32
ಮುಂದಿನ ಧರ್ಮರಾಜ್ಯದ ಸುಲಕ್ಷಣ
ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.
ಆಗ ಪ್ರತಿ ಮನುಷ್ಯನು ಗಾಳಿಯಲ್ಲಿ ಅಡಗಿಕೊಳ್ಳುವಂತೆಯೂ, ಅತಿವೃಷ್ಟಿಯಲ್ಲಿ ಮರೆಮಾಡಿಕೊಳ್ಳುವಂತೆಯೂ,
ಅರಣ್ಯದಲ್ಲಿನ ನೀರಿನ ಕಾಲುವೆಗಳ ಹಾಗೂ, ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.
ಆಗ ನೋಡುವವರ ಕಣ್ಣು ಮೊಬ್ಬಾಗದು, ಕೇಳುವವರ ಕಿವಿ ಮಂದವಾಗದು.
ಆತುರಗಾರರ ಹೃದಯವು ತಿಳಿವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆಯು ಸ್ವಚ್ಛವಾಗಿಯೂ, ಶೀಘ್ರವಾಗಿಯೂ ಮಾತನಾಡುವುದು.
ಇನ್ನು ಮೇಲೆ ನೀಚನು ಘನವಂತನೆನಿಸಿಕೊಳ್ಳನು. ಕಳ್ಳನು ಮಹನೀಯನೆನಿಸಿಕೊಳ್ಳನು.
ಏಕೆಂದರೆ ನೀಚನು ನೀಚವಾಗಿ ಮಾತನಾಡುವನು.
ಅವನ ಹೃದಯವು ಕೇಡನ್ನು ಕಲ್ಪಿಸಿ, ನಡೆಯದೆ ಇರುವುದನ್ನು ನಡಿಸಿ ಯೆಹೋವನಿಗೆ ವಿರುದ್ಧವಾಗಿ ಅಸತ್ಯವನ್ನಾಡಿ,
ಹಸಿದವನ ಆಶೆಯನ್ನು ಬರಿದುಮಾಡಿ, ಬಾಯಾರಿದವನ ಪಾನವನ್ನು ತಪ್ಪಿಸುವುದು.
ಮೋಸಗಾರನ ಆಯುಧಗಳು ಕೆಟ್ಟವುಗಳೇ, ದೀನದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ,
ಅವರನ್ನು ಸುಳ್ಳುಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.
ಘನವಂತನಾದರೋ ಘನಕಾರ್ಯಗಳನ್ನು ಕಲ್ಪಿಸುವನು. ಘನವಾದವುಗಳಲ್ಲಿಯೇ ನಿರತನಾಗಿರುವನು.
ಯೆರೂಸಲೇಮಿನ ನಿಶ್ಚಿಂತ ಹೆಂಗಸರನ್ನು ಎಚ್ಚರಿಸಿದ್ದು
ನಿಶ್ಚಿಂತರಾದ ಸ್ತ್ರೀಯರೇ, ಏಳಿರಿ, ನನ್ನ ಧ್ವನಿಯನ್ನು ಕೇಳಿರಿ.
ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ!
10 ನಿರ್ಭೀತರೇ, ಒಂದು ವರ್ಷದ ನಂತರ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ.
ಆಗ ದ್ರಾಕ್ಷಿಯ ಕೊಯ್ಲು ಇಲ್ಲದೆ ಹೋಗುವುದು, ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ.
11 ನಿಶ್ಚಿಂತರಾದ ಸ್ತ್ರೀಯರೇ, ನಡುಗಿರಿ! ನಿರ್ಭೀತರೇ, ಕಳವಳಗೊಳ್ಳಿರಿ!
ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಾಗಿ ಎದುರುನೋಡಿರಿ.
13 ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ.
ಉತ್ಸಾಹದಿಂದ ಕೂಡಿದ್ದ ಎಲ್ಲಾ ಮನೆಗಳ ಮತ್ತು ಪಟ್ಟಣಗಳಲ್ಲೂ ಮುಳ್ಳುಗಿಡಗಳು ಹುಟ್ಟಿಕೊಂಡಿವೆ.
14 ಅರಮನೆಯು ಪಾಳುಬೀಳುವುದು, ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು, ಓಫೆಲ್ ಗುಡ್ಡವೂ,
ಗೋಪುರವೂ ಶಾಶ್ವತವಾದ ಗುಹೆಗಳಾಗಿಯೂ,
ಕಾಡುಕತ್ತೆಗಳಿಗೆ ಉಲ್ಲಾಸಕರವಾದ ಸ್ಥಳವಾಗಿಯೂ, ದನಕುರಿಗಳ ಹಿಂಡುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುದು.
15 ಬಳಿಕ ಉನ್ನತಲೋಕದಿಂದ ದಿವ್ಯಾತ್ಮಧಾರೆಯು ನಮ್ಮ ಮೇಲೆ ಸುರಿಸಲ್ಪಡುವುದು. ಆಗ ಅರಣ್ಯವು ತೋಟವಾಗುವುದು,
ಈಗಿನ ತೋಟವು (ಮುಂದೆ ಬರುವವರಿಗೆ) ಅರಣ್ಯವಾಗಿ ಕಾಣಿಸುವುದು.
16 ನ್ಯಾಯವು ಅಡವಿಯಲ್ಲಿ ನೆಲೆಗೊಳ್ಳುವುದು, ಧರ್ಮವು ತೋಟದಲ್ಲಿ ಇದ್ದೇ ಇರುವುದು.
17 ನೀತಿಯ ಪರಿಣಾಮ ಶಾಂತಿ; ನೀತಿಯ ಫಲವು, ನಿತ್ಯವಾದ ಸಮಾಧಾನ ಮತ್ತು ನಿತ್ಯವಾದ ಭರವಸೆ ಆಗಿರುವವು.
18 ನನ್ನ ಜನರು ಸಮಾಧಾನದ ನಿವಾಸದಲ್ಲಿಯೂ, ನಿರ್ಭಯವಾದ ನಿಲಯಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
19 ಆದರೆ ಕಲ್ಮಳೆ ಸುರಿಯಲು ವನವು ಹಾಳಾಗುವುದು, ಪಟ್ಟಣವು ನೆಲಸಮವಾಗುವುದು. 20 ನೀರಾವರಿಗಳಲ್ಲೆಲ್ಲಾ ಬೀಜ ಬಿತ್ತುತ್ತಲೂ, ದನ ಕತ್ತೆಗಳನ್ನು ಮೇಯಲು ಬಿಡುತ್ತಲೂ ಇರುವ ನೀವು ಧನ್ಯರೇ ಸರಿ!