20
ಆಶ್ರಯ ಪಟ್ಟಣಗಳು
1 ಯೆಹೋವ ದೇವರು ಯೆಹೋಶುವನಿಗೆ, 2 “ನಾನು ಮೋಶೆಯ ಮುಖಾಂತರ ನಿನಗೆ ಹೇಳಿದ ಆಶ್ರಯದ ಪಟ್ಟಣಗಳನ್ನು ಗೊತ್ತುಮಾಡಿಕೊಳ್ಳುವಂತೆ ನೀನು ಇಸ್ರಾಯೇಲರಿಗೆ ಹೇಳು. 3 ಯಾವನಾದರು ಅರಿಯದೆ ಅಕಸ್ಮಾತ್ತಾಗಿ ಕೈತಪ್ಪಿ ಕೊಂದುಹಾಕಿದರೆ, ಅಂಥವನು ಅಲ್ಲಿಗೆ ಓಡಿಹೋಗಲಿ. ಅವನಿಗೆ ರಕ್ತದ ಸೇಡು ತೀರಿಸುವವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರಲಿ. 4 ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು, ಪಟ್ಟಣದ ಬಾಗಿಲ ದ್ವಾರದಲ್ಲಿ ನಿಂತುಕೊಂಡು, ಆ ಪಟ್ಟಣದ ಹಿರಿಯರ ಮುಂದೆ ತನ್ನ ವ್ಯಾಜ್ಯವನ್ನು ತಿಳಿಸಬೇಕು. ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಳ್ಳಲಿ. ಅವರು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಲಿ. 5 ರಕ್ತದ ಸೇಡು ತೀರಿಸಿಕೊಳ್ಳುವವನು ಅವನನ್ನು ಹಿಂದಟ್ಟಿ ಬಂದರೆ, ಕೊಲೆ ಮಾಡಿದವನನ್ನು ಅವನ ಕೈಗೆ ಒಪ್ಪಿಸಿಕೊಡಬಾರದು. ಏಕೆಂದರೆ ಅವನು ತನ್ನ ನೆರೆಯವನನ್ನು ಅಕಸ್ಮಾತ್ತಾಗಿ ಕೊಂದನು ಮತ್ತು ಪೂರ್ವದಲ್ಲಿ ಅವನ ಬಗ್ಗೆ ದ್ವೇಷ ಇರಲಿಲ್ಲ. 6 ಇದಲ್ಲದೆ ಅವನು ನ್ಯಾಯ ವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆ ದಿವಸಗಳಲ್ಲಿ ಇರುವ ಮಹಾಯಾಜಕನು ಮರಣ ಹೊಂದುವವರೆಗೂ ಆ ಪಟ್ಟಣದಲ್ಲೇ ವಾಸವಾಗಿರಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿ ಹೋದ ತನ್ನ ಪಟ್ಟಣಕ್ಕೂ, ತನ್ನ ಮನೆಗೂ ತಿರುಗಿಬರಬಹುದು,” ಎಂದು ಹೇಳಿದರು.
7 ಅದರಂತೆ ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ, ಎಫ್ರಾಯೀಮನ ಬೆಟ್ಟಗಳಲ್ಲಿರುವ ಶೆಕೆಮನ್ನೂ, ಯೆಹೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯತ್ ಅರ್ಬವನ್ನೂ ನೇಮಿಸಿದರು. 8 ಯೆರಿಕೋವಿನ ಪೂರ್ವದಲ್ಲಿರುವ ಯೊರ್ದನ್ ನದಿ ಆಚೆ ರೂಬೇನನ ಗೋತ್ರಕ್ಕಿರುವ ಸಮ ಭೂಮಿಯ ಅರಣ್ಯದಲ್ಲಿರುವ ಬೆಚೆರನ್ನು ಗಾದನ ಗೋತ್ರಕ್ಕೆ ಗಿಲ್ಯಾದಿನ ರಾಮೋತನ್ನೂ, ಮನಸ್ಸೆಯ ಗೋತ್ರಕ್ಕೆ ಬಾಷಾನಿನಲ್ಲಿರುವ ಗೋಲಾನನ್ನೂ ಕೊಟ್ಟರು. 9 ಕೈತಪ್ಪಿ ಅರಿಯದೆ ಅಕಸ್ಮಾತ್ತಾಗಿ ಕೊಂದವನು ಯಾವನಾದರೂ ನ್ಯಾಯಸಭೆಯ ಮುಂದೆ ಬಂದು ನಿಲ್ಲುವ ತನಕ, ಸೇಡು ತೀರಿಸಿಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿಹೋಗುವುದಕ್ಕೆ ಇಸ್ರಾಯೇಲರೆಲ್ಲರಿಗೂ, ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲಾದ ಪಟ್ಟಣಗಳು ಇವೇ.