7
ಹಾಮಾನನ ದುಷ್ಟ ಯೋಜನೆಯನ್ನು ಬಯಲುಪಡಿಸಿದ ಎಸ್ತೇರ್ ರಾಣಿ
ಅರಸನು ಹಾಮಾನನೊಡನೆ ಎಸ್ತೇರಳ ಮನೆಗೆ ಔತಣಕ್ಕಾಗಿ ಬಂದನು. ಅವನು ಈ ಎರಡನೆಯ ದಿನದಲ್ಲಿಯೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಅರಸನು ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು” ಎಂದು ಹೇಳಿದನು. ಆಗ ಎಸ್ತೇರ್ ರಾಣಿಯು, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವುದಾದರೆ ನನ್ನ ವಿಜ್ಞಾಪನೆಯನ್ನೂ, ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಮತ್ತು ನನ್ನ ಜನಾಂಗವನ್ನೂ ಉಳಿಸಬೇಕು. ಜನರು ನಮ್ಮನ್ನು ಕೊಂದು ಸಂಹರಿಸಿ, ನಮ್ಮನ್ನು ನಿರ್ನಾಮಗೊಳಿಸುವ ಹಾಗೆ ನಾವು ಮಾರಲ್ಪಟ್ಟೆವು. ನಾವು ಸೇವಕ ಸೇವಕಿಯರಾಗುವುದಕ್ಕೆ ಗುಲಾಮರಂತೆ ಮಾರಲ್ಪಟ್ಟಿದ್ದರೆ ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು* 7:4 ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು ಅರಸನಿಗೆ ಉಂಟಾದ ನಷ್ಟವನ್ನು ಶತ್ರುವು ಸರಿಪಡಿಸಿಕೊಡಲಾರನು.” ಎಂದು ಉತ್ತರಕೊಟ್ಟಳು. ಅಹಷ್ವೇರೋಷ್ ರಾಜನು ಎಸ್ತೇರ್ ರಾಣಿಯನ್ನು, “ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು? ಅವನೆಲ್ಲಿ?” ಎಂದು ಕೇಳಿದನು. ಆಗ ಆಕೆಯು, “ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಮತ್ತು ಶತ್ರುವು ಈ ದುಷ್ಟ ಹಾಮಾನನೇ” ಎಂದಳು. ಇದನ್ನು ಕೇಳಿ ಹಾಮಾನನು ರಾಣಿಯ ಮುಂದೆ ಭಯಭೀತನಾದನು. ಅರಸನು ರೌದ್ರಾವೇಶನಾಗಿ ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟೆದ್ದು ಅರಮನೆಯ ತೋಟಕ್ಕೆ ಹೋದನು. ಹಾಮಾನನಾದರೋ ಅರಸನಿಂದ ತನಗೆ ಕೇಡು ಸಿದ್ಧವಾಯಿತೆಂದು ತಿಳಿದು ಎಸ್ತೇರಳ ಹತ್ತಿರ ತನ್ನ ಪ್ರಾಣರಕ್ಷಣೆಯ ನಿಮಿತ್ತವಾಗಿ ಬಿನ್ನಹಮಾಡಿಕೊಳ್ಳಲು ನಿಂತುಕೊಂಡಿದ್ದನು. ಅರಸನು ಅರಮನೆಯ ತೋಟದಿಂದ ತಾನು ದ್ರಾಕ್ಷಾರಸ ಪಾನಮಾಡಿದ ಗೃಹಕ್ಕೆ ಹಿಂತಿರುಗಿ ಬಂದು ಎಸ್ತೇರಳು ಒರಗಿಕೊಳ್ಳುವ ಸುಖಾಸನದ ಮೇಲೆ ಹಾಮಾನನು ಬಿದ್ದುಕೊಂಡಿರುವುದನ್ನು ಕಂಡು, “ಇವನು ರಾಣಿಯನ್ನು ನನ್ನ ಮುಂದೆಯೇ ಅರಮನೆಯಲ್ಲಿ ಭಂಗಪಡಿಸಬೇಕೆಂದಿರುತ್ತಾನೋ?” ಅಂದನು. ಅರಸನ ಬಾಯಿಂದ ಈ ಮಾತು ಹೊರಬಂದ ಕೂಡಲೆ ಸೇವಕರು ಹಾಮಾನನ ಮುಖಕ್ಕೆ ಮುಸುಕು ಹಾಕಿ ಎಳೆದುಕೊಂಡು ಹೋದರು.
ಹಾಮಾನನಿಗಾದ ಗಲ್ಲು ಶಿಕ್ಷೆ
ಆಗ ಅರಸನ ಸೇವೆಮಾಡುತ್ತಿದ್ದ ಕಂಚುಕಿಗಳಲ್ಲಿ ಒಬ್ಬನಾದ ಹರ್ಬೋನನು, “ಅರಸನ ಪ್ರಾಣರಕ್ಷಣೆಗಾಗಿ ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಇವನು ಐವತ್ತು ಮೊಳ ಎತ್ತರವಾದ ಗಲ್ಲು ಕಂಬವನ್ನು ಸಿದ್ಧಮಾಡಿಸಿದ್ದಾನೆ” ಎಂದನು. ಅದಕ್ಕೆ ಅರಸನು, “ಹಾಗಾದರೆ ಹಾಮಾನನ್ನು ಅದಕ್ಕೇ ನೇತುಹಾಕಿರಿ” ಎಂದು ಆಜ್ಞಾಪಿಸಿದನು. 10 ಹಾಮಾನನನ್ನು ಮೊರ್ದೆಕೈಗಾಗಿ ಸಿದ್ಧಮಾಡಿಸಿದ್ದ ಗಲ್ಲುಗಂಬಕ್ಕೆ ಏರಿಸಿದರು. ಹೀಗೆ ಅರಸನ ಕೋಪವೂ ಶಮನವಾಯಿತು.

*7:4 7:4 ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು ಅರಸನಿಗೆ ಉಂಟಾದ ನಷ್ಟವನ್ನು ಶತ್ರುವು ಸರಿಪಡಿಸಿಕೊಡಲಾರನು.