10
ಪೇತ್ರನು ಮತ್ತು ಕೊರ್ನೇಲ್ಯನು
1 ಕೈಸರೈಯ ಪಟ್ಟಣದಲ್ಲಿ ಇತಾಲ್ಯ ಸೈನ್ಯದ ಶತಾಧಿಪತಿಯಾದ ಕೊರ್ನೆಲ್ಯನೆಂಬ ಒಬ್ಬ ಮನುಷ್ಯನಿದ್ದನು. 2 ಅವನು ದೈವಭಕ್ತನೂ, ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳುವವನು ಆಗಿದ್ದು, ಜನರಿಗೆ ಬಹಳವಾಗಿ ದಾನಧರ್ಮಮಾಡುತ್ತಾ, ದೇವರಿಗೆ ನಿತ್ಯವೂ ಪ್ರಾರ್ಥನೆಮಾಡುತ್ತಾ ಇದ್ದನು. 3 ಒಂದು ದಿನ ಮಧ್ಯಾಹ್ನ ಸುಮಾರು ಮೂರು ಘಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು; “ಕೊರ್ನೆಲ್ಯನೇ” ಎಂದು ಕರೆಯುವುದನ್ನು ಅವನು ಪ್ರತ್ಯಕ್ಷವಾಗಿ ಕಂಡನು. 4 ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ; “ಕರ್ತನೇ, ಇದೇನು?” ಎಂದು ಕೇಳಲು, ಆ ದೂತನು ಅವನಿಗೆ; “ನಿನ್ನ ಪ್ರಾರ್ಥನೆಗಳೂ, ನಿನ್ನ ದಾನಧರ್ಮಗಳೂ ದೇವರ ಸನ್ನಿಧಿಗೆ ಜ್ಞಾಪರ್ಥಕವಾಗಿ ಬಂದು ತಲುಪಿದೆ. 5 ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ, ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು. 6 ಅವನು ಚಮ್ಮಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರತೀರದ ಬಳಿಯಲ್ಲಿ ಇದೆ” ಎಂದು ಹೇಳಿದನು. 7 ಕೊರ್ನೇಲ್ಯನು ತನ್ನ ಸಂಗಡ ಮಾತನಾಡಿದ ದೇವದೂತನು ಹೊರಟುಹೋದ ಮೇಲೆ, ತನ್ನ ಮನೆಯಲ್ಲಿದ್ದ ಸೇವಕರಲ್ಲಿ ಇಬ್ಬರನ್ನೂ ಮತ್ತು ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೈವಭಕ್ತನನ್ನೂ ಕರೆದು, 8 ಅವರಿಗೆ ಈ ಸಂಗತಿಗಳನ್ನೆಲ್ಲಾ ವಿವರವಾಗಿ ಹೇಳಿ, ಅವರನ್ನು ಯೊಪ್ಪ ಎಂಬ ಪಟ್ಟಣಕ್ಕೆ ಕಳುಹಿಸಿದನು.
ಪೇತ್ರನಿಗಾದ ದರ್ಶನ
9 ಮರುದಿನ ಅವರು ಪ್ರಯಾಣಮಾಡಿ ಆ ಪಟ್ಟಣದ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಪ್ರಾರ್ಥನೆಮಾಡುವುದಕ್ಕಾಗಿ ಮಹಡಿಯನ್ನು ಹತ್ತಿದನು. 10 ಅವನಿಗೆ ಬಹಳ ಹಸಿವಾಗಿ ಊಟಮಾಡ ಬಯಸಿದನು. ಅವರು ಊಟಕ್ಕೆ ಸಿದ್ಧಮಾಡುತ್ತಿರುವಷ್ಟರಲ್ಲಿ, 11 ಅವನು ಧ್ಯಾನಪರವಶನಾಗಿ ಆಕಾಶವು ತೆರೆದಿರುವುದನ್ನೂ, ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವುದನ್ನೂ ಕಂಡನು. 12 ಅದರೊಳಗೆ ಸಕಲ ವಿಧವಾದ ಪಶುಗಳೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳೂ ಇದ್ದವು. 13 ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ಅವನಿಗೆ ಒಂದು ವಾಣಿ ಕೇಳಿಸಿತು. 14 ಅದಕ್ಕೆ ಪೇತ್ರನು; “ಬೇಡವೇ ಬೇಡ ಕರ್ತನೇ, ನಾನು ಎಂದೂ ಹೊಲೆ ಪದಾರ್ಥವನ್ನಾಗಲಿ, ಅಶುದ್ಧವಾದವುಗಳನ್ನಾಗಲಿ ತಿಂದವನಲ್ಲ” ಅಂದನು. 15 ಅದಕ್ಕೆ; “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದೆಂದು” ಪುನಃ ಎರಡನೆಯ ಸಾರಿ ಅವನಿಗೆ ವಾಣಿ ಕೇಳಿಸಿತು. 16 ಹೀಗೆ ಮೂರು ಸಾರಿ ಆಯಿತು. ಆದ ಮೇಲೆ ಆ ವಸ್ತುವು ಆಕಾಶದೊಳಗೆ ಸೇರಿಕೊಂಡಿತು.
17 ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ, ಆಗೋ, ಕೊರ್ನೆಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವುದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು; 18 ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು. 19 ಪೇತ್ರನು ಆ ದರ್ಶನದ ಕುರಿತಾಗಿ ಯೋಚನೆ ಮಾಡುತ್ತಿರಲು ದೇವರಾತ್ಮನು ಅವನಿಗೆ; “ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ; 20 ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು; ನಾನೇ ಅವರನ್ನು ಕಳುಹಿಸಿದ್ದೇನೆ” ಎಂದು ಹೇಳಿದನು. 21 ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಬಂದು; “ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು?” ಎಂದು ಕೇಳಲು, 22 ಅವರು; “ಕೊರ್ನೆಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ, ದೇವರಿಗೆ ಭಯಪಡುವವನೂ, ಯೆಹೂದ್ಯ ಜನರೆಲ್ಲರಿಂದ ಒಳ್ಳೆಯ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನಿನ್ನಿಂದ ಸುವಾರ್ತೆಯನ್ನು ಕೇಳಬೇಕೆಂದು ಪರಿಶುದ್ಧ ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದ್ದಾನೆ” ಎಂದು ಹೇಳಿದರು. 23 ಪೇತ್ರನು ಇದನ್ನು ಕೇಳಿ ಅವರನ್ನು ಒಳಕ್ಕೆ ಕರೆದು ಉಪಚರಿಸಿದನು. ಮರುದಿನ ಅವನು ಎದ್ದು ಅವರ ಜೊತೆಯಲ್ಲಿ ಹೊರಟನು; ಯೊಪ್ಪ ಪಟ್ಟಣದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು.
ಕೊರ್ನೇಲ್ಯನ ಮನೆಯಲ್ಲಿ ಪೇತ್ರನು
24 ಮರುದಿನ ಅವನು ಕೈಸರೈಯಕ್ಕೆ ಬಂದು ಸೇರಿದನು. ಕೊರ್ನೆಲ್ಯನು ತನ್ನ ಬಂಧುಬಳಗದವರನ್ನೂ ಮತ್ತು ಅಪ್ತಮಿತ್ರರನ್ನೂ ಕರೆಯಿಸಿ ಪೇತ್ರನಿಗಾಗಿ ಎದುರುನೋಡುತ್ತಿದ್ದನು. 25 ಪೇತ್ರನು ಬಂದಾಗ ಕೊರ್ನೆಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು. 26 ಆದರೆ ಪೇತ್ರನು; “ಏಳು, ನಾನೂ ಸಹಾ ಮನುಷ್ಯನೇ” ಎಂದು ಹೇಳಿ, ಅವನನ್ನು ಎತ್ತಿ, 27 ಅವನ ಸಂಗಡ ಸಂಭಾಷಣೆಮಾಡುತ್ತಾ ಮನೆಯೊಳಕ್ಕೆ ಬಂದನು. 28 ಅಲ್ಲಿ ಬಹು ಜನರು ಸೇರಿ ಬಂದಿರುವುದನ್ನು ಕಂಡು ಅವರಿಗೆ; “ಯೆಹೂದ್ಯರು, ಅನ್ಯ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು, ಅವರೊಂದಿಗೆ ವ್ಯವಹರಿಸುವುದು ಯೆಹೂದ್ಯರ ಸಂಪ್ರದಾಯಕ್ಕೆ ನಿಷಿದ್ಧವಾಗಿದೆ ಎಂಬುದು ನಿಮಗೆ ತಿಳಿದಿದೆ. ನನಗಂತೂ ಯಾವ ಮನುಷ್ಯನನ್ನೂ ಹೊಲೆಯಾದವನು, ಇಲ್ಲವೆ ಅಶುದ್ಧನು ಎಂದು ಅನ್ನಬಾರದೆಂದು ದೇವರು ತೋರಿಸಿಕೊಟ್ಟಿದ್ದಾನೆ. 29 ಆದಕಾರಣ ನೀವು ನನ್ನನ್ನು ಕರೆಕಳುಹಿಸಿದಾಗ ನಾನು ಯಾವ ಎದುರುಮಾತನ್ನೂ ಆಡದೆ ಬಂದೆನು. ಈಗ ನೀವು ನನ್ನನ್ನು ಕರೆಯಿಸಿದ ಉದ್ದೇಶವೇನು ಎಂದು ನನಗೆ ತಿಳಿಸಬೇಕು” ಎಂದು ಕೇಳಿದನು.
30 ಅದಕ್ಕೆ ಕೊರ್ನೇಲ್ಯನು; “ನಾನು ನಾಲ್ಕು ದಿನಗಳ ಹಿಂದೆ ಇದೇ ಹೊತ್ತಿನಲ್ಲಿ ಮೂರನೇ ಗಳಿಗೆಯ ದೇವರ ಪ್ರಾರ್ಥನೆಯನ್ನು ನನ್ನ ಮನೆಯಲ್ಲಿ ಮಾಡುತ್ತಿದ್ದಾಗ ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತುಕೊಂಡು; 31 ಕೊರ್ನೆಲ್ಯನೇ ‘ನಿನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನೆ, ನಿನ್ನ ದಾನಧರ್ಮಗಳು ದೇವರ ಸನ್ನಿಧಾನದಲ್ಲಿ ನೆನಪಿಗೆ ಬಂದವು. 32 ನೀನು ಯಾರನ್ನಾದರು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು, ಅವನು ಚಮ್ಮಾರನಾದ ಸೀಮೋನನ ಮನೆಯಲ್ಲಿ ಇಳುಕೊಂಡಿದ್ದಾನೆ; ಆ ಮನೆ ಸಮುದ್ರ ತೀರದ ಸಮೀಪವಿದೆ’ ಅಂದನು. 33 ನಾನು ತಡಮಾಡದೆ ನಿಮ್ಮ ಹತ್ತಿರ ಜನರನ್ನು ಕಳುಹಿಸಿದೆನು. ನೀವು ಬಂದದ್ದು ಒಳ್ಳೆಯದಾಯಿತು. ಹೀಗಿರುವುದರಿಂದ ಕರ್ತನು ನಿನಗೆ ಅಪ್ಪಣೆಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವುದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಸೇರಿಬಂದಿದ್ದೇವೆ” ಅಂದನು.
34 ಆಗ ಪೇತ್ರನು ಉಪದೇಶಮಾಡಲಾರಂಭಿಸಿ ಹೇಳಿದ್ದೇನಂದರೆ; “ನಿಜವಾಗಿಯೂ, ದೇವರು ಪಕ್ಷಪಾತಿಯಲ್ಲ, 35 ಯಾವ ಜನಾಂಗದವರೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ. 36 ಎಲ್ಲಾ ಜನರಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನದ ಶುಭಸಮಾಚಾರವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ಅನುಗ್ರಹಿಸಿದ ವಾಕ್ಯವು ನಿಮಗೇ ತಿಳಿದಿದೆ. 37 ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋಹಾನನು ಸಾರಿದ ತರುವಾಯ ಈ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ, ಯೂದಾಯದಲ್ಲೆಲ್ಲಾ ಪ್ರಬಲವಾಯಿತು. 38 ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ. 39 ಆತನು ಯೆಹೂದ್ಯರ ಸೀಮೆಯಲ್ಲಿಯೂ, ಯೆರೂಸಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. 40 ಆತನನ್ನು ಮರದ ಕಂಬಕ್ಕೆ ತೂಗುಹಾಕಿ ಕೊಂದರು. ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ, ಪ್ರತ್ಯಕ್ಷನಾಗುವಂತೆ ಮಾಡಿದನು. 41 ಆತನು ಎಲ್ಲರಿಗೂ ಪ್ರತ್ಯಕ್ಷನಾಗದೆ, ದೇವರು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾದ ನಮಗೆ ಪ್ರತ್ಯಕ್ಷನಾದನು. ಆತನು ಸತ್ತವರೊಳಗಿಂದ ಜೀವಿತನಾಗಿ ಎದ್ದು ಬಂದ ಮೇಲೆ ನಾವು ಆತನ ಸಂಗಡ ಊಟ ಮಾಡಿದೆವು. 42 ಆತನೇ ಜೀವವಿರುವವರಿಗೂ, ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬುದನ್ನು ಜನರಿಗೆ ಸಾರಿ, ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು. 43 ಆತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಆತನ ಹೆಸರಿನ ಮೂಲಕವಾಗಿ ಪಾಪ ಕ್ಷಮಾಪಣೆಯನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿ ಹೇಳಿದ್ದಾರೆ” ಅಂದನು.
44 ಪೇತ್ರನು, ಈ ವಾಕ್ಯಗಳನ್ನು ಇನ್ನೂ ಹೇಳುತ್ತಿರುವಾಗಲೇ, ಅವನ ವಾಕ್ಯಗಳನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮನು ಇಳಿದನು. 45 ಅವರು ನಾನಾ ಭಾಷೆಗಳನ್ನಾಡುತ್ತಾ, ದೇವರನ್ನು ಕೊಂಡಾಡುತ್ತಾ ಇರುವುದನ್ನು ಪೇತ್ರನ ಸಂಗಡ ಬಂದಿದ್ದ ಯೆಹೂದ್ಯರಾದ ವಿಶ್ವಾಸಿಗಳು ನೋಡಿ, 46 ಅನ್ಯಜನಗಳಿಗೂ ಪವಿತ್ರಾತ್ಮನ ದಾನವಾಯಿತಲ್ಲಾ ಎಂದು ಅತ್ಯಾಶ್ಚರ್ಯಪಟ್ಟರು. 47 ನಡೆದ ಸಂಗತಿಯನ್ನು ಪೇತ್ರನು ನೋಡಿ; “ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ದೀಕ್ಷಾಸ್ನಾನವಾಗದಂತೆ ಅಡ್ಡಿಪಡಿಸುವವರು ಯಾರು?” ಎಂದು ಹೇಳಿ ಅವರಿಗೆ, 48 ನೀವು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಅಪ್ಪಣೆಕೊಟ್ಟನು. ಆ ಮೇಲೆ ಅವರು ಅವನನ್ನು ಇನ್ನೂ ಕೆಲವು ದಿನ ಅವರೊಂದಿಗೆ ಇರಬೇಕೆಂದು ಬೇಡಿಕೊಂಡರು.