69
ಸ್ವರಕ್ಷಣೆ ಮತ್ತು ವೈರಿಶಿಕ್ಷೆಗಾಗಿ ಭಕ್ತನ ವಿಜ್ಞಾಪನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಶೋಶನ್ನೀಮೆಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ.
ಕೀರ್ತ 22; 35; 40; 45
ದೇವರೇ, ರಕ್ಷಿಸು;
ಜಲವು ನನ್ನ ಕುತ್ತಿಗೆಯವರೆಗೂ ಏರಿಬಂದಿದೆ.
ಆಳವಾದ ಕೆಸರಿನಲ್ಲಿ ಕುಸಿಯುತ್ತಿದ್ದೇನೆ; ನೆಲೆ ಸಿಕ್ಕುತ್ತಿಲ್ಲ.
ಜಲರಾಶಿಯೊಳಗೆ ಮುಳುಗುತ್ತಿದ್ದೇನೆ;
ಪ್ರವಾಹವು ನನ್ನನ್ನು ಹೊಡೆದುಕೊಂಡು ಹೋಗುತ್ತಿದೆ.
ಮೊರೆಯಿಟ್ಟು ಬೇಸತ್ತು ಹೋಗಿದ್ದೇನೆ;
ಗಂಟಲು ಒಣಗಿಹೋಯಿತು. ನನ್ನ ದೇವರನ್ನು ನಿರೀಕ್ಷಿಸುತ್ತಾ ಕಣ್ಣುಗಳು ಕ್ಷೀಣಿಸುತ್ತವೆ.
ನಿಷ್ಕಾರಣ ದ್ವೇಷಿಗಳು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ;
ನಿರಾಕಾರಣವಾಗಿ ನನ್ನನ್ನು ಮುಗಿಸಿಬಿಡಬೇಕೆಂದಿರುವ ವೈರಿಗಳು ಬಲಿಷ್ಠರಾಗಿದ್ದಾರೆ.
ನಾನು ಅಪಹರಿಸದಿದ್ದರೂ ನನ್ನಿಂದ ದಂಡ ತೆಗೆದುಕೊಂಡರಲ್ಲಾ.
ದೇವರೇ, ನನ್ನ ಮೂರ್ಖತನವು ನಿನಗೆ ಗೊತ್ತು;
ನನ್ನ ಅಪರಾಧಗಳು ನಿನಗೆ ಮರೆಯಾಗಿಲ್ಲ.
ಸೇನಾಧೀಶ್ವರನೇ, ಯೆಹೋವನೇ,
ನಿನ್ನನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ;
ಇಸ್ರಾಯೇಲರ ದೇವರೇ, ನಿನ್ನ ದರ್ಶನವನ್ನು ಬಯಸುವವರು
ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
ನಿನಗೋಸ್ಕರವಾಗಿ ನಿಂದೆಗೆ ಒಳಗಾದೆನಲ್ಲಾ;
ನಾಚಿಕೆಯು ನನ್ನ ಮುಖವನ್ನು ಕವಿದಿದೆ.
ನನ್ನ ಅಣ್ಣತಮ್ಮಂದಿರಿಗೆ ಅಪರಿಚಿತನಂತಾದೆನು;
ಒಡಹುಟ್ಟಿದವರಿಗೆ ಪರದೇಶಿಯಂತೆ ಇದ್ದೇನೆ.
ನಿನ್ನ ಆಲಯದ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ.
ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬಂದಿವೆ.
10  * 69:10 ಕೆಲವು ಹಸ್ತಪ್ರತಿಗಳಲ್ಲಿ ನಾನು ನನ್ನನ್ನು ಉಪವಾಸದಿಂದ ತಗ್ಗಿಸಿಕೊಂಡಿದ್ದೇನೆ ಎಂದು ಇದೆ.ನಾನು ದುಃಖದಿಂದ ಅತ್ತು ಉಪವಾಸ ಮಾಡಿ ನನ್ನ ಆತ್ಮವನ್ನು ಕುಗ್ಗಿಸಿಕೊಂಡಿದ್ದೇನೆ,
ಪರಿಹಾಸ್ಯಕ್ಕೆ ಕಾರಣವಾಯಿತು.
11 ನಾನು ಗೋಣಿತಟ್ಟು ಕಟ್ಟಿಕೊಂಡದ್ದು,
ಅವರ ಗಾದೆಗೆ ಆಸ್ಪದವಾಯಿತು.
12 ಊರ ಬಾಗಿಲಲ್ಲಿ ಕುಳಿತುಕೊಳ್ಳುವವರ ಆಡು ಮಾತಿಗೆ ಗುರಿಯಾಗಿದ್ದೇನೆ.
ಕುಡುಕರು ನನ್ನ ವಿಷಯವನ್ನು ಹಾಡಿ ಪರಿಹಾಸ್ಯ ಮಾಡುತ್ತಾರೆ.
13 ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ;
ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ,
ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು.
14 ನಾನು ಕೆಸರಿನಲ್ಲಿ ಮುಳುಗಿಹೋಗದಂತೆ ಮೇಲೆತ್ತು;
ವೈರಿಗಳ ಕೈಯೊಳಗಿಂದ ಬಿಡಿಸು;
ಮಹಾಜಲರಾಶಿಯಿಂದ ಎಳೆದುಕೋ.
15 ಪ್ರವಾಹವು ನನ್ನನ್ನು ಬಡಕೊಂಡು ಹೋಗದಿರಲಿ;
ಅಗಾಧವು ನನ್ನನ್ನು ಒಳಗೆ ಎಳೆದುಕೊಳ್ಳದಿರಲಿ;
ಪಾತಾಳವು ನನ್ನನ್ನು ನುಂಗದಿರಲಿ.
16 ಯೆಹೋವನೇ, ನನ್ನ ಮೊರೆಯನ್ನು ಲಾಲಿಸು;
ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ.
ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.
17 ನಿನ್ನ ದಾಸನಿಗೆ ವಿಮುಖನಾಗಬೇಡ,
ಇಕ್ಕಟ್ಟಿನಲ್ಲಿದ್ದೇನೆ, ತಡಮಾಡದೆ ಸಹಾಯಮಾಡು.
18 ಸಮೀಪಿಸಿ ನನ್ನ ಪ್ರಾಣವನ್ನು ವಿಮೋಚಿಸು.
ಶತ್ರು ನಿಮಿತ್ತವಾಗಿ ನನ್ನನ್ನು ರಕ್ಷಿಸು.
19 ನನಗುಂಟಾದ ನಿಂದೆ, ಲಜ್ಜೆ, ಅಪಮಾನ ಇವು ನಿನಗೇ ಗೊತ್ತು;
ನನ್ನ ವಿರೋಧಿಗಳು ನಿನಗೆ ಮರೆಯಾಗಿಲ್ಲವಲ್ಲಾ.
20 ನಿಂದೆಯಿಂದ ನಿರಾಶೆಗೊಂಡು ಕುಂದಿಹೋಗಿದ್ದೇನೆ.
ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ.
ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ.
21 ನನಗೆ ಉಣ್ಣುವುದಕ್ಕೆ ಕಹಿಯಾದ ವಸ್ತುವನ್ನೂ,
ಬಾಯಾರಿದಾಗ, ಹುಳಿ ದ್ರಾಕ್ಷಾರಸವನ್ನೂ ಕೊಟ್ಟರು.
22  69:22 ಕೆಲವು ಹಸ್ತಪ್ರತಿಗಳಲ್ಲಿ ಅವರ ಯಜ್ಞಸಮರ್ಪಿತ ಊಟವು ಅವರ ಸ್ನೇಹಿತರಿಗೆ ಉರುಲಾಗಿರಲಿ.ಅವರ ಸಂಪತ್ತು ಅವರಿಗೆ ಉರುಲಾಗಲಿ;
ನಿಶ್ಚಿಂತರಾಗಿರುವಾಗಲೇ ಅದು ಅವರಿಗೆ ಬೋನಾಗಲಿ.
23 ಅವರ ಕಣ್ಣು ಮೊಬ್ಬಾಗಿ ಕಾಣದೆ ಹೋಗಲಿ;
ಅವರ ನಡುವು ಯಾವಾಗಲೂ ನಡಗುತ್ತಿರಲಿ.
24 ನಿನ್ನ ರೌದ್ರವನ್ನು ಅವರ ಮೇಲೆ ಸುರಿದುಬಿಡು;
ನಿನ್ನ ಕೋಪಾಗ್ನಿಯು ಅವರನ್ನು ದಹಿಸಲಿ.
25 ಅವರ ಪಾಳೆಯವು ಹಾಳುಬೀಳಲಿ;
ಅವರ ನಿವಾಸಗಳು ಜನಶೂನ್ಯವಾಗಲಿ.
26 ನೀನು ಹೊಡೆದವನನ್ನು ಅವರು ಹಿಂಸಿಸುತ್ತಾರೆ;
ನೀನು ಗಾಯಮಾಡಿದವರ ನೋವು ಅವರ ಪರಿಹಾಸ್ಯಕ್ಕೆ ಕಾರಣವಾಗಿದೆ.
27 ಅವರ ಅಪರಾಧಗಳು ಒಂದೊಂದಾಗಿ ಹೆಚ್ಚುತ್ತಾ ಬರಲಿ.
ನಿನ್ನ ನೀತಿಯಲ್ಲಿ ಅವರಿಗೆ ಪಾಲುಕೊಡಬೇಡ.
28 ಜೀವಿತರ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕು,
ಸದ್ಭಕ್ತರ ಹೆಸರಿನ ಸಂಗಡ ಅವರ ಹೆಸರು ಬರೆಯಲ್ಪಡದಿರಲಿ.
29 ದೇವರೇ, ನೊಂದು ಕುಗ್ಗಿದವನಾದ ನನ್ನನ್ನಾದರೋ,
ನಿನ್ನ ರಕ್ಷಣೆಯು ಭದ್ರಸ್ಥಳದಲ್ಲಿರಿಸುವುದು.
30 ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು;
ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು.
31 ಇದು ಯೆಹೋವನಿಗೆ ಕೊಂಬುಗೊರಸುಗಳುಳ್ಳ,
ಎಳೇ ಹೋರಿಗಳ ಯಜ್ಞಕ್ಕಿಂತ ಬಹು ಪ್ರಿಯವಾದದ್ದು.
32 ದೀನರು ಇದನ್ನು ನೋಡಿ ಹರ್ಷಿಸುವರು.
ದೇವದರ್ಶನವನ್ನು ಅಪೇಕ್ಷಿಸುವವರೇ, ನಿಮ್ಮ ಆತ್ಮವು ಉಜ್ಜೀವಿಸಲಿ.
33 ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು;
ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವುದಿಲ್ಲ.
34 ಭೂಮ್ಯಾಕಾಶಗಳೂ, ಸಮುದ್ರಗಳೂ,
ಜಲಚರಗಳೂ ಆತನನ್ನು ಕೊಂಡಾಡಲಿ.
35 ದೇವರು ಚೀಯೋನ್ ಪಟ್ಟಣವನ್ನು ರಕ್ಷಿಸಿ,
ಯೆಹೂದ ದೇಶದ ನಗರಗಳನ್ನು ಕಟ್ಟಿಸುವನು;
ಆತನ ಪ್ರಜೆಗಳು ಅಲ್ಲಿ ವಾಸಮಾಡುತ್ತಾ ಅದನ್ನು ಸ್ವದೇಶವನ್ನಾಗಿ ಮಾಡಿಕೊಳ್ಳುವರು.
36 ಅವರ ಸಂತತಿಗೇ ಅದರ ಹಕ್ಕಿರುವುದು;
ಆತನ ನಾಮವನ್ನು ಪ್ರೀತಿಸುವವರು ಅದರಲ್ಲಿ ವಾಸಿಸುವರು.

*69:10 69:10 ಕೆಲವು ಹಸ್ತಪ್ರತಿಗಳಲ್ಲಿ ನಾನು ನನ್ನನ್ನು ಉಪವಾಸದಿಂದ ತಗ್ಗಿಸಿಕೊಂಡಿದ್ದೇನೆ ಎಂದು ಇದೆ.

69:22 69:22 ಕೆಲವು ಹಸ್ತಪ್ರತಿಗಳಲ್ಲಿ ಅವರ ಯಜ್ಞಸಮರ್ಪಿತ ಊಟವು ಅವರ ಸ್ನೇಹಿತರಿಗೆ ಉರುಲಾಗಿರಲಿ.