೧೫
ಯೇರುಸಲೇಮ್ ಸಭೆಹಿರಿಯರ ಆಲೋಚನಾಸಭೆ
೧ ಬಳಿಕ ಕೆಲವರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು; ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿರುವ ನಿಯಮದ ಪ್ರಕಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು ಎಂಬುದಾಗಿ ಸಹೋದರರಿಗೆ ಉಪದೇಶಮಾಡುತ್ತಿದ್ದರು. ೨ ಅವರೊಂದಿಗೆ ಪೌಲ ಮತ್ತು ಬಾರ್ನಬರಿಗೆ ಚರ್ಚೆಯೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಪೌಲ, ಬಾರ್ನಬರು ಮತ್ತು ತಮ್ಮಲ್ಲಿ ಬೇರೆ ಕೆಲವರು ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ ಹೋಗಬೇಕೆಂದು ಸಹೋದರರು ತೀರ್ಮಾನಿಸಿದರು. ೩ ಆದುದರಿಂದ ಸಭೆಯವರು ಅವರನ್ನು ಸಾಗ ಕಳುಹಿಸಲು, ಅವರು ಪೊಯಿನಿಕೆ ಮತ್ತು ಸಮಾರ್ಯ ಸೀಮೆಗಳನ್ನು ಹಾದು ಹೋಗುತ್ತಿರುವಾಗ ಅನ್ಯಜನರು ಕರ್ತನ ಕಡೆಗೆ ತಿರುಗಿಕೊಂಡ ಸಂಗತಿಯನ್ನು ಅಲ್ಲಿದ್ದ ಸಹೋದರರಿಗೆ ವಿವರವಾಗಿ ಹೇಳಿ ಅವರೆಲ್ಲರನ್ನು ಬಹಳವಾಗಿ ಸಂತೋಷಪಡಿಸಿದರು. ೪ ಅವರು ಯೆರೂಸಲೇಮಿಗೆ ಬಂದ ಮೇಲೆ ಸಭೆಯವರೂ ಅಪೊಸ್ತಲರೂ ಸಭೆಯ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು. ೫ ಆದರೆ ಫರಿಸಾಯ ಮತದವರಲ್ಲಿ ಯೇಸುವನ್ನು ನಂಬಿದ್ದ ಕೆಲವರು ಎದ್ದು; ದೇವರ ಕಡೆಗೆ ತಿರುಗಿಕೊಂಡಿರುವ ಅನ್ಯಜನರಿಗೆ ಸುನ್ನತಿಮಾಡಿಸಬೇಕು, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವುದಕ್ಕೆ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿದರು. ೬ ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಸೇರಿ ಬಂದಾಗ, ಅವರಲ್ಲಿ ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವರಿಗೆ;
೭ ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂದು ದೇವರು ಬಹಳ ದಿನಗಳ ಹಿಂದೆ ನಿಮ್ಮೊಳಗಿಂದ ನನ್ನನ್ನು ಆರಿಸಿಕೊಂಡದ್ದು ನಿಮಗೇ ತಿಳಿದಿದೆ. ೮ ಮತ್ತು ಹೃದಯವನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮವರವನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಸಾಕ್ಷಿಕೊಟ್ಟನು. ೯ ಇದಲ್ಲದೆ ಆತನು ನಮಗೂ, ಅವರಿಗೂ ಏನೂ ಬೇಧಮಾಡದೆ ಅವರ ಹೃದಯಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು. ೧೦ ಹೀಗಿರುವುದರಿಂದ ನಮ್ಮ ಪಿತೃಗಳಾಗಲಿ, ನಾವಾಗಲಿ ಹೊರಲಾಗದ ಭಾರವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಏಕೆ? ೧೧ ಕರ್ತನಾದ ಯೇಸುವಿನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬುದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು ಎಂದು ಹೇಳಿದನು.
೧೨ ಗುಂಪುಸೇರಿದ್ದವರೆಲ್ಲರೂ ಈ ಮಾತುಗಳನ್ನು ಕೇಳಿ ಮೌನವಾಗಿದ್ದು ಬಾರ್ನಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕ ಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ವಿವರಿಸಿದ್ದನ್ನು ಕಿವಿಗೊಟ್ಟು ಕೇಳಿದರು. ೧೩ ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಯಾಕೋಬನು ಆ ಸಂಗತಿಯನ್ನು ಕುರಿತು ಹೇಳಿದ್ದೇನಂದರೆ;
೧೪ ಸಹೋದರರೇ, ನಾನು ಹೇಳುವುದನ್ನು ಕೇಳಿರಿ. ದೇವರು ಮೊದಲು ಅನ್ಯಜನರನ್ನು ಕೃಪಾಕಟಾಕ್ಷದಿಂದ ನೋಡಿ ತನ್ನ ಹೆಸರಿಗಾಗಿ ಅವರೊಳಗಿನಿಂದ ಒಬ್ಬ ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ. ೧೫ ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ. ಹೇಗಂದರೆ;
೧೬ ‘ಇದಾದ ಮೇಲೆ ನಾನು ಹಿಂತಿರುಗಿ ಬಂದು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಪುನಃ ಕಟ್ಟುವೆನು.
ಪಾಳು ಬಿದ್ದದ್ದನ್ನು ಜೀರ್ಣೋದ್ಧಾರಮಾಡಿ
ಸುಭದ್ರವಾಗಿ ನಿಲ್ಲಿಸುವೆನು.
೧೭ ಮನುಷ್ಯರಲ್ಲಿ ಉಳಿದ ಜನರು
ಅಂದರೆ ದೇವಜನರೆನಿಸಿಕೊಳ್ಳುವ ಸಕಲ ಜನಾಂಗಗಳೂ
ಕರ್ತನನ್ನು ಹುಡುಕುವರು ಎಂದು
೧೮ ಅನಾದಿಕಾಲದಿಂದ ಈ ಕಾರ್ಯಗಳನ್ನು ತಿಳಿಯಪಡಿಸುವ ಕರ್ತನು ನುಡಿಯುತ್ತಾನೆ’ ಎಂದು ಬರೆದದೆ.
೧೯ ಹೀಗಿರಲಾಗಿ ನನ್ನ ಅಭಿಪ್ರಾಯ ಏನೆಂದರೆ; ಅನ್ಯಜನರಲ್ಲಿ ದೇವರ ಕಡೆಗೆ ತಿರುಗಿಕೊಳ್ಳುವವರನ್ನು ತೊಂದರೆಪಡಿಸಬಾರದು. ೨೦ ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ಹಾದರವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ರಕ್ತವನ್ನೂ ವಿರ್ಜಿಸಬೇಕೆಂದು ನಾವು ಅವರಿಗೆ ಪತ್ರವನ್ನು ಬರೆಯೋಣ ಎಂದು ತಿರ್ಮಾನಿಸಿದರು. ೨೧ ಏಕೆಂದರೆ ಪುರಾತನಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.
೨೨ ಆಗ ಅಪೊಸ್ತಲರೂ, ಸಭೆಯ ಹಿರಿಯರೂ ಸರ್ವಸಭೆಯ ಅನುಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಮತ್ತು ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವುದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯರಾಗಿದ್ದ ಬಾರ್ಸಬ್ಬನೆನಿಸಿಕೊಳ್ಳುವ ಯೂದನನ್ನೂ, ಸೀಲನನ್ನೂ ಆರಿಸಿಕೊಂಡು, ೨೩ ಅವರ ಕೈಯಲ್ಲಿ ಬರೆದುಕೊಟ್ಟದ್ದೇನಂದರೆ; ಸಹೋದರರೂ, ಅಪೊಸ್ತಲರೂ ಮತ್ತು ಹಿರಿಯರೂ, ಅಂತಿಯೋಕ್ಯ, ಸಿರಿಯ, ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೂ ಮಾಡುವ ವಂದನೆ;
೨೪ ನಮ್ಮೊಳಗಿಂದ ಹೊರಟು ಕೆಲವರು ನಮ್ಮಿಂದ ಯಾವ ಅಪ್ಪಣೆಯನ್ನು ಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬುದನ್ನು ಕೇಳಿದ್ದರಿಂದ, ೨೫ ನಾವು ಕೆಲವರನ್ನು ಆರಿಸಿಕೊಂಡು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾದ, ೨೬ ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿ ಕೊಡುವುದು ಯುಕ್ತವೆಂದು ನಾವೆಲ್ಲರೂ ಒಮ್ಮನಸ್ಸಿನಿಂದ ತೀರ್ಮಾನಿಸಿದೆವು. ೨೭ ಆದುದರಿಂದ ಯೂದನನ್ನೂ, ಸೀಲನನ್ನೂ ಕಳುಹಿಸಿಕೊಡುತ್ತಿದ್ದೇವೆ. ಅವರು ನಾವು ಬರೆದಿರುವ ಈ ಸಂಗತಿಗಳನ್ನು ಬಾಯಿಮಾತಿನಿಂದಲೂ ನಿಮಗೆ ತಿಳಿಸುವರು. ೨೮ ಅವು ಯಾವುವೆಂದರೆ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ಅನೈತಿಕತೆಯನ್ನೂ ವಿಸರ್ಜಿಸುವುದು ಅಗತ್ಯವಾಗಿದೆ. ೨೯ ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.
೩೦ ಹೀಗೆ ಅವರು ಅಪ್ಪಣೆ ತೆಗೆದುಕೊಂಡು ಅಂತಿಯೋಕ್ಯಕ್ಕೆ ಬಂದು ಸಭೆಯನ್ನು ಸೇರಿಸಿ ಆ ಪತ್ರವನ್ನು ಅವರಿಗೆ ಒಪ್ಪಿಸಿದರು. ೩೧ ಅವರು ಓದಿ ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು. ೩೨ ಯೂದನೂ, ಸೀಲನೂ ತಾವೇ ಪ್ರವಾದಿಗಳಾಗಿದ್ದುದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಉತ್ತೇಜಿಸಿ ದೃಢಪಡಿಸಿದರು. ೩೩ ಅಲ್ಲಿ ಕೆಲವು ಕಾಲ ಕಳೆದ ನಂತರ ತಮ್ಮನ್ನು ಕಳುಹಿಸಿದವರ ಬಳಿಗೆ ಪುನಃ ಹೋಗುವುದಕ್ಕೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡರು. ೩೪ (ಆದರೆ ಸೀಲನಿಗೆ ಅಲ್ಲೇ ಇರುವುದು ಒಳ್ಳೆಯದೆಂದು ತೋಚಿತು.) ೩೫ ಆದರೆ ಪೌಲನೂ ಮತ್ತು ಬಾರ್ನಬನೂ ಅಂತಿಯೋಕ್ಯದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಉಪದೇಶಮಾಡುತ್ತಾ ಕರ್ತನ ವಾಕ್ಯವೆಂಬ ಸುವಾರ್ತೆಯನ್ನು ಸಾರುತ್ತಾ ಇದ್ದರು.
ಸುವಾರ್ತೆಯನ್ನು ಸಾರುವುದಕ್ಕೆ ಪೌಲನು ಮಾಡಿದ ಎರಡನೆಯ ಪ್ರಯಾಣ (15:36, 18:22)
೩೬ ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ; ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಊರುಗಳಿಗೆ ಪುನಃ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ ಎಂದು ಹೇಳಿದನು. ೩೭ ಅದಕ್ಕೆ ಬಾರ್ನಬನು ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ೩೮ ತಮ್ಮ ಸಂಗಡ ಕರೆದುಕೊಂಡುಹೋಗಬೇಕೆಂದಿದ್ದಾಗ ಪೌಲನು; ನಮ್ಮೊಂದಿಗೆ ಸೇವೆಗೆ ಬಾರದೆ ಪಂಫುಲ್ಯದಲ್ಲಿ ನಮ್ಮನ್ನು ಬಿಟ್ಟುಬಿಟ್ಟವನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ನೆನಸಿದನು. ೩೯ ಈ ವಿಷಯದಲ್ಲಿ ತೀವ್ರವಾದ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿದರು. ಬಾರ್ನಬನು ಮಾರ್ಕನನ್ನು ಕರದುಕೊಂಡು ಸಮುದ್ರ ಮಾರ್ಗವಾಗಿ ಕುಪ್ರದ್ವೀಪಕ್ಕೆ ಹೋದನು. ೪೦ ಪೌಲನು ಸೀಲನನ್ನು ಆರಿಸಿಕೊಂಡು ಸಹೋದರರಿಂದ ಕರ್ತನ ಕೃಪಾಶ್ರಯಕ್ಕೆ ಒಪ್ಪಿಸಲ್ಪಟ್ಟವನಾಗಿ ಅಲ್ಲಿಂದ ೪೧ ಹೊರಟು ಸಿರಿಯ ಮತ್ತು ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ದೃಢಪಡಿಸಿದನು.