54
ಚೀಯೋನಿನ ಮುಂದಿನ ವೃದ್ಧಿಯೂ ವೈಭವವೂ
“ಹೆರದವಳೇ, ಬಂಜೆಯೇ, ಹರ್ಷಧ್ವನಿಗೈ! ಪ್ರಸವ ವೇದನೆಯನ್ನು ಅನುಭವಿಸದವಳೇ, ಆನಂದ ಸ್ವರವೆತ್ತಿ ಕೂಗು!
ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಯೆಹೋವನು ಹೇಳುತ್ತಾನೆ.
ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ;
ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು.
ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ; ನಿನ್ನ ಸಂತಾನದವರು ಜನಾಂಗಗಳನ್ನು ವಶಮಾಡಿಕೊಂಡು ಹಾಳು ಪಟ್ಟಣಗಳನ್ನು ಜನಭರಿತವಾಗುವಂತೆ ಮಾಡುವರು.
“ಹೆದರಬೇಡ, ನಿನಗೆ ಅವಮಾನವಾಗುವುದಿಲ್ಲ, ನಾಚಿಕೆಪಡದಿರು, ನಿನಗೆ ಆಶಾಭಂಗವಾಗದು;
ಯೌವನದಲ್ಲಿ ನಿನಗಾದ ಅವಮಾನವನ್ನು ಮರೆತುಬಿಡುವಿ, ವೈಧವ್ಯದಲ್ಲಿ ನಿನಗೆ ಸಂಭವಿಸಿದ ನಿಂದೆಯು ಇನ್ನು ನಿನ್ನ ನೆನಪಿಗೆ ಬಾರದು.
“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ;
ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು.
ನೀನು ತ್ಯಜಿಸಿದ ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ” ಎಂಬುದು ನಿನ್ನ ದೇವರ ನುಡಿ.
“ಕ್ಷಣಮಾತ್ರ ನಿನ್ನನ್ನು ಬಿಟ್ಟಿದ್ದೆನು, ಮಹಾ ಕೃಪೆಯಿಂದ ಸೇರಿಸಿಕೊಳ್ಳುವೆನು.
ತಟ್ಟನೆ ಉಬ್ಬಿ ಹರಿಯುವ ಕೋಪದಿಂದ ಒಂದು ಕ್ಷಣ ಮಾತ್ರ ನನ್ನ ಮುಖವನ್ನು ನಿನಗೆ ಮರೆಮಾಡಿಕೊಂಡಿದ್ದೆನು,
ಶಾಶ್ವತ ಕೃಪೆಯಿಂದ ನಿನ್ನನ್ನು ಕರುಣಿಸುವೆನು” ಎಂದು ನಿನ್ನ ವಿಮೋಚಕನಾದ ಯೆಹೋವನು ಅನ್ನುತ್ತಾನೆ.
“ನಿನ್ನನ್ನು ತ್ಯಜಿಸಿದ್ದು ನನಗೆ ನೋಹನ ಕಾಲದ ಜಲಪ್ರಳಯದಂತಿದೆ; ಇಂತಹ ಜಲಪ್ರಳಯವು ಭೂಮಿಯನ್ನು ಪುನಃ ಆವರಿಸುವುದಿಲ್ಲ ಎಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವುದಿಲ್ಲ, ಗದರಿಸುವುದಿಲ್ಲ ಎಂದು ಈಗ ಪ್ರಮಾಣಮಾಡಿದ್ದೇನೆ.
10 ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ.
11 ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ,
ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ, ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು.
12 ನಿನ್ನ ಶಿಖರಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ,
ನಿನ್ನ ಪೌಳಿಗೋಡೆಯನ್ನು ಮನೋಹರ ರತ್ನಗಳಿಂದ ನಿರ್ಮಿಸುವೆನು.
13 ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವುದು.
14 ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವುದಿಲ್ಲ, ನಾಶನವು ದೂರವಾಗಿರುವುದು, ನಿನ್ನ ಹತ್ತಿರಕ್ಕೆ ಬಾರದು.
15 ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ ಅದು ನನ್ನ ಅಪ್ಪಣೆಯಿಂದ ಅಲ್ಲ;
ಯಾರು ನಿನ್ನ ಮೇಲೆ ವ್ಯಾಜ್ಯವಾಡುತ್ತಾರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.
16 ಕೇಳು, ಕೆಂಡವನ್ನು ಊದುತ್ತಾ ಉಪಯುಕ್ತವಾದ ಆಯುಧವನ್ನು ಉಂಟುಮಾಡುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ,
ಹಾಳುಮಾಡುವ ಕೆಡುಕನನ್ನು ನಿರ್ಮಿಸಿದವನೂ ನಾನೇ.
17 ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ.
ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ, ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ” ಎಂದು ಯೆಹೋವನು ಅನ್ನುತ್ತಾನೆ.