4
ಯೇಸು ಸಮಾರ್ಯ ಸ್ತ್ರೀಯ ಸಂಗಡ ಸಂಭಾಷಣೆ ಮಾಡಿದ್ದು
1 ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆಂಬ ಸುದ್ದಿಯನ್ನು ಫರಿಸಾಯರು ಕೇಳಿದರೆಂದು ಕರ್ತನಿಗೆ ತಿಳಿದಾಗ, 2 (ಆದರೆ ಯೇಸು ತಾನೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಆತನ ಶಿಷ್ಯರೇ ಮಾಡಿಸುತ್ತಿದ್ದರು), 3 ಆತನು ಯೂದಾಯವನ್ನು ಬಿಟ್ಟು ತಿರುಗಿ ಗಲಿಲಾಯಕ್ಕೆ ಹೊರಟು ಹೋದನು. 4 ಆತನು ಸಮಾರ್ಯ ಸೀಮೆಯನ್ನು ಹಾದುಹೋಗಬೇಕಾಯಿತು. 5 ಹೋಗುವಾಗ ಸಮಾರ್ಯ ಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. * 4:5 ಯೋಹಾ 4:12; ಆದಿ 33:19; 48:22; ಯೆಹೋ. 24:32:ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಹತ್ತಿರದಲ್ಲಿತ್ತು. 6 ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡು ಆ ಬಾವಿಯ ಬಳಿಯಲ್ಲಿ ಹಾಗೆ ಕುಳಿತುಕೊಂಡನು. ಆಗ ಹೆಚ್ಚು ಕಡಿಮೆ † 4:6 ಮೂಲ: ಆರು ತಾಸಾಗಿತ್ತು. ಮಧ್ಯಾಹ್ನವಾಗಿತ್ತು. 7 ಸಮಾರ್ಯದವಳಾದ ಒಬ್ಬ ಸ್ತ್ರೀ ನೀರು ಸೇದುವುದಕ್ಕೆ ಬಂದಳು. ಯೇಸು ಆಕೆಯನ್ನು “ನನಗೆ ಕುಡಿಯುವುದಕ್ಕೆ ನೀರನ್ನು ಕೊಡು,” ಎಂದು ಕೇಳಿದನು. 8 ಅಷ್ಟರಲ್ಲಿ ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವುದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು. 9 ಆ ಸಮಾರ್ಯದ ಸ್ತ್ರೀಯು ಆತನಿಗೆ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದಾದರೂ ಹೇಗೆ?” ಎಂದು ಹೇಳಿದಳು. ಏಕೆಂದರೆ ‡ 4:9 ಮತ್ತಾ 10:5; ಲೂಕ 9:53:ಯೆಹೂದ್ಯರಿಗೂ ಸಮಾರ್ಯದವರಿಗೂ § 4:9 ಅಥವಾ ವ್ಯವಹಾರಗಳು. ಹೊಕ್ಕುಬಳಕೆ ಇರಲಿಲ್ಲ. 10 ಅದಕ್ಕೆ ಯೇಸು “ದೇವರ ವರವೇನೆಂಬುದೂ ಮತ್ತು ನನಗೆ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವಾತನು ಯಾರೆಂಬುದೂ ನಿನಗೆ ತಿಳಿದಿದ್ದರೆ ನೀನೇ ಅವನನ್ನು ಕೇಳುತ್ತಿದ್ದೆ. ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು” ಅಂದನು. 11 ಆ ಸ್ತ್ರೀ ಆತನಿಗೆ, “ಅಯ್ಯಾ, ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ ಮತ್ತು ಬಾವಿ ಆಳವಾಗಿದೆ, ಹೀಗಿರುವಾಗ, ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂದಿತು? 12 ನಮ್ಮ ಹಿರಿಯವನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನ ಜಾನುವಾರುಗಳೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದಿದ್ದರು” ಅನ್ನಲು, 13 ಯೇಸು ಆಕೆಗೆ, “ಈ ನೀರನ್ನು ಕುಡಿಯುವವರೆಲ್ಲರಿಗೆ ಪುನಃ ನೀರಡಿಕೆಯಾಗುವುದು, 14 ಆದರೆ, ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ. ನಾನು ಅವನಿಗೆ ಕೊಡುವ ನೀರು* 4:14 ಯೋಹಾ 7:38:ಅವನಲ್ಲಿ ಉಕ್ಕುವ ನೀರಿನ ಬುಗ್ಗೆಗಳಾಗಿದ್ದು ನಿತ್ಯ ಜೀವವನ್ನು ಉಂಟುಮಾಡುವುದು” ಎಂದು ಹೇಳಿದನು. 15 ಆ ಸ್ತ್ರೀಯು, “ಅಯ್ಯಾ, ನನಗೆ ಆ ನೀರನ್ನು ಕೊಡು, ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗುವುದಿಲ್ಲ. ನೀರು ಸೇದುವುದಕ್ಕೆ ಇಷ್ಟು ದೂರ ಬರಬೇಕಾಗಿರುವುದಿಲ್ಲ” ಅನ್ನಲು, 16 ಯೇಸು ಆಕೆಗೆ “ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದನು. 17 ಅದಕ್ಕೆ ಆ ಸ್ತ್ರೀಯು “ನನಗೆ ಗಂಡನಿಲ್ಲ” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯೇ. 18 ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ” ಎಂದನು. 19 ಆ ಸ್ತ್ರೀ ಆತನಿಗೆ, “ಅಯ್ಯಾ, ನೀನು ಒಬ್ಬ ಪ್ರವಾದಿ ಎಂದು ನನಗೆ ಕಾಣುತ್ತದೆ. 20 ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆ ಮಾಡುತ್ತಿದ್ದರು, ಆದರೆ ಯೆಹೂದ್ಯರಾದ ನೀವು ಆರಾಧನೆ ಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ ಎಂದು ನೀವು ಹೇಳುತ್ತೀರಲ್ಲಾ” ಎಂದಳು. 21 ಯೇಸು ಆಕೆಗೆ “ಅಮ್ಮಾ, ನನ್ನ ಮಾತನ್ನು ನಂಬು, ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ, ಯೆರೂಸಲೇಮಿಗಾಗಲಿ ಅಥವಾ ಈ ಬೆಟ್ಟಕ್ಕಾಗಲಿ ಹೋಗುವುದಿಲ್ಲ. 22 ಸಮಾರ್ಯದವರಾದ† 4:22 2 ಅರಸು. 7:28-34:ನೀವು ಅರಿಯದೇ ಇರುವಂಥದನ್ನು ಆರಾಧಿಸುತ್ತೀರಿ, ಆದರೆ ನಾವು ಅರಿತಿರುವುದನ್ನೇ ಆರಾಧಿಸುವವರಾಗಿದ್ದೇವೆ. ಏಕೆಂದರೆ, ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. 23 ಅದಕ್ಕಿಂತ ಹೆಚ್ಚಾಗಿ, ನಿಜವಾದ ಆರಾಧಕರು ತಂದೆಯನ್ನು ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ, ಅದುದರಿಂದ, ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾನೆ. 24 ದೇವರು ಆತ್ಮನಾಗಿದ್ದಾನೆ, ಮತ್ತು ಆತನನ್ನು ಆರಾಧಿಸುವವರು‡ 4:24 ಕೀರ್ತ 145:18; ಫಿಲಿ. 3:3:ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸಬೇಕಾಗಿದೆ” ಎಂದನು.
25 ಆ ಹೆಂಗಸು ಆತನಿಗೆ § 4:25 ಯೋಹಾ 1:41, 45; ಧರ್ಮೋ 18:18:“ಮೆಸ್ಸೀಯನು (ಎಂದರೆ ಕ್ರಿಸ್ತನು) ಬರುತ್ತಾನೆಂದು ನಾನು ಬಲ್ಲೆನು. ಆತನು ಬಂದಾಗ ನಮಗೆ ಎಲ್ಲವನ್ನು ತಿಳಿಸಿಕೊಡುವನು” ಎಂದು ಹೇಳಲು, 26 ಯೇಸು ಆಕೆಗೆ “ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದನು.
27 ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತನಾಡುತ್ತಿರುವೆ?” ಎಂದು ಒಬ್ಬರೂ ಆತನನ್ನು ಕೇಳಲಿಲ್ಲ. 28 ಆಗ ಆ ಸ್ತ್ರೀ ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ, 29 * 4:29 ಯೋಹಾ 1:41, 45; ಧರ್ಮೋ 18:18:“ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಬರತಕ್ಕ ಕ್ರಿಸ್ತನು ಅವನೇ ಇರಬಹುದೋ?” ಎಂದು ಹೇಳಿದಳು. 30 ಆಗ ಅವರೆಲ್ಲರು ಊರನ್ನು ಬಿಟ್ಟು ಆತನ ಬಳಿಗೆ ಬಂದರು.
31 ಅಷ್ಟರೊಳಗೆ ಶಿಷ್ಯರು “ಗುರುವೇ, ಊಟಮಾಡು” ಎಂದು ಆತನನ್ನು ಕೇಳಿಕೊಂಡರು. 32 ಆದರೆ ಆತನು ಅವರಿಗೆ “ನಿಮಗೆ ತಿಳಿಯದಿರುವ ಆಹಾರವು ನನ್ನ ಬಳಿಯಲ್ಲಿ ಉಂಟು” ಎಂದು ಹೇಳಲು 33 ಶಿಷ್ಯರು, “ಆತನಿಗೆ ಯಾರಾದರೂ ಊಟಕ್ಕೆ ತಂದು ಕೊಟ್ಟರೇನೊ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 34 ಯೇಸು ಅವರಿಗೆ † 4:34 ಯೋಹಾ 5:30, 36; 6, 38; 17:4; ಯೋಬ. 23:12:“ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ. 35 ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುವುದೆಂದು ನೀವು ಹೇಳುವುದುಂಟಷ್ಟೆ’? ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ. ಅವು ಬಲಿತು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿದೆಯೆಂದು ನಿಮಗೆ ಹೇಳುತ್ತೇನೆ. 36 ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಮತ್ತು ಕೊಯ್ಯುವವನಿಗೂ ಒಟ್ಟಿಗೆ ಸಂತೋಷವಾಗುವುದು. 37 ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ. 38 ನೀವು ಪ್ರಯಾಸ ಪಡದಂಥ ಬೆಳೆಯನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು, ಬೇರೊಬ್ಬರು ಪ್ರಯಾಸಪಟ್ಟರು, ನೀವು ಅವರ ಕಷ್ಟದಲ್ಲಿ ಸೇರಿದ್ದೀರಿ” ಎಂದು ಹೇಳಿದನು. 39 “ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನು” ಎಂಬುದಾಗಿ ಸಾಕ್ಷಿಕೊಡುತ್ತಿರುವ ಆ ಸ್ತ್ರೀಯ ಮಾತಿನಿಂದ, ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು. 40 ಆದುದರಿಂದ ಆ ಸಮಾರ್ಯದವರು ಆತನ ಬಳಿಗೆ ಬಂದು; ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು, ಆತನು ಎರಡು ದಿನ ಅಲ್ಲಿಯೇ ತಂಗಿದನು. 41 ಇನ್ನೂ ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿದರು, 42 ಜನರು ಆ ಸ್ತ್ರೀಗೆ, “ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ. ನಾವು ಸ್ವತಃ ಕಿವಿಯಾರೆ ಕೇಳಿ ಈತನು ನಿಜವಾಗಿಯೂ ಲೋಕರಕ್ಷಕನೇ ಎಂದು ತಿಳಿದುಕೊಂಡಿದ್ದೇವೆ” ಎಂದರು.
ಯೇಸು ಒಬ್ಬ ಅಧಿಕಾರಿಯ ಮಗನನ್ನು ಸ್ವಸ್ಥಮಾಡಿದ್ದು
43 ಎರಡು ದಿನಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು. 44 ಏಕೆಂದರೆ ಪ್ರವಾದಿಗೆ ಸ್ವಂತದೇಶದಲ್ಲಿ ಗೌರವವಿಲ್ಲವೆಂದು ಯೇಸು ತಾನೇ ಹೇಳಿದ್ದನು. 45 ಆತನು ಗಲಿಲಾಯವನ್ನು ತಲುಪಿದಾಗ ಗಲಿಲಾಯದವರು ಆತನನ್ನು ಸ್ವಾಗತಿಸಿದರು. ಯೆರೂಸಲೇಮಿನ ಪಸ್ಕಹಬ್ಬದ ಸಮಯದಲ್ಲಿ ಆತನು ಅಲ್ಲಿ ಮಾಡಿದ್ದನ್ನೆಲ್ಲಾ ಅವರು ನೋಡಿದ್ದರು, ಏಕೆಂದರೆ, ಅವರೂ ಹಬ್ಬಕ್ಕೆ ಹೋಗಿದ್ದರು.
46 ಹೀಗಿರಲಾಗಿ, ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಹಿಂತಿರುಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಅರಮನೆಯ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು. 47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಅಧಿಕಾರಿಯು ಕೇಳಿದಾಗ ತನ್ನ ಮಗನು ಸಾಯುವ ಸ್ಥಿತಿಯಲ್ಲಿದುದ್ದರಿಂದ ಯೇಸುವಿನ ಬಳಿಗೆ ಹೋಗಿ, “ನೀನು ಬಂದು ನನ್ನ ಮಗನನ್ನು ಸ್ವಸ್ಥಮಾಡು” ಎಂದು ಬೇಡಿಕೊಂಡನು. 48 ಯೇಸು ಅವನಿಗೆ “ನೀವು ಸೂಚಕ ಕಾರ್ಯಗಳನ್ನೂ ಮತ್ತು ಅದ್ಭುತ ಕಾರ್ಯಗಳನ್ನೂ ನೋಡದಿದ್ದರೆ ನಂಬುವುದೇ ಇಲ್ಲ” ಎಂದು ಹೇಳಿದನು. 49 ಆ ಅರಮನೆಯ ಅಧಿಕಾರಿಯು “ಆಯ್ಯಾ, ನನ್ನ ಮಗನು ಸಾಯುವುದಕ್ಕೆ ಮುಂಚೆ ನೀನು ಬರಬೇಕು” ಅನ್ನಲು 50 ಯೇಸು ಅವನಿಗೆ “ಹೋಗು ನಿನ್ನ ಮಗನು ಬದುಕುತ್ತಾನೆ” ಎಂದು ಹೇಳಿದನು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟು ಹೋದನು. 51 ಅವನು ಇನ್ನೂ ಘಟ್ಟಾ ಇಳಿದು ಹೋಗುತ್ತಿರುವಾಗಲೇ ಅವನ ಆಳುಗಳು ಅವನೆದುರಿಗೆ ಬಂದು ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು. 52 ಅವನು ಎಷ್ಟು ಘಂಟೆಯಲ್ಲಿ ಚೇತರಿಸಿಕೊಂಡನು ಎಂದು ಅವರನ್ನು ಕೇಳಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಘಂಟೆಗೆ ಜ್ವರವು ಅವನನ್ನು ಬಿಟ್ಟಿತು” ಎಂದರು. 53 ಆಗ “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದು ಸಂಭವಿಸಿತೆಂದು ಆ ತಂದೆಯು ತಿಳಿದುಕೊಂಡದ್ದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು. 54 ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.
*4:5 4:5 ಯೋಹಾ 4:12; ಆದಿ 33:19; 48:22; ಯೆಹೋ. 24:32:
†4:6 4:6 ಮೂಲ: ಆರು ತಾಸಾಗಿತ್ತು.
‡4:9 4:9 ಮತ್ತಾ 10:5; ಲೂಕ 9:53:
§4:9 4:9 ಅಥವಾ ವ್ಯವಹಾರಗಳು.
*4:14 4:14 ಯೋಹಾ 7:38:
†4:22 4:22 2 ಅರಸು. 7:28-34:
‡4:24 4:24 ಕೀರ್ತ 145:18; ಫಿಲಿ. 3:3:
§4:25 4:25 ಯೋಹಾ 1:41, 45; ಧರ್ಮೋ 18:18:
*4:29 4:29 ಯೋಹಾ 1:41, 45; ಧರ್ಮೋ 18:18:
†4:34 4:34 ಯೋಹಾ 5:30, 36; 6, 38; 17:4; ಯೋಬ. 23:12: