2
ಪವಿತ್ರಾತ್ಮನು ಬಂದದ್ದು
1 ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. 2 ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. 3 ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. 4 ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು.
5 ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು. 6 ಆ ಸಪ್ಪಳವಾದಾಗ ಆ ಜನರೆಲ್ಲರೂ ಗುಂಪು ಗುಂಪಾಗಿ ಕೂಡಿಬಂದು ಪ್ರತಿಯೊಬ್ಬರೂ ತಮ್ಮತಮ್ಮ ಭಾಷೆಯಲ್ಲೇ ಇವರು ಮಾತನಾಡುವುದನ್ನು ಕೇಳಿ ದಿಗ್ಭ್ರಮೆಗೊಂಡರು. 7 ಎಲ್ಲರೂ ವಿಸ್ಮಯದಿಂದ ಬೆರಗಾಗಿ, “ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ. 8 ಆದರೆ ನಾವು ಪ್ರತಿಯೊಬ್ಬರು ನಮ್ಮ ನಮ್ಮ ಮಾತೃಭಾಷೆಯಲ್ಲಿ ಇವರು ಮಾತನಾಡುವುದನ್ನು ಕೇಳುತ್ತಿದ್ದೇವಲ್ಲಾ, ಇದು ಹೇಗೆ? 9 ಪಾರ್ಥ್ಯರೂ, ಮೇದ್ಯರೂ, ಏಲಾಮ್ಯರೂ, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, 10 ಫ್ರುಗ್ಯ, ಪಂಫುಲ್ಯ, ಐಗುಪ್ತ ಮತ್ತು ಕುರೇನೆಯ ಮಗ್ಗುಲಲ್ಲಿರುವ ಲಿಬ್ಯ, ಈ ಸೀಮೆಗಳಲ್ಲಿ ವಾಸವಾಗಿರುವವರೂ, ರೋಮಾಪುರದಿಂದ ಬಂದಿರುವ ಯೆಹೂದ್ಯರೂ, ಯೆಹೂದ್ಯ ಮತಾವಲಂಬಿಗಳೂ, ಕ್ರೇತ್ಯರೂ, ಅರಬ್ಬೀದೇಶದವರೂ 11 ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವುದನ್ನು ಕೇಳುತ್ತಿದ್ದೇವಲ್ಲಾ” ಎಂದು ಅಂದುಕೊಂಡರು. 12 ಎಲ್ಲರೂ ಬೆರಗಾಗಿ ಕಳವಳಗೊಂಡು, “ಇದೇನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು?” 13 ಆದರೆ ಬೇರೆ ಕೆಲವರು, “ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು ಹಾಸ್ಯ” ಮಾಡಿದರು.
ಜನಸಮೂಹಕ್ಕೆ ಪೇತ್ರನ ಪ್ರಬೋಧನೆ
14 ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಬೋಧನೆಮಾಡಿದನು; “ಯೆಹೂದ್ಯರೇ, ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಜಾತಿ-ಜನಾಂಗದವರೇ, ಈ ಸಂಗತಿಯು ಏನೆಂದು ನೀವು ತಿಳಿದುಕೊಳ್ಳಲು ನನ್ನ ಮಾತಿಗೆ ಕಿವಿಗೊಡಿರಿ. 15 ನೀವು ಭಾವಿಸಿದಂತೆ ಇವರು ಮದ್ಯಪಾನಮಾಡಿ ಅಮಲೇರಿದವರಲ್ಲ, ಈಗ ಬೆಳಗ್ಗೆ ಒಂಭತ್ತು ಘಂಟೆಯಾಗಿದೆಯಷ್ಟೆ. 16 ಆದರೆ ಇದು ಪ್ರವಾದಿಯಾದ ಯೋವೇಲನ ಮೂಲಕವಾಗಿ ಹೇಳಿಸಿದ ಸಂಗತಿಯಾಗಿದೆ; ಅದೇನೆಂದರೆ,
17 “ಕಡೆ ದಿನಗಳಲ್ಲಿ ನಾನು ಎಲ್ಲಾ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು,
ಆಗ ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು;
ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು;
ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು;
18 ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ
ನನ್ನ ಆತ್ಮವನ್ನು ಸುರಿಸುವೆನು,
ಅವರೂ ಪ್ರವಾದಿಸುವರು.
19-20 ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ
ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ
ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು.
ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು.
ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
21 ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ” ಎಂಬುದೇ.
22 “ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು. 23 ಆದರೂ ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ, ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿ ಮೊಳೆ ಜಡಿದು ಕೊಂದಿರಿ. 24 ಆತನನ್ನು ದೇವರು ಮರಣದ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಏಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು. 25 ಆತನ ವಿಷಯದಲ್ಲಿ ದಾವೀದನು;,
“ ‘ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವುದನ್ನು ನೋಡುತ್ತಿದ್ದೆನು;
ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ.
26 ಆದಕಾರಣ ನನ್ನ ಹೃದಯವು ಹರ್ಷಿಸಿತು;
ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು,
ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವುದು;
27 ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ,
ನಿನ್ನ ಪವಿತ್ರನಿಗೆ ಕೊಳೆಯಲು ಬಿಡಲಾರೆ.
28 ಜೀವದ ಮಾರ್ಗಗಳನ್ನು ನನಗೆ ತಿಳಿಯಪಡಿಸಿದ್ದೀ;
ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನನ್ನಾಗಮಾಡುವಿ’ ಎಂದು ಹೇಳಿದ್ದಾನೆ.
29 “ಸಹೋದರರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ,, ಅವನು ಮರಣಹೊಂದಿ ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಇದೆ. 30 ಆದಕಾರಣ ಅವನು ಪ್ರವಾದಿಯಾಗಿದ್ದು, ನಿನ್ನ ಸಂತತಿಯವರೊಳಗೆ ಒಬ್ಬನನ್ನು ನಾನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ತನಗೆ ದೇವರು ಆಣೆಯಿಟ್ಟು ಹೇಳಿದ್ದನ್ನು ಬಲ್ಲವನಾಗಿದನು. 31 ಕ್ರಿಸ್ತನ ಪುನರುತ್ಥಾನವನ್ನೇ ಕುರಿತು, ಆತನು ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ, ಆತನ ಶರೀರವು ಕೊಳೆಯುವ ಅವಸ್ಥೆಯನ್ನು ಅನುಭವಿಸುವುದಿಲ್ಲವೆಂತಲೂ ಹೇಳಿದನು. 32 ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. 33 ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು, ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವುದನ್ನು ಸುರಿಸಿದ್ದಾನೆ. 34-35 ದಾವೀದನು ಸ್ವರ್ಗಾರೋಹಣ ಮಾಡಲಿಲ್ಲವಲ್ಲಾ. ತಾನೇ ಹೇಳುವ ಮಾತೇನಂದರೆ,
“ ‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದ ಪೀಠವಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ದೇವರಾದ ಕರ್ತನು ನನ್ನ ಕರ್ತನಿಗೆ ನುಡಿದನು’ ಎಂಬುದೇ.
36 “ಆದುದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ” ಎಂದು ಹೇಳಿದನು.
37 ಅವರು ಇದನ್ನು ಕೇಳಿದಾಗ ಅವರ ಹೃದಯಗಳಲ್ಲಿ ಅಲಗು ನೆಟ್ಟಂತಾಯಿತು. ಅಲ್ಲದೆ ಅವರು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ, “ಸಹೋದರರೇ, ನಾವೇನು ಮಾಡಬೇಕು” ಎಂದು ಕೇಳಲು; 38 ಪೇತ್ರನು ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಲಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ. 39 ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು. 40 ಬೇರೆ ಅನೇಕ ವಿಧವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು, “ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿರಿ” ಎಂದು ಅವರನ್ನು ಎಚ್ಚರಿಸಿದನು. 41 ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನಮಾಡಿಸಿ ಕೊಂಡರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಕೊಂಡರು.
42 ಅವರು ಅಪೊಸ್ತಲರ ಬೋಧನೆಯಲ್ಲಿಯೂ, ಸಹೋದರರೊಂದಿಗೆ ಅನ್ಯೋನ್ಯತೆಯಲ್ಲಿಯೂ, ರೊಟ್ಟಿಮುರಿಯುವುದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.
43 ಎಲ್ಲರೂ ಭಯ ಪರವಶರಾದರು. ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ, ಸೂಚಕಕಾರ್ಯಗಳೂ ಅಪೊಸ್ತಲರ ಮುಖಾಂತರ ನಡೆದವು. 44 ನಂಬಿದವರೆಲ್ಲರು ಒಗ್ಗಟ್ಟಾಗಿದ್ದು, ತಮ್ಮಲ್ಲಿರುವುದೆಲ್ಲವನ್ನೂ ಸಂತೋಷವಾಗಿ ಹಂಚಿಕೊಂಡು ಅನುಭೋಗಿಸುತ್ತಿದ್ದರು. 45 ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ಹಂಚಿಕೊಳ್ಳುತ್ತಾ ಇದ್ದರು. 46 ಅವರು ಪ್ರತಿದಿನ ಏಕಮನಸ್ಸಿನಿಂದ ದೇವಾಲಯದಲ್ಲಿ ಸೇರಿಬರುತ್ತಾ, ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ, ಸರಳ ಸಹೃದಯದಿಂದಲೂ ಸಹಭೋಜನ ಮಾಡುತ್ತಾ ಇದ್ದರು. 47 ಅವರೆಲ್ಲರೂ ದೇವರನ್ನು ಕೊಂಡಾಡುವವರಾಗಿಯೂ, ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ಪ್ರತಿದಿನ ಅವರೊಂದಿಗೆ ಸಭೆಗೆ ಸೇರಿಸುತ್ತಿದ್ದನು.