25
ಯೆರೆಮೀಯನ ಬೋಧನೆಯ ಸಾರಾಂಶ
1 ಯೆಹೂದದ ಎಲ್ಲಾ ಜನರ ಬಗ್ಗೆ ಯೆರೆಮೀಯನಿಗೆ ಈ ಸಂದೇಶವು ಬಂದಿತು. ಈ ಸಂದೇಶವು ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಂದಿತು. ಯೆಹೋಯಾಕೀಮನು ಯೋಷೀಯನ ಮಗ. ಅವನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಅಂದರೆ ಬಾಬಿಲೋನಿನಲ್ಲಿ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೇ ವರ್ಷದಲ್ಲಿ 2 ಯೆರೆಮೀಯನು ಈ ಸಂದೇಶವನ್ನು ಯೆಹೂದದ ಜನರೆಲ್ಲರಿಗೂ ಜೆರುಸಲೇಮಿನ ಜನರೆಲ್ಲರಿಗೂ ಸಾರಿದನು.
3 ಕಳೆದ ಇಪ್ಪತ್ಮೂರು ವರ್ಷಗಳಿಂದ ನಾನು ನಿಮಗೆ ಮತ್ತೆಮತ್ತೆ ಯೆಹೋವನ ಸಂದೇಶವನ್ನು ಕೊಡುತ್ತಿದ್ದೇನೆ. ಅಮೋನನ ಮಗನಾದ ಯೋಷೀಯನು ಯೆಹೂದದ ರಾಜನಾದ ಹದಿಮೂರನೆ ವರ್ಷದಿಂದ ನಾನು ಪ್ರವಾದಿಯಾಗಿದ್ದೇನೆ. ಅಂದಿನಿಂದ ಇಂದಿನವರೆಗೆ ನಾನು ಯೆಹೋವನ ಸಂದೇಶಗಳನ್ನು ನಿಮಗೆ ತಿಳಿಸುತ್ತಾ ಬಂದಿದ್ದೇನೆ. ಆದರೆ ನೀವು ಕಿವಿಗೆ ಹಾಕಿಕೊಂಡಿಲ್ಲ. 4 ಯೆಹೋವನು ತನ್ನ ಸೇವಕರಾದ ಪ್ರವಾದಿಗಳನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದ್ದಾನೆ. ಆದರೆ ನೀವು ಅವರ ಮಾತುಗಳನ್ನು ಕಿವಿಗೆ ಹಾಕಿಕೊಂಡಿಲ್ಲ. ನೀವು ಅವರ ಕಡೆಗೆ ಸ್ವಲ್ಪವೂ ಗಮನಕೊಟ್ಟಿಲ್ಲ.
5 ಆ ಪ್ರವಾದಿಗಳು, “ನಿಮ್ಮ ಜೀವನಕ್ರಮವನ್ನು ಬದಲಾಯಿಸಿಕೊಳ್ಳಿರಿ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿಬಿಡಿ. ನೀವು ಬದಲಾದರೆ, ಯೆಹೋವನು ನಿಮಗೂ ನಿಮ್ಮ ಪೂರ್ವಿಕರಿಗೂ ಬಹಳ ಹಿಂದೆ ಕೊಟ್ಟ ಭೂಮಿಯಲ್ಲಿ ನೀವು ನೆಲೆಸಬಹುದು. ನೀವು ಶಾಶ್ವತವಾಗಿ ವಾಸಿಸಬೇಕೆಂದು ಆತನು ಈ ಭೂಮಿಯನ್ನು ಕೊಟ್ಟಿದ್ದಾನೆ. 6 ಬೇರೆ ದೇವರುಗಳನ್ನು ಅನುಸರಿಸಬೇಡಿರಿ; ಅವುಗಳ ಸೇವೆ ಮಾಡಬೇಡಿರಿ; ಅವುಗಳನ್ನು ಪೂಜಿಸಬೇಡಿರಿ. ಮನುಷ್ಯ ನಿರ್ಮಿತವಾದ ವಿಗ್ರಹಗಳನ್ನು ಪೂಜಿಸಬೇಡಿ. ನೀವು ಪೂಜಿಸಿದರೆ ನಿಮ್ಮ ಮೇಲೆ ನಾನು ಕೋಪಗೊಂಡು ನಿಮಗೆ ಕೇಡುಮಾಡುವೆನು” ಎಂದು ಹೇಳಿದರು.
7 “ನೀವು ನನ್ನ ಮಾತನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ. “ನೀವು ಮನುಷ್ಯನು ಮಾಡಿದ ವಿಗ್ರಹಗಳನ್ನು ಪೂಜಿಸಿದಿರಿ. ಅದೇ ನನಗೆ ಕೋಪ ತಂದಿತು. ಅದು ನಿಮಗೇ ಕೇಡನ್ನು ಉಂಟುಮಾಡಿತು.”
8 ಸರ್ವಶಕ್ತನಾದ ಯೆಹೋವನು ಹೀಗೆಂದನು: “ನೀವು ನನ್ನ ಸಂದೇಶಗಳನ್ನು ಕೇಳಿ ಅದರಂತೆ ನಡೆಯಲಿಲ್ಲ. 9 ಆದ್ದರಿಂದ ನಾನು ಉತ್ತರದ ಎಲ್ಲಾ ಜನಾಂಗಗಳನ್ನು ಕರೆಸುತ್ತೇನೆ.” ಇದು ಯೆಹೋವನ ಸಂದೇಶ. “ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಕೂಡಲೇ ಕರೆಸುವೆನು. ಅವನು ನನ್ನ ಸೇವಕ. ನಾನು ಆ ಜನರನ್ನು ಯೆಹೂದ ದೇಶದ ವಿರುದ್ಧವಾಗಿಯೂ ಯೆಹೂದ್ಯರ ವಿರುದ್ಧವಾಗಿಯೂ ತರುತ್ತೇನೆ. ನಾನು ನಿಮ್ಮ ಸುತ್ತಮುತ್ತಲಿನಲ್ಲಿದ್ದ ಜನಾಂಗಗಳ ವಿರುದ್ಧವಾಗಿಯೂ ಅವರನ್ನು ಕರೆತರುವೆನು. ನಾನು ಆ ದೇಶಗಳನ್ನೆಲ್ಲ ನಾಶಮಾಡುವೆನು. ನಾನು ಆ ಭೂಮಿಗಳನ್ನು ಶಾಶ್ವತವಾಗಿ ಬರಿದಾದ ಮರುಭೂಮಿಗಳನ್ನಾಗಿ ಮಾಡುವೆನು. ಜನರು ಆ ದೇಶಗಳನ್ನು ನೋಡಿ ಅವು ಹಾಳಾಗಿರುವುದನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು. 10 ಆ ಸ್ಥಳಗಳಲ್ಲಿ ನಾನು ಸಂತೋಷದ ಮತ್ತು ಸಂಭ್ರಮದ ಧ್ವನಿಗಳು ಕೇಳಿಬರದಂತೆ ಮಾಡುವೆನು. ವಧುವರರ ಸಂತೋಷದ ಧ್ವನಿಗಳು ಇನ್ನು ಮೇಲೆ ಕೇಳಿಬರುವದಿಲ್ಲ. ನಾನು ಬೀಸುವಕಲ್ಲಿನ ಸದ್ದನ್ನು ತೆಗೆದುಕೊಳ್ಳುವೆನು. ನಾನು ದೀಪದ ಬೆಳಕನ್ನು ತೆಗೆದುಕೊಳ್ಳುವೆನು. 11 ಆ ಇಡೀ ಪ್ರದೇಶವು ಒಂದು ಮರುಭೂಮಿಯಾಗುವುದು. ಆ ಜನಾಂಗಗಳೆಲ್ಲ ಎಪ್ಪತ್ತು ವರ್ಷಗಳವರೆಗೆ ಬಾಬಿಲೋನಿನ ರಾಜನ ಗುಲಾಮರಾಗುವರು.
12 “ಆದರೆ ಎಪ್ಪತ್ತು ವರ್ಷಗಳಾದ ಮೇಲೆ ನಾನು ಬಾಬಿಲೋನಿನ ರಾಜನನ್ನೂ ಜನರನ್ನೂ ದಂಡಿಸುವೆನು.” ಇದು ಯೆಹೋವನಿಂದ ಬಂದ ಸಂದೇಶ. “ಅವರ ಪಾಪಗಳಿಗಾಗಿ ನಾನು ಬಾಬಿಲೋನ್ ದೇಶವನ್ನು ದಂಡಿಸುವೆನು. ನಾನು ಶಾಶ್ವತವಾಗಿ ಆ ಭೂಮಿಯನ್ನು ಮರುಭೂಮಿಯನ್ನಾಗಿ ಮಾಡುವೆನು. 13 ಬಾಬಿಲೋನಿಗೆ ಅನೇಕ ಕೇಡುಗಳು ಬರುವವೆಂದು ನಾನು ಹೇಳಿದ್ದೇನೆ. ಅದೆಲ್ಲ ನಡೆಯುವುದು. ಯೆರೆಮೀಯನು ಆ ಅನ್ಯಜನಾಂಗಗಳ ಬಗ್ಗೆ ಬೋಧಿಸಿದ್ದಾನೆ. ಆ ಮೂನ್ಸೂಚನೆಗಳೆಲ್ಲಾ ಈ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. 14 ಹೌದು, ಬಾಬಿಲೋನಿನ ಜನರು ಅನೇಕ ಜನಾಂಗಗಳ ಮತ್ತು ಅನೇಕ ಮಹಾರಾಜರ ಸೇವೆ ಮಾಡಬೇಕಾಗುವುದು. ಅವರು ಮಾಡಲಿರುವ ದುಷ್ಕೃತ್ಯಗಳಿಗೆಲ್ಲ ತಕ್ಕ ಶಿಕ್ಷೆಯನ್ನು ನಾನು ಅವರಿಗೆ ಕೊಡುವೆನು.”
ಜಗತ್ತಿನ ಎಲ್ಲಾ ಜನಾಂಗಗಳ ಬಗ್ಗೆ ನ್ಯಾಯನಿರ್ಣಯ
15 ಇಸ್ರೇಲಿನ ದೇವರಾದ ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಈ ಪಾನಪಾತ್ರೆಯನ್ನು ನನ್ನ ಕೈಯಿಂದ ತೆಗೆದುಕೋ. ಇದು ಕೋಪದ ದ್ರಾಕ್ಷಾರಸ. ನಾನು ನಿನ್ನನ್ನು ವಿವಿಧ ಜನಾಂಗಗಳಲ್ಲಿಗೆ ಕಳುಹಿಸುತ್ತಿದ್ದೇನೆ. ಆ ಜನಾಂಗಗಳಿಗೆಲ್ಲಾ ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಸು. 16 ಅವರು ಈ ದ್ರಾಕ್ಷಾರಸವನ್ನು ಕುಡಿಯುವರು. ಆಮೇಲೆ ಅವರು ವಾಂತಿ ಮಾಡಿಕೊಳ್ಳುವರು ಮತ್ತು ಹುಚ್ಚರಂತೆ ವರ್ತಿಸುವರು. ನಾನು ಬೇಗನೆ ಅವರ ವಿರುದ್ಧ ಖಡ್ಗವನ್ನು ಕಳುಹಿಸುತ್ತಿರುವುದರಿಂದ ಅವರು ಹೀಗೆ ಮಾಡುವರು.”
17 ನಾನು ಯೆಹೋವನ ಕೈಯಿಂದ ಪಾನಪಾತ್ರೆಯನ್ನು ತೆಗೆದುಕೊಂಡೆನು. ನಾನು ಆ ಜನಾಂಗಗಳ ಬಳಿಗೆ ಹೋದೆನು ಮತ್ತು ಆ ಜನರು ಈ ಪಾನಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. 18 ನಾನು ಈ ದ್ರಾಕ್ಷಾರಸವನ್ನು ಜೆರುಸಲೇಮಿನ ಮತ್ತು ಯೆಹೂದದ ಜನರಿಗೆ ಸುರಿದೆನು. ನಾನು ರಾಜನನ್ನು ಮತ್ತು ಯೆಹೂದದ ನಾಯಕರನ್ನು ಈ ಪಾತ್ರೆಯಲ್ಲಿಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು. ಅವರು ಬರಿದಾದ ಮರುಭೂಮಿಯಂತಾಗಲೆಂದು ಹೀಗೆ ಮಾಡಿದೆನು. ಆ ಸ್ಥಳವು ತುಂಬಾ ಹಾಳಾಗಲಿ, ಜನರು ಅದರ ಬಗ್ಗೆ ಸಿಳ್ಳುಹಾಕಲಿ, ಶಾಪಹಾಕಲಿ ಎಂಬ ಉದ್ದೇಶದಿಂದ ನಾನು ಹಾಗೆ ಮಾಡಿದೆನು. ಹಾಗೆಯೇ ಆಯಿತು. ಯೆಹೂದವು ಈಗ ಹಾಗೆಯೇ ಇದೆ.
19 ಈಜಿಪ್ಟಿನ ರಾಜನಾದ ಫರೋಹನು ಸಹ ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆ. ಅವನ ಅಧಿಕಾರಿಗಳೂ ಪ್ರಮುಖ ನಾಯಕರೂ ಅವನ ಎಲ್ಲಾ ಜನರೂ ಯೆಹೋವನ ಕೋಪದ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ.
20 ಎಲ್ಲಾ ಅರಬೀಯರು ಮತ್ತು ಧಿಚ್ ದೇಶದ ಎಲ್ಲಾ ರಾಜರು ಪಾನಪಾತ್ರೆಯಿಂದ ಕುಡಿಯುವಂತೆ ಮಾಡಿದೆ.
ಫಿಲಿಷ್ಟಿಯ ದೇಶದ ಎಲ್ಲಾ ರಾಜರು ಅಂದರೆ ಅಷ್ಕೆಲೋನ್, ಗಾಜಾ, ಎಕ್ರೋನ್ ಮತ್ತು ಅಷ್ಡೋದಿನ ಶೇಷಭಾಗದ ರಾಜರು ಈ ಪಾನಪಾತ್ರೆಯಿಂದ ಕುಡಿಯುವಂತೆ ಮಾಡಿದೆನು.
21 ಆಮೇಲೆ ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು.
22 ತೂರಿನ ಮತ್ತು ಚೀದೋನಿನ ಎಲ್ಲಾ ರಾಜರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ.
ಬಹಳ ದೂರದೇಶದ ರಾಜರು ಸಹ ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. 23 ದೆದಾನ್ಯರು, ತೇಮಾದೇಶದವರು, ಬೂಜ್ ದೇಶದವರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. ತಮ್ಮ ತಲೆಕೂದಲನ್ನು ಕತ್ತರಿಸಿಕೊಳ್ಳುವ ಎಲ್ಲಾ ಜನರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. 24 ಅರಬೀಯರ ಎಲ್ಲಾ ರಾಜರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. ಈ ರಾಜರು ಮರುಭೂಮಿಯಲ್ಲಿ ವಾಸಮಾಡುತ್ತಾರೆ. 25 ನಾನು ಜಿಮ್ರಿಯ ಎಲ್ಲಾ ರಾಜರು, ಏಲಾಮಿನ ಎಲ್ಲಾ ರಾಜರು, ಮೇದ್ಯರ ಎಲ್ಲಾ ರಾಜರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. 26 ಉತ್ತರದಲ್ಲಿ ಸಮೀಪದಲ್ಲಿದ್ದ ಮತ್ತು ದೂರದಲ್ಲಿದ್ದ ಎಲ್ಲಾ ರಾಜರನ್ನು ಈ ಪಾತ್ರೆಯಿಂದ ಒಬ್ಬರಾದ ಮೇಲೊಬ್ಬರು ಕುಡಿಯುವಂತೆ ಮಾಡಿದೆನು. ನಾನು ಭೂಮಿಯ ಮೇಲಿದ್ದ ಎಲ್ಲಾ ರಾಜ್ಯಗಳು ಯೆಹೋವನ ಕೋಪದ ಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. ಆದರೆ ಬಾಬಿಲೋನಿನ ರಾಜನು ಎಲ್ಲಾ ದೇಶಗಳವರು ಕುಡಿದ ತರುವಾಯ ಕುಡಿಯುವನು.
27 “ಯೆರೆಮೀಯನೇ, ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನಾಂಗಗಳಿಗೆ ಹೇಳು: ‘ನನ್ನ ರೋಷದ ಈ ಪಾತ್ರೆಯಿಂದ ಕುಡಿಯಿರಿ, ಕುಡಿದು ಅಮಲೇರಿ ವಾಂತಿಮಾಡಿಕೊಳ್ಳಿ, ಕೆಳಗೆ ಬಿದ್ದು ಮೇಲಕ್ಕೆ ಏಳದಿರಿ, ಏಕೆಂದರೆ ನಾನು ನಿಮ್ಮನ್ನು ಕೊಲ್ಲಲು ಒಂದು ಖಡ್ಗವನ್ನು ಕಳುಹಿಸುತ್ತಿದ್ದೇನೆ.’
28 “ಅವರು ನಿನ್ನ ಕೈಯಿಂದ ಪಾನಪಾತ್ರೆಯನ್ನು ತೆಗೆದುಕೊಳ್ಳಲು ಒಪ್ಪುವದಿಲ್ಲ. ಅವರು ಅದನ್ನು ಕುಡಿಯಲು ಒಪ್ಪುವದಿಲ್ಲ. ಆದರೆ ನೀನು ಅವರಿಗೆ ಹೀಗೆ ಹೇಳು: ‘ನೀವು ಈ ಪಾತ್ರೆಯಿಂದ ಕುಡಿಯಲೇಬೇಕಾಗುವುದೆಂದು ಸರ್ವಶಕ್ತನಾದ ದೇವರು ಹೇಳುತ್ತಾನೆ. 29 ಈಗಾಗಲೆ ನನ್ನ ಹೆಸರುಗೊಂಡಿರುವ ಜೆರುಸಲೇಮ್ ನಗರಕ್ಕೆ ಕೇಡಾಗುವಂತೆ ಮಾಡುತ್ತಿದ್ದೇನೆ. ನಿಮ್ಮನ್ನು ದಂಡನೆಗೆ ಗುರಿ ಮಾಡಲಾಗುವುದಿಲ್ಲವೆಂದು ನೀವು ಯೋಚಿಸುತ್ತಿರಬಹುದು. ಆದರೆ ನಿಮ್ಮ ಯೋಚನೆ ತಪ್ಪು. ನಿಮ್ಮನ್ನು ದಂಡಿಸಲಾಗುವುದು. ಈ ಭೂಮಿಯ ಮೇಲಿನ ಜನರೆಲ್ಲರ ಮೇಲೆ ಆಕ್ರಮಣಮಾಡಲು ನಾನು ಒಂದು ಖಡ್ಗವನ್ನು ಕರೆಯುತ್ತಿದ್ದೇನೆ.’ ” ಇದು ಯೆಹೋವನ ಸಂದೇಶ.
30 “ಯೆರೆಮೀಯನೇ, ನೀನು ಅವರಿಗೆ ಈ ಸಂದೇಶವನ್ನು ಕೊಡು:
‘ಉನ್ನತವಾದ ಮತ್ತು ಪವಿತ್ರವಾದ
ಆಲಯದಿಂದ ಯೆಹೋವನು ಗರ್ಜಿಸುವನು.
ಯೆಹೋವನು ಗಟ್ಟಿಯಾಗಿ ಗರ್ಜಿಸಿ ತನ್ನ ಹುಲ್ಲುಗಾವಲಿನ ಮಂದೆಯನ್ನು ಬೆದರಿಸುವನು.
ದ್ರಾಕ್ಷಾರಸವನ್ನು ತಯಾರಿಸುವಾಗ ದ್ರಾಕ್ಷೆಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭಯಂಕರವಾಗಿ ಕೂಗುವನು.
31 ಆ ಧ್ವನಿಯು ಭೂಲೋಕದ ಎಲ್ಲಾ ಕಡೆಗೂ ಹಬ್ಬುತ್ತದೆ.
ಈ ಧ್ವನಿಯೆಲ್ಲಾ ಏತಕ್ಕೆ?
ಯೆಹೋವನು ಎಲ್ಲಾ ಜನಾಂಗದ ಜನರನ್ನು ದಂಡಿಸುತ್ತಿದ್ದಾನೆ.
ಯೆಹೋವನು ಜನರ ವಿರುದ್ಧ ತನ್ನ ವಾದವನ್ನು ಹೇಳಿದನು.
ಜನರ ಬಗ್ಗೆ ತೀರ್ಪನ್ನು ಕೊಟ್ಟನು.
ಆತನು ದುಷ್ಟರನ್ನು ಖಡ್ಗದಿಂದ ಕೊಲ್ಲುತ್ತಿದ್ದಾನೆ.’ ”
ಈ ಸಂದೇಶವು ಯೆಹೋವನಿಂದ ಬಂದದ್ದು.
32 “ವಿಪತ್ತುಗಳು ಬಹುಬೇಗ
ದೇಶದಿಂದ ದೇಶಕ್ಕೆ ಹರಡುವವು.
ಅವು ಭೂಲೋಕದ ಎಲ್ಲಾ ದೂರದೂರದ ದೇಶಗಳಲ್ಲಿ
ಭಯಂಕರವಾದ ಬಿರುಗಾಳಿಯಂತೆ ಬರುವವು.”
33 ಆ ಜನರ ಮೃತ ಶರೀರಗಳು ದೇಶದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಬಿದ್ದಿರುವವು. ಆ ಸತ್ತಜನರಿಗಾಗಿ ಯಾರೂ ಅಳುವದಿಲ್ಲ. ಯಾರೂ ಅವರ ಶವಗಳನ್ನು ಒಟ್ಟುಗೂಡಿಸಿ ಹೂಳುವದಿಲ್ಲ. ಅವುಗಳು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವವು.
34 ಕುರುಬರೇ, ನೀವು ಕುರಿಗಳಿಗೆ (ಜನಗಳಿಗೆ) ಮುಂದಾಳಾಗಿ ನಡೆಯಬೇಕು.
ಮಹಾನಾಯಕರೇ, ನೀವು ಗೋಳಾಡಲು ಪ್ರಾರಂಭಿಸಿರಿ.
ಕುರಿಗಳ ಮುಂದಾಳುಗಳಾದ ನೀವು ನೋವಿನಿಂದ ನೆಲದ ಮೇಲೆ ಹೊರಳಾಡಿರಿ.
ಏಕೆಂದರೆ ಈಗ ನಿಮ್ಮನ್ನು ವಧಿಸುವ ಕಾಲ ಬಂದಿದೆ.
ನಾನು ನಿಮ್ಮ ಕುರಿಗಳನ್ನು ದಿಕ್ಕಾಪಾಲು ಮಾಡಿಬಿಡುತ್ತೇನೆ. ಅವುಗಳು ಒಡೆದ ಪಾತ್ರೆಯ ಚೂರುಗಳಂತೆ ಚೆಲ್ಲಾಪಿಲ್ಲಿಯಾಗುತ್ತವೆ.
35 ಕುರುಬರಿಗೆ ಅಡಗಿಕೊಳ್ಳಲು ಸ್ಥಳ ಸಿಕ್ಕುವದಿಲ್ಲ.
ಆ ನಾಯಕರುಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕುವದಿಲ್ಲ.
36 ಕುರುಬರ ಕೂಗಾಟ ನನಗೆ ಕೇಳುತ್ತಿದೆ.
ಕುರಿಗಳ ಗೋಳಾಟ ನನಗೆ ಕೇಳಿಬರುತ್ತಿದೆ.
ಯೆಹೋವನು ಅವರ ದೇಶವನ್ನು ನಾಶಮಾಡುತ್ತಿದ್ದಾನೆ.
37 ನೆಮ್ಮದಿಯಿಂದ ಕೂಡಿದ ಆ ಹುಲ್ಲುಗಾವಲುಗಳು ಬರಿದಾದ ಮರುಭೂಮಿಗಳಂತಾಗಿವೆ.
ಏಕೆಂದರೆ ಯೆಹೋವನು ತುಂಬಾ ಕೋಪಗೊಂಡಿದ್ದಾನೆ.
38 ಯೆಹೋವನು, ತನ್ನ ಗುಹೆಯಿಂದ ಹೊರಬರುತ್ತಿರುವ ಭಯಂಕರವಾದ ಸಿಂಹದಂತಿದ್ದಾನೆ.
ಯೆಹೋವನು ಕೋಪಗೊಂಡಿದ್ದಾನೆ.
ಯೆಹೋವನ ಕೋಪವು ಆ ಜನರನ್ನು ಪೀಡಿಸುವುದು.
ಅವರ ದೇಶವು ಬರಿದಾದ ಮರುಭೂಮಿಯಾಗುವುದು.