6
ಇಸ್ರಾಯೇಲಿನ ದೌರ್ಭಾಗ್ಯ
1 ಅಯ್ಯೋ! ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ,
ಪ್ರಮುಖ ಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲರ ನ್ಯಾಯವಿಚಾರಕರಾಗಿ,
ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ,
ಗತಿಯನ್ನು ಏನೆಂದು ಹೇಳಲಿ!
2 ನಿಮ್ಮ ಪ್ರಮುಖರು, “ಕಲ್ನೆಗೆ ಹೋಗಿ ನೋಡಲಿ;
ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ತೆರಳಿರಿ;
ಆ ಮೇಲೆ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ.
ಅವು ಈ ರಾಜ್ಯಗಳಿಗಿಂತ ಶ್ರೇಷ್ಠವೋ?
ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಗಳಿಗಿಂತ ದೊಡ್ಡದೋ?”
3 ಆಹಾ! ಆ ಪ್ರಮುಖರು ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತಾರೆ
ಮತ್ತು ಅನ್ಯಾಯದ ಪೀಠಗಳನ್ನು ಹತ್ತಿರಕ್ಕೆ ತಂದುಕೊಳ್ಳುತ್ತಾರೆ.
4 ದಂತದ ಮಂಚಗಳ ಮೇಲೆ ಮಲಗುತ್ತಾರೆ
ಮತ್ತು ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುತ್ತಾರೆ.
ಹಿಂಡಿನ ಕುರಿಮರಿಗಳನ್ನು,
ಕೊಟ್ಟಿಗೆಯ ಕರುಗಳನ್ನು ತಿನ್ನುತ್ತಾರೆ.
5 ವೀಣೆಯ ಮೇಲೆ ಮನಸ್ಸು ಬಂದಂತೆ ಹಾಡುತ್ತಾರೆ;
ದಾವೀದನ ಹಾಗೆ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ.
6 ದ್ರಾಕ್ಷಾರಸವನ್ನು ಬೋಗುಣಿಯಲ್ಲಿ ಕುಡಿಯುತ್ತಾರೆ
ಮತ್ತು ಉತ್ತಮ ಅಭಿಷೇಕ ತೈಲಗಳನ್ನು ಹಚ್ಚಿಕೊಳ್ಳುತ್ತಾರೆ,
ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡುವುದಿಲ್ಲ.
7 ಆದುದರಿಂದ ಸೆರೆಗೆ ಒಯ್ಯುವವರ ಮುಂದುಗಡೆಯೇ,
ಅವರು ಸೆರೆಗೆ ಹೋಗುವರು,
ಮತ್ತು ಭೋಗಮಾಡುವವರ ಹರ್ಷಧ್ವನಿಯು ನಿಂತುಹೋಗುವುದು.
ಆಹಂಕಾರಿಗಳಾದ ಇಸ್ರಾಯೇಲರನ್ನು ದ್ವೇಷಿಸುತ್ತಾನೆ
8 ಸೇನಾಧೀಶ್ವರ ದೇವರಾದ ಯೆಹೋವನ ನುಡಿಯನ್ನು ಕೇಳಿರಿ
ಕರ್ತನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು ಹೀಗೆಂದಿದ್ದಾನೆ,
“ನಾನು ಯಾಕೋಬಿನ ಅಟ್ಟಹಾಸಕ್ಕೆ ಅಸಹ್ಯಪಟ್ಟು;
ಅದರ ಕೋಟೆಗಳನ್ನು ಹಗೆಮಾಡುತ್ತೇನೆ.
ಆದುದರಿಂದ ನಾನು ರಾಜಧಾನಿಯನ್ನೂ,
ಅದರ ಸಕಲ ಸಮೃದ್ಧಿಯನ್ನೂ ಆಪತ್ತಿಗೆ ಗುರಿಮಾಡುವೆನು”
9 ಒಂದು ಮನೆಯಲ್ಲಿ ಹತ್ತು ಜನ ಉಳಿದರೂ ಅವರೆಲ್ಲರೂ ಸಾಯುವರು. 10 ಶವವನ್ನು ಸುಡಲು ಬಂದ ಸಂಬಂಧಿಕರು, ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋದಾಗ, “ನಿಮ್ಮ ಹತ್ತಿರ ಇನ್ನೂ ಯಾರಾದರೂ ಇದ್ದಾರೋ?” ಎಂದು ಮನೆಯಲ್ಲಿರುವವರನ್ನು ಕೇಳುವಾಗ ಅವನು, “ಇಲ್ಲ” ಎನ್ನುವನು. ಆಗ ಸಂಬಂಧಿಕನು, “ಸುಮ್ಮನಿರು, ನಾವು ಯೆಹೋವನ ಹೆಸರನ್ನು ನೆನಪುಮಾಡಿಕೊಳ್ಳಬಾರದು.”
11 ಇಗೋ, ನೋಡಿರಿ, ಯೆಹೋವನು ಆಜ್ಞಾಪಿಸಲು,
ದೊಡ್ಡ ಮನೆಯು ಕೆಡವಲ್ಪಟ್ಟು ಚೂರುಚೂರಾಯಿತು,
ಚಿಕ್ಕ ಮನೆಯೂ ಮುರಿದುಹೋಗುವುದು.
12 ಕುದುರೆಗಳು ಬಂಡೆಯ ಮೇಲೆ ಓಡಾಡುವುವೋ?
ಅದನ್ನು ಎತ್ತುಗಳಿಂದ ಉಳುವರೋ?
ಆದರೆ ನೀವು ನ್ಯಾಯವನ್ನು ವಿಷವನ್ನಾಗಿ ಮಾಡಿ,
ಧರ್ಮದ ಸುಫಲವನ್ನು ಕಹಿಯಾಗಿಸಿದಿರಿ.
13 ನೀವು ಲೋ ದೆಬಾರ್ ಪಟ್ಟಣದಲ್ಲಿ* 6:13 ಲೋ ದೆಬಾರ್ ಪಟ್ಟಣದಲ್ಲಿ ಶೂನ್ಯವಾದದರಲ್ಲಿಯೇ. ಉಲ್ಲಾಸಪಡುವವರೇ,
ಸ್ವಬಲದಿಂದ ಕರ್ನಾಯಿಮ್ † 6:13 ಕರ್ನಾಯಿಮ್ ಸ್ವಬಲ.ಪಟ್ಟಣವನ್ನು ಪಡೆದುಕೊಂಡಿಲ್ಲವೇ ಎಂದುಕೊಳ್ಳುವವರೇ.
14 ಸೇನಾಧೀಶ್ವರ ದೇವರಾದ ಯೆಹೋವನು ಇಂತೆನ್ನುತ್ತಾನೆ,
“ಇಸ್ರಾಯೇಲರ ವಂಶದವರೇ, ಇಗೋ, ನಾನು ನಿಮಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು;
ಅವರು ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಹೊಳೆಯ ತನಕ,
ನಿಮ್ಮನ್ನು ಹಿಂಸಿಸುವರು.”