ಫಿಲಿಪ್ಪಿಯವರಿಗೆ
ಪೌಲನು ಬರೆದ ಪತ್ರಿಕೆ
1
ಕ್ರಿಸ್ತ ಯೇಸುವಿನ ದಾಸರಾದ ಪೌಲ ತಿಮೊಥೆಯರು,
 
ಕ್ರಿಸ್ತ ಯೇಸುವಿನಲ್ಲಿರುವ ಫಿಲಿಪ್ಪಿಯ ದೇವರ ಪರಿಶುದ್ಧರೆಲ್ಲರಿಗೂ, ಅವರೊಂದಿಗಿರುವ ಮೇಲ್ವಿಚಾರಕರಿಗೂ ಸಭಾಸೇವಕರಿಗೂ ಬರೆಯುವ ಪತ್ರ:
 
ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
 
ಕೃತಜ್ಞತಾಸ್ತುತಿ ಮತ್ತು ಪ್ರಾರ್ಥನೆ
ನಾನು ನಿಮ್ಮನ್ನು ನೆನೆಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗೋಸ್ಕರ ಯಾವಾಗಲೂ ಮಾಡುವ ನನ್ನ ಪ್ರತಿಯೊಂದು ಪ್ರಾರ್ಥನೆಯಲ್ಲಿ ಆನಂದದಿಂದಲೇ ಬೇಡಿಕೊಳ್ಳುವವನಾಗಿದ್ದೇನೆ. ಏಕೆಂದರೆ, ನೀವು ಮೊದಲನೆಯ ದಿನದಿಂದ ಇಂದಿನವರೆಗೂ ಸುವಾರ್ತೆಯಲ್ಲಿ ಸಹಭಾಗಿಗಳಾಗಿದ್ದೀರಿ. ಒಳ್ಳೆಯ ಕೆಲಸಗಳನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಕ್ರಿಸ್ತ ಯೇಸುವಿನ ಪುನರಾಗಮನ ದಿನದವರೆಗೆ ಪೂರೈಸುವರು ಎಂಬುದೇ ನನ್ನ ದೃಢ ವಿಶ್ವಾಸವಾಗಿದೆ.
ನಿಮ್ಮೆಲ್ಲರ ವಿಷಯದಲ್ಲಿ ಹೀಗೆ ಯೋಚಿಸುವುದು ನನಗೆ ಸೂಕ್ತವಾಗಿದೆ. ಏಕೆಂದರೆ ನಾನು ನಿಮ್ಮನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ. ನಾನು ಬೇಡಿಗಳಿಂದ ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಸಮರ್ಥಿಸಿ ದೃಢಪಡಿಸುವಾಗಲೂ ನೀವೆಲ್ಲರು ನನ್ನೊಂದಿಗಿರುವ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ. ಕ್ರಿಸ್ತ ಯೇಸುವಿನ ವಾತ್ಸಲ್ಯದಿಂದ ನಿಮ್ಮೆಲ್ಲರಿಗೋಸ್ಕರ ನಾನು ಎಷ್ಟೋ ಹಂಬಲಿಸುತ್ತೇನೆ. ಇದಕ್ಕೆ ದೇವರೇ ಸಾಕ್ಷಿ.
ನಿಮ್ಮ ಪ್ರೀತಿಯು ಹೆಚ್ಚುತ್ತಾ ಜ್ಞಾನದಲ್ಲಿಯೂ ಒಳನೋಟದಲ್ಲಿಯೂ ಬಹು ಹೆಚ್ಚಾಗಿ ಸಮೃದ್ಧಿಯಾಗಲಿ. 10 ಆಗ, ಅತ್ಯುತ್ತಮ ಕಾರ್ಯಗಳನ್ನು ನೀವು ವಿವೇಚಿಸಿಕೊಳ್ಳುವಿರಿ. ಕ್ರಿಸ್ತನ ಪುನರಾಗಮನ ದಿನದವರೆಗೆ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕೆಂತಲೂ 11 ದೇವರ ಮಹಿಮೆ ಹಾಗೂ ಸ್ತೋತ್ರಕ್ಕಾಗಿ ಕ್ರಿಸ್ತ ಯೇಸುವಿನ ಮೂಲಕ ಬರುವ ನೀತಿಯ ಫಲಗಳಿಂದ ತುಂಬಿದವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
ಪೌಲನ ಸೆರೆಯು ಸುವಾರ್ತೆಯ ಪ್ರಗತಿಯು
12 ಪ್ರಿಯರೇ, ನನಗೆ ಸಂಭವಿಸಿದ ಸಂಕಟಗಳು ಸುವಾರ್ತೆಯ ಪ್ರಗತಿಗಾಗಿಯೇ ಅನುಕೂಲವಾಯಿತು ಎಂಬುದನ್ನು ನೀವು ತಿಳಿಯಬೇಕೆಂದು ನಾನು ಅಪೇಕ್ಷಿಸುತ್ತೇನೆ. 13 ಹೇಗೆಂದರೆ, ನಾನು ಸೆರೆಯಲ್ಲಿರುವುದು ಕ್ರಿಸ್ತನ ನಿಮಿತ್ತವೇ ಎಂದು ಇಡೀ ರಾಜಭವನದಲ್ಲಿಯೂ ಮಿಕ್ಕಾದವರೆಲ್ಲರಿಗೂ ಚೆನ್ನಾಗಿ ತಿಳಿದಿದೆ. 14 ನಾನು ಸೆರೆಯಲ್ಲಿರುವುದರಿಂದಲೇ ಕರ್ತ ದೇವರಲ್ಲಿರುವ ಅನೇಕ ಸಹೋದರರು ಭಯವಿಲ್ಲದೆಯೂ ಭರವಸೆಯಿಂದಲೂ ಸುವಾರ್ತೆಯ ವಾಕ್ಯವನ್ನು ಮಾತನಾಡುವುದಕ್ಕೆ ಪ್ರೋತ್ಸಾಹ ಹೊಂದಿದ್ದಾರೆ.
15 ಕೆಲವರು ಅಸೂಯೆಯಿಂದಲೂ ಸ್ಪರ್ಧೆಯ ಮನೋಭಾವನೆಯಿಂದಲೂ ಕ್ರಿಸ್ತನನ್ನು ಸಾರುವುದು ನಿಜ. ಆದರೆ ಇತರರು ಒಳ್ಳೆಯ ಮನೋಭಾವದಿಂದ ಕ್ರಿಸ್ತ ಯೇಸುವನ್ನು ಸಾರುತ್ತಿದ್ದಾರೆ. 16 ಇವರಾದರೋ, ನಾನು ಸುವಾರ್ತೆಗಾಗಿ ನೇಮಕವಾಗಿದ್ದೇವೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ. 17 ಅವರಾದರೋ, ನಾನು ಬೇಡಿಗಳಿಂದ ಸೆರೆಮನೆಯಲ್ಲಿರುವಾಗ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧ ಪಡಿಸದೆ ಪ್ರತಿಸ್ಪರ್ಧೆಗಾಗಿ ಸಾರುತ್ತಾರೆ. 18 ಹೇಗಾದರೇನು? ಕಪಟದಿಂದಾಗಲಿ, ಸತ್ಯದಿಂದಾಗಲಿ ಯಾವ ರೀತಿಯಿಂದಾದರೂ ಕ್ರಿಸ್ತನನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ.
ಹೌದು ಮುಂದೆಯೂ ಸಂತೋಷಿಸುವೆನು. 19 ನಿಮ್ಮ ಪ್ರಾರ್ಥನೆಯಿಂದಲೂ ಕ್ರಿಸ್ತ ಯೇಸು ಕೊಡುವ ಪವಿತ್ರಾತ್ಮರ ಸಹಾಯದಿಂದ ನನಗೆ ಸಂಭವಿಸಿದವುಗಳು ನನ್ನ ಬಿಡುಗಡೆಗಾಗಿಯೇ ಎಂದು ನಾನು ಬಲ್ಲೆನು. 20 ಹೇಗೆಂದರೆ, ನಾನು ಯಾವ ವಿಷಯದಲ್ಲೂ ನಾಚಿಕೆಪಡದೆ ಎಂದಿನಂತೆ ಈಗಲೂ ಪೂರ್ಣ ಧೈರ್ಯದಿಂದಿರುವಂತೆಯೇ ಬದುಕಿದರೂ ಸತ್ತರೂ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂಬುದೇ ನನ್ನ ಬಯಕೆಯೂ ನಿರೀಕ್ಷೆಯೂ ಆಗಿದೆ. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ, 22 ಶರೀರದಲ್ಲಿಯೇ ಬದುಕುವುದು ನನಗೆ ಫಲದಾಯಕವಾದ ಪ್ರಯಾಸವಾಗಿದ್ದರೆ, ನಾನು ಯಾವುದನ್ನು ಆರಿಸಿಕೊಳ್ಳಬೇಕೋ ನನಗೆ ತಿಳಿಯದು. 23 ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ. ಇಲ್ಲಿಂದ ಹೊರಟು ಕ್ರಿಸ್ತನೊಡನೆ ಇರಬೇಕೆಂಬ ಆಶೆಯಿದೆ. ಅದು ಬಹು ಉತ್ತಮವಾಗಿರುವುದು. 24 ಆದರೂ ನಾನು ಶರೀರದಲ್ಲಿಯೇ ಉಳಿದಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ. 25 ನಿಮಗೆ ನಂಬಿಕೆಯಲ್ಲಿ ಅಭಿವೃದ್ಧಿಯೂ ಸಂತೋಷವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರೊಡನೆ ಇರುವೆನೆಂದು ನಿಶ್ಚಯವಾಗಿ ತಿಳಿದಿದ್ದೇನೆ. 26 ಹೀಗೆ ನಾನು ಪುನಃ ನಿಮ್ಮ ಬಳಿಗೆ ಬರುವುದರಿಂದ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ಸಂತೋಷವು ನನ್ನ ನಿಮಿತ್ತವಾಗಿ ಅತ್ಯಧಿಕವಾಗಿರುವುದು.
ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳುವುದು
27 ಏನೇ ಸಂಭವಿಸಿದರೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿ, ದೂರದಲ್ಲಿದ್ದು ನಿಮ್ಮ ವಿಷಯವಾಗಿ ಕೇಳಿದರೂ ಸರಿ, ನೀವು ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗಾಗಿ ಒಂದೇ ಮನಸ್ಸಿನಿಂದ ಒಟ್ಟಿಗೆ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು. 28 ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಿಯೂ ಅಂಜದೆ ಧೈರ್ಯದಿಂದಿರಿ. ನೀವು ಧೈರ್ಯದಿಂದಿರುವುದು, ಅವರ ವಿನಾಶಕ್ಕೂ, ನಿಮ್ಮ ರಕ್ಷಣೆಗೂ ದೇವರಿಂದಾದ ಸೂಚನೆಯಾಗಿದೆ. 29 ನೀವು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದು ಮಾತ್ರವಲ್ಲ, ಅವರಿಗೋಸ್ಕರ ಸಂಕಷ್ಟಗಳನ್ನು ಅನುಭವಿಸುವುದೂ ನಿಮಗೆ ದಾನವಾಗಿ ಕೊಡಲಾಗಿದೆ. 30 ನೀವು ನನ್ನಲ್ಲಿ ಕಂಡು, ಈಗ ನನ್ನಲ್ಲಿರುವುದೆಂದು ಕೇಳುತ್ತಿರುವ ಅದೇ ಹೋರಾಟದ ಅನುಭವವೇ ನಿಮಗೂ ಇದೆ.