21
ಪೌಲನು ಯೆರೂಸಲೇಮಿಗೆ ಮಾಡಿದ ಪ್ರಯಾಣ
ನಾವು ಅವರನ್ನು ಬಿಟ್ಟು ಹಡಗನ್ನು ಹತ್ತಿದ ಮೇಲೆ ನೇರವಾಗಿ ಕೋಸ್‍ ದ್ವೀಪಕ್ಕೆ ಬಂದು ಸೇರಿದೆವು. ಮರುದಿನ ರೋದ ದ್ವೀಪಕ್ಕೆ ಹೋಗಿ ಅಲ್ಲಿಂದ ಪತರ ಪಟ್ಟಣಕ್ಕೆ ಬಂದೆವು. ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು, ಅದರಲ್ಲಿ ಪ್ರಯಾಣವನ್ನು ಮುಂದುವರೆಸಿದೆವು. ಮುಂದೆ ಕುಪ್ರದ್ವೀಪವನ್ನು ಕಂಡು ಎಡಗಡೆಗೆ ಬಿಟ್ಟು ಸಿರಿಯದೇಶದ ಕಡೆಗೆ ಸಾಗಿ ತೂರ್ ಪಟ್ಟಣಕ್ಕೆ ಬಂದು ಇಳಿದೆವು. ಏಕೆಂದರೆ, ಅಲ್ಲಿ ಸರಕನ್ನು ಇಳಿಸಬೇಕಾಗಿತ್ತು. ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಏಳು ದಿನ ಉಳಿದುಕೊಂಡೆವು. ಅವರು ದೇವರಾತ್ಮನ ಪ್ರೇರಣೆಯಿಂದ ಪೌಲನಿಗೆ; ನೀನು ಯೆರೂಸಲೇಮಿಗೆ ಕಾಲಿಡಬೇಡವೆಂದು ಹೇಳಿದರು. ಆ ದಿನಗಳನ್ನು ಮುಗಿಸಿಕೊಂಡು ನಾವು ಹೊರಡುವಾಗ ಅವರೆಲ್ಲರೂ ತಮ್ಮ ಮಡದಿ ಮಕ್ಕಳು ಸಹಿತವಾಗಿ ಬಂದು ನಮ್ಮನ್ನು ಊರ ಹೊರಕ್ಕೆ ಬೀಳ್ಕೊಟ್ಟರು. ನಾವು ಸಮುದ್ರತೀರದಲ್ಲಿ ಮೊಣಕಾಲೂರಿಕೊಂಡು ಪ್ರಾರ್ಥನೆ ಮಾಡಿ, ಒಬ್ಬರಿಗೊಬ್ಬರು ವಂದನೆಮಾಡಿ ಹಡಗನ್ನು ಹತ್ತಿದೆವು; ಅವರು ಹಿಂತಿರುಗಿ ತಮ್ಮತಮ್ಮ ಮನೆಗಳಿಗೆ ಹೋದರು.
ನಾವು ತೂರ್ ಪಟ್ಟಣದಿಂದ ಹೊರಟು ಪ್ತೊಲೆಮಾಯಕ್ಕೆ ಸೇರಿ ಸಮುದ್ರಪ್ರಯಾಣವನ್ನು ಮುಗಿಸಿದೆವು. ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿನ ಇದ್ದು, ಮರುದಿನ ಹೊರಟು ಕೈಸರೈಯಕ್ಕೆ ಬಂದು, ಸುವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನ ಬಳಿಯಲ್ಲಿಯೇ ಇಳುಕೊಂಡೆವು. ಅವನು ಆ ಏಳು ಮಂದಿಯಲ್ಲಿ ಒಬ್ಬನಾಗಿದ್ದನು. ಅವನಿಗೆ ಕನ್ಯೆಯರಾದ ನಾಲ್ಕುಮಂದಿ ಹೆಣ್ಣು ಮಕ್ಕಳಿದ್ದರು; ಅವರು ಪ್ರವಾದಿಸುವವರಾಗಿದ್ದರು. 10 ನಾವು ಅಲ್ಲಿ ಅನೇಕ ದಿನಗಳು ಇದ್ದ ನಂತರ, ಅಗಬನೆಂಬ ಒಬ್ಬ ಪ್ರವಾದಿಯು ಯೂದಾಯದಿಂದ ನಮ್ಮ ಬಳಿಗೆ ಬಂದು, ಪೌಲನ ನಡುಕಟ್ಟನ್ನು ತೆಗೆದು, 11 ತನ್ನ ಕೈಕಾಲುಗಳನ್ನು ಕಟ್ಟಿಕೊಂಡು; “ಈ ನಡುಕಟ್ಟು ಯಾವನದೋ ಅವನನ್ನು ‘ಯೆಹೂದ್ಯರು ಇದೇ ರೀತಿಯಾಗಿ ಯೆರೂಸಲೇಮಿನಲ್ಲಿ ಕಟ್ಟಿ ಅನ್ಯಜನರ ಕೈಗೆ ಒಪ್ಪಿಸಿ ಕೊಡುವರು, ಎಂದು ಪವಿತ್ರಾತ್ಮನು ಹೇಳುತ್ತಾನೆಂಬುದಾಗಿ’ ” ಹೇಳಿದನು. 12 ಆ ಮಾತನ್ನು ಕೇಳಿದಾಗ ನಾವು, ಆ ಸ್ಥಳದವರೂ; ನೀನು ಯೆರೂಸಲೇಮಿಗೆ ಹೋಗಲೇಬಾರದೆಂದು ಪೌಲನನ್ನು ಬೇಡಿಕೊಂಡೆವು. 13 ಅದಕ್ಕೆ ಪೌಲನು; “ನೀವು ದುಃಖಿಸುತ್ತಾ ಏಕೆ ನನ್ನ ಎದೆಯೊಡೆಯುವಂತೆ ಮಾಡುತ್ತೀರಿ? ನಾನು ಕರ್ತನಾದ ಯೇಸುವಿನ ಹೆಸರಿನ ನಿಮಿತ್ತವಾಗಿ ಯೆರೂಸಲೇಮಿನಲ್ಲಿ ಬೇಡೀಹಾಕಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಸಿದ್ಧವಾಗಿದ್ದೇನೆ” ಅಂದನು. 14 ಅವನು ಒಪ್ಪದೆ ಇದ್ದುದರಿಂದ; “ಕರ್ತನ ಚಿತ್ತದಂತೆ ಆಗಲಿ” ಎಂದು ಹೇಳಿ ನಾವು ಸುಮ್ಮನಾದೆವು.
15 ಆ ದಿನಗಳಾದ ಮೇಲೆ ನಾವು ಚೇತರಿಸಿಕೊಂಡು ಯೆರೂಸಲೇಮಿಗೆ ಹೊರಟೆವು. 16 ಕೈಸರೈಯದಿಂದ ಕೆಲವು ಶಿಷ್ಯರು ನಮ್ಮ ಜೊತೆಯಲ್ಲಿ ಬಂದು ನಾವು ಇಳುಕೊಳ್ಳಬೇಕಾಗಿದ್ದವನ ಮನೆಯ ತನಕ ನಮ್ಮನ್ನು ಕರೆದುಕೊಂಡು ಹೋದರು. ಆ ಮನೆಯವನು ಪ್ರಥಮ ಶಿಷ್ಯರಲ್ಲಿ ಒಬ್ಬನಾದ ಕುಪ್ರದೇಶದ ಮ್ನಾಸೋನನೆಂಬವನು.
ಪೌಲನು ಯಾಕೋಬನನ್ನು ಭೇಟಿಯಾದದ್ದು
17 ನಾವು ಯೆರೂಸಲೇಮಿಗೆ ಬಂದಾಗ ಸಹೋದರರು ನಮ್ಮನ್ನು ಸಂತೋಷದಿಂದ ಬರಮಾಡಿಕೊಂಡರು. 18 ಮರುದಿನ ಪೌಲನು ನಮ್ಮನ್ನು ಕರೆದುಕೊಂಡು ಯಾಕೋಬನ ಬಳಿಗೆ ಹೋದನು. ಸಭೆಯ ಹಿರಿಯರೆಲ್ಲರು ಸಹ ಬಂದರು. 19 ಪೌಲನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ ಕಾರ್ಯಗಳನ್ನು ಒಂದೊಂದಾಗಿ ವಿವರಿಸಿದನು.
20 ಅವರು ಅದನ್ನು ಕೇಳಿ ದೇವರನ್ನು ಕೊಂಡಾಡಿದರು. ಆಗ ಅವರು ಅವನಿಗೆ; “ಸಹೋದರನೇ, ಯೆಹೂದ್ಯರಲ್ಲಿ ಯೇಸುವನ್ನು ನಂಬಿರುವವರು ಸಾವಿರಾರು ಮಂದಿ ಇದ್ದಾರೆಂಬುದನ್ನು ನೋಡುತ್ತಿದ್ದೀಯಲ್ಲಾ. ಅವರೆಲ್ಲರೂ ಧರ್ಮಶಾಸ್ತ್ರದ ಅಭಿಮಾನಿಗಳಾಗಿದ್ದಾರೆ. 21 ನೀನು ಅನ್ಯಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರೆಲ್ಲರಿಗೆ; ‘ನಿಮ್ಮ ಮಕ್ಕಳಿಗೆ ಸುನ್ನತಿಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಿ ನಡೆಯಬೇಡಿರಿ ಎಂದು ಹೇಳಿ, ಮೋಶೆಯ ಧರ್ಮವನ್ನು ತ್ಯಜಿಸಬೇಕೆಂಬುದಾಗಿ ಬೋಧಿಸುತ್ತಿರುವೆ’ ಎಂದು ನಿನ್ನ ಕುರಿತಾಗಿ ಹೇಳಿದ್ದಾರೆ. 22 ನೀನು ಬಂದಿರುವುದನ್ನು ಅವರು ಹೇಗೂ ತಿಳಿದುಕೊಳ್ಳುವರು. ಹೀಗಿರುವಲ್ಲಿ ನಾವು ಏನು ಮಾಡಬೇಕು? 23 ಅದಕಾರಣ ನಾವು ನಿನಗೆ ಹೇಳುವ ಕೆಲಸವನ್ನು ಮಾಡು. ನಮ್ಮಲ್ಲಿ ಶಪಥಮಾಡಿದ ನಾಲ್ಕುಮಂದಿ ಇದ್ದಾರೆ. 24 ನೀನು ಅವರನ್ನು ಕರೆದುಕೊಂಡು ಹೋಗಿ, ಅವರೊಡನೆ ನಿನ್ನನ್ನು ಶುದ್ಧಿಮಾಡಿಕೊಂಡು ಅವರು ತಮ್ಮ ಕ್ಷೌರದ ಶಪಥವನ್ನು ತೀರಿಸಿಕೊಳ್ಳುವುದಕ್ಕಾಗಿ, ಆಗುವ ವೆಚ್ಚವನ್ನು ನೀನು ಕೊಡು. ಹೀಗೆ ಮಾಡಿದರೆ ಎಲ್ಲರೂ ನಿನ್ನ ವಿಷಯವಾಗಿ ತಾವು ಕೇಳಿದ ಸುದ್ದಿ ನಿಜವಲ್ಲವೆಂತಲೂ, ನೀನು ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತೀ, ಎಂತಲೂ ತಿಳಿದುಕೊಳ್ಳುವರು. 25 ಅನ್ಯಜನರಲ್ಲಿ ಯೇಸುವನ್ನು ನಂಬಿರುವವರ ಕುರಿತಾದರೋ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕತ್ತು ಹಿಸುಕಿ ಕೊಂದದ್ದನ್ನೂ ಅನೈತಿಕತೆಯನ್ನೂ ಬಿಟ್ಟು ದೂರವಾಗಿರಬೇಕೆಂಬುದಾಗಿ ನಾವು ತೀರ್ಮಾನಿಸಿದ ನಿಯಮಗಳನ್ನು ಬರೆದು ಕಳುಹಿಸಿದೆವಲ್ಲಾ” ಎಂದು ಹೇಳಿದರು.
26 ಆಗ ಪೌಲನು ಮರುದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದ ವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ದೇವಾಲಯದೊಳಗೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು.
27 ಆ ಏಳು ದಿನಗಳು ಮುಗಿಯುತ್ತಿದ್ದಂತೆ ಅಸ್ಯಸೀಮೆಯಿಂದ ಬಂದಿದ್ದ ಯೆಹೂದ್ಯರು ಪೌಲನನ್ನು ದೇವಾಲಯದಲ್ಲಿ ಕಂಡು ಗುಂಪುಕೂಡಿದ ಜನರೆಲ್ಲರನ್ನು ಚದುರಿಸಿ ಅವನನ್ನು ಹಿಡಿದು; 28 “ಇಸ್ರಾಯೇಲ್‍ ಜನರೇ, ನಮಗೆ ಸಹಾಯಮಾಡಿರಿ, ನಮ್ಮ ಜನರಿಗೂ, ಧರ್ಮಶಾಸ್ತ್ರಕ್ಕೂ, ಈ ಆಲಯಕ್ಕೂ ವಿರುದ್ಧವಾಗಿ ಎಲ್ಲೆಲ್ಲಿಯೂ, ಎಲ್ಲರಿಗೂ ಬೋಧನೆ ಹೇಳುವ ಆ ಮನುಷ್ಯನು ಇವನೇ. ಇದಲ್ಲದೆ ಇವನು ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆಮಾಡಿದ್ದಾನೆ” ಎಂದು ಕೂಗಿದರು. 29 ಮೊದಲು ಅವರು ಎಫೆಸದ ತ್ರೊಫಿಮನನ್ನು ಅವನ ಸಂಗಡ ಪಟ್ಟಣದಲ್ಲಿ ನೋಡಿದ್ದರಿಂದ ಅವನನ್ನು ಪೌಲನು ದೇವಾಲಯದೊಳಗೆ ಕರೆದುಕೊಂಡು ಬಂದನೆಂದು ಭಾವಿಸಿದರು.
30 ಆಗ ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು, ಜನರು ಎಲ್ಲಾ ಕಡೆಯಿಂದಲೂ ಓಡಿಬಂದು ಸೇರಿಕೊಂಡರು. ಪೌಲನನ್ನು ಹಿಡಿದು, ದೇವಾಲಯದ ಹೊರಗಡೆಗೆ ಎಳೆದುಕೊಂಡು ಬಂದ ಕೂಡಲೇ ಬಾಗಿಲುಗಳನ್ನು ಮುಚ್ಚಿದರು. 31 ಅವರು ಅವನನ್ನು ಕೊಲ್ಲುವುದಕ್ಕೆ ಯತ್ನಿಸುತ್ತಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಿಬಿಲಿಯಾಯಿತೆಂದು ಪಟಾಲಮಿನ ಸಹಸ್ರಾಧಿಪತಿಗೆ ವರದಿ ಬಂದಿತು. 32 ಅವನು ತಕ್ಷಣವೇ ಸಿಪಾಯಿಗಳನ್ನೂ, ಶತಾಧಿಪತಿಗಳನ್ನೂ ತೆಗೆದುಕೊಂಡು ಜನಸಮೂಹದ ಹತ್ತಿರ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ, ಸಿಪಾಯಿಗಳನ್ನೂ ನೋಡಿ ಪೌಲನನ್ನು ಹೊಡೆಯುವುದನ್ನು ಬಿಟ್ಟರು.
33 ಸಹಸ್ರಾಧಿಪತಿಯು ಹತ್ತಿರಕ್ಕೆ ಬಂದು ಅವನನ್ನು ಹಿಡಿದು, ಅವನಿಗೆ ಎರಡು ಬೇಡಿಯನ್ನು ಹಾಕಬೇಕೆಂದು ಅಪ್ಪಣೆಕೊಟ್ಟು; 34 ಇವನಾರು? ಏನು ಮಾಡಿದ್ದಾನೆ? ಎಂದು ಕೇಳಲು ಕೆಲವರು ಹೀಗೆ, ಕೆಲವರು ಹಾಗೆ ಕೂಗುತ್ತಿರಲು ಗದ್ದಲದ ನಿಮಿತ್ತ ನಿಜ ಸ್ಥಿತಿಯನ್ನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು. 35 ಪೌಲನು ಮೆಟ್ಟಿಲುಗಳ ಮೇಲೆ ಬಂದಾಗ ಜನರ ನೂಕಾಟದ ನಿಮಿತ್ತ ಸಿಪಾಯಿಗಳು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು. 36 ಏಕೆಂದರೆ, ಗುಂಪಾಗಿ ಕೂಡಿದ ಜನರು ಹಿಂದಿನಿಂದ ಬಂದು; “ಅವನನ್ನು ಕೊಲ್ಲಿರಿ” ಎಂದು ಕೂಗುತ್ತಾ ಬೆನ್ನಟ್ಟಿ ಬರುತ್ತಿದ್ದರು.
37 ಪೌಲನನ್ನು ಕೋಟೆಯೊಳಗೆ ಕರೆದುಕೊಂಡು ಹೋಗುವುದರೊಳಗಾಗಿ ಅವನು ಆ ಸಹಸ್ರಾಧಿಪತಿಗೆ, “ನಿನಗೆ ಒಂದು ಮಾತು ಹೇಳುವುದಕ್ಕೆ ನನಗೆ ಅಪ್ಪಣೆ ಇದೆಯೋ”? ಎಂದು ಕೇಳಲು ಅವನು; “ಗ್ರೀಕ್ ಭಾಷೆ ನಿನಗೆ ಬರುತ್ತದೋ? 38 ಕೆಲವು ದಿನಗಳ ಹಿಂದೆ ದಂಗೆ ಎಬ್ಬಿಸಿ ಆ ನಾಲ್ಕು ಸಾವಿರ ಮಂದಿ ಘಾತಕರನ್ನು ಅಡವಿಗೆ ಕರೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೇ” ಎಂದು ಕೇಳಿದನು.
39 ಅದಕ್ಕೆ ಪೌಲನು; ನಾನು ಯೆಹೂದ್ಯನು, ತಾರ್ಸದವನು, ಕಿಲಿಕ್ಯಸೀಮೆಯ ಪ್ರಖ್ಯಾತವಾದ ಪಟ್ಟಣದವನು. ಈ ಜನರಿಗೆ ಕೆಲವು ಮಾತುಗಳನ್ನು ಹೇಳುವುದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ ಅಂದನು.
40 ಸಹಸ್ರಾಧಿಪತಿಯು ಅಪ್ಪಣೆ ಕೊಡಲು, ಪೌಲನು ಮೆಟ್ಟಿಲುಗಳ ಮೇಲೆ ನಿಂತುಕೊಂಡು, ಜನರಿಗೆ ಕೈಸನ್ನೆ ಮಾಡಿದನು. ಗದ್ದಲವು ಬಹಳ ಮಟ್ಟಿಗೆ ಶಾಂತವಾದ ಮೇಲೆ ಅವನು ಇಬ್ರಿಯ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದನು.,