ಲು ಹೊರಳುವುದು.
28 ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ದ್ವೇಷಿಸುವನು,
ಕಪಟದ ಬಾಯಿ ನಾಶಕರ.